ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್‌ಗಳ ಬಂಧನ, 60 ಲಕ್ಷ ಬೆಲೆಯ ಡ್ರಗ್ಸ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.12- ಮಾದಕ ವಸ್ತುಗಳನ್ನು ಮಯನ್ಮಾರ್ ದೇಶದ ಗಡಿಯಿಂದ ಆಮದು ಮಾಡಿಕೊಂಡು ಬೆಂಗಳೂರಿಗೆ ಮಿಕ್ಸರ್‍ಗ್ರೈಂಡರ್ ಬಾಕ್ಸ್‍ಗಳಲ್ಲಿ ಸಾಗಣೆ ಮಾಡಿಕೊಂಡು ಮಾರಲು ಬಂದಿದ್ದ ಮಣಿಪುರದ ಮೂವರು ಡ್ರಗ್ ಪೆಡ್ಲರ್‍ಗಳನ್ನು ಕೆಜಿಹಳ್ಳಿ ಠಾಣೆ ಪೊಲೀಸರು ಬಂಧಿಸಿ 60 ಲಕ್ಷ ರೂ. ಬೆಲೆಯ ಹೆರಾಯಿನ್ ಮತ್ತು ಪಿಲ್ಸ್ ಮಾತ್ರೆಗಳನ್ನು ವಶಡಿಸಿಕೊಂಡಿದ್ದಾರೆ. ಮಣಿಪುರದ ಮೊಹಮ್ಮದ್ ಸಾಜಿದ್‍ಖಾನ್(27), ಮೊಹಮ್ಮದ್ ಅಜಾಜ್(27) ಮತ್ತು ಸಪಮ್ ಸೀತಲ್ ಕುಮಾರ್ ಸಿಂಗ್(25) ಬಂಧಿತರು.

ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುವ ಪೆಡ್ಲರ್‍ಗಳನ್ನು ಪತ್ತೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೆಜಿಹಳ್ಳಿ ಠಾಣೆ ಪೊಲೀಸರು ತಂಡಗಳನ್ನು ಮಾಡಿಕೊಂಡು ಡ್ರಗ್ ಪೆಡ್ಲರ್‍ಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಕಬ್ಬನ್‍ರಸ್ತೆ, ಎಚ್‍ಬಿಆರ್ ಲೇಔಟ್, ಬಿಡಿಎ ಕಾಂಪ್ಲೆಕ್ಸ್ ಹಿಂಭಾಗದ ರಸ್ತೆಯಲ್ಲಿ ಮೂವರು ಸ್ಕೂಟರ್‍ನಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಬಂದಿದಾರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ 10 ಲಕ್ಷ ರೂ. ಬೆಲೆಯ 130 ಗ್ರಾಂ ತೂಕದ ಹೆರಾಯಿನ್, 50 ಲಕ್ಷ ಬೆಲೆಯ ಮಾದಕ ವಸ್ತು ಪಿಲ್ಸ್ ಮಾತ್ರೆಗಳು, 9500 ಹಣ, ನೀಲಿ ಬಣ್ಣದ 14 ಚಿಕ್ಕ ಪ್ಲಾಸ್ಟಿಕ್ ಕವರ್‍ಗಳು, 10 ಪ್ಲಾಸ್ಟಿಕ್ ಸೋಪ್ ಬಾಕ್ಸ್, 170 ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಡಬ್ಬಗಳು, ಕಪ್ಪು ಬಣ್ಣದ 3 ಪ್ಲಾಸ್ಟಿಕ್ ಬ್ಯಾಗ್‍ಗಳು, 4 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾದಕವಸ್ತುಗಳನ್ನು ಮಯನ್ಮಾರ್ ದೇಶದಿಂದ ಬಾರ್ಡರ್ ಬಾರ್ಡರ್ ಮೂಲಕ ಮಣಿಪುರಕ್ಕೆ ತಂದು ಅಲ್ಲಿಂದ ಮಿಕ್ಸರ್ ಗ್ರೈಂಡರ್‍ಗಳ ಬಾಕ್ಸ್‍ಗಳಲ್ಲಿ ಮಾದಕ ವಸ್ತುಗಳನ್ನು ಇಟ್ಟು ಬೆಂಗಳೂರಿಗೆ ತಂದು, ಅವುಗಳನ್ನು ಸೋಪ್ ಬಾಕ್ಸ್‍ಗಳಲ್ಲಿಟ್ಟು ಪ್ಯಾಕಿಂಗ್ ಮಾಡಿ ಮಣಿಪುರ ಭಾಷೆಯಲ್ಲಿ ಕೋಡ್ ವರ್ಡ್‍ಗಳನ್ನು ಬಳಸಿ ಮಾರಾಟ ಮಾಡುತ್ತಿದದ್ದು ವಿಚಾರಣೆಯಿಂದ ತಿಳಿದುಬಂದಿದೆ.

ಪ್ರಕರಣದ ಆರೋಪಿ ಮೊಹಮ್ಮದ್ ಸಾಜೀದ್ ಖಾನ್ ಮತ್ತು ಮೊಹಮ್ಮದ್ ಆಜಾಜ್ ಶಿವಾಜಿನಗರದ ಚಿಕನ್ ಅಂಗಡಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡಿಕೊಂಡು 3ನೇ ಆರೋಪಿ ಸಪಂ ಸೀತಲ್‍ಕುಮಾರ್ ಸಿಂಗ್ ಬಿಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದುದ್ದಾಗಿ ವಿಚಾರಣೆ ವೇಳೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಪೂರ್ವ ವಿಭಾಗದ ಉಪಪೊಲೀಸ್ ಆಯುಕ್ತ ಡಾ.ಶರಣಪ್ಪ ನಿರ್ದೇಶನದಲ್ಲಿ ಎಸಿಪಿ ಜಗದೀಶ್ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಸಂತೋಷ್‍ಕುಮಾರ್ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Facebook Comments