ಸಿಸಿಬಿ ಪೊಲೀಸರ ಭರ್ಜರಿ ಬೇಟೆ, 1 ಕೋಟಿ ಮೌಲ್ಯದ ಡ್ರಗ್ಸ್ ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.27- ಡ್ರಗ್ಸ್ ಜಾಲದ ಮೇಲೆ ಸಿಸಿಬಿ ಪೊಲೀಸರು ಹದ್ದಿನ ಕಣ್ಣಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದು, ಎರಡು ಕಡೆ ದಾಳಿ ನಡೆಸಿ ನೈಜೀರಿಯಾ ದೇಶದ ಇಬ್ಬರು ಹಾಗೂ ಕೇರಳದ 4 ಮಂದಿ ಡ್ರಗ್ಸ್ ಪೆಡ್ಲರ್‍ಗಳು ಸೇರಿ ಆರು ಮಂದಿಯನ್ನು ಬಂಧಿಸಿ ಒಂದು ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು , ಕಾರು ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.

ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬ ನೈಜೀರಿಯಾ ಪ್ರಜೆ ಹಾಗೂ ಕೇರಳ ಮೂಲದ 4 ಮಂದಿ ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಿ 55 ಲಕ್ಷ ರೂ. ಬೆಲೆ ಬಾಳುವ ಮಾದಕ ವಸ್ತುಗಳಾದ ಎಕ್ಸ್‍ಟಸಿ ಎಂಡಿಎಂಎ ಪಿಲ್ಸ್‍ಗಳು, ಎಂಡಿಎಂಎ ಕ್ರಿಸ್ಟಲ್, ಎಲ್‍ಎಸ್‍ಡಿ ಪೇಪರ್ಸ್, ಗಾಂಜಾ, 5 ಮೊಬೈಲ್ , ಒಂದು ಮಾರುತಿ ಎನ್‍ಕ್ರಾಸ್ ಕಾರು, 1 ಬೈಕ್ ಹಾಗೂ ಇತರೆ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಹೊರಮಾವು, ಕಲ್ಕೆರೆ, ಬಂಜಾರ ಲೇ ಔಟ್‍ನ ಕೃಷ್ಣ ಲೇ ಔಟ್ 2ನೆ ಕ್ರಾಸ್‍ನ ಮನೆಯೊಂದರ ನೆಲ ಮಾಳಿಗೆಯಲ್ಲಿ ವಿದೇಶಿ ಪ್ರಜೆ ಸೇರಿದಂತೆ ಒಟ್ಟು ಐದು ಮಂದಿ ವಾಸವಾಗಿದ್ದರು. ಇವರೆಲ್ಲಾ ಮಾದಕ ವಸ್ತುಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಾ ಹಣ ಸಂಪಾದನೆ ಮಾಡುತ್ತಿದ್ದರು.

ಈ ಬಗ್ಗೆ ಸಿಸಿಬಿ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಸ್ಥಳದ ಮೇಲೆ ದಾಳಿ ಮಾಡಿ ಅವರೆಲ್ಲರನ್ನೂ ಬಂಧಿಸಿ ಅವರ ಬಳಿಯಿದ್ದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

# ಬಾಗಲೂರು ಪೋಲೀಸ್ ಠಾಣೆ:

ಮತ್ತೊಂದು ಪ್ರಕರಣದಲ್ಲಿ ಬಾಗಲೂರು ಪೋಲೀಸ್ ಠಾಣಾ ವ್ಯಾಪ್ತಿಯ ಯಲಹಂಕ ಐಎಎಫ್ ಪೋಸ್ಟ್, ಶಿವಪುರ ಬಾಲಾಜಿನಗರದ 1ನೆ ಬಿ ಕ್ರಾಸ್‍ನಲ್ಲಿರುವ ಮನೆಯೊಂದರ ನೆಲಮಾಳಿಗೆಯಲ್ಲಿ ನೈಜಿರಿಯಾ ಪ್ರಜೆ ವಾಸವಾಗಿದ್ದು, ಆತ ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದಾನೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಆರೋಪಿಯಿಂದ 50 ಲಕ್ಷ ರೂ. ಬೆಲೆಯ 330 ಗ್ರಾಂ ಕೊಕೇನ್ , 20 ಎಂಡಿಎಂಎ, 45 ಯಾಬಾ ಮತ್ತು 113 ಎಕ್ಸ್‍ಟೆಸಿ ಮಾತ್ರೆಗಳು, ಕೃತ್ಯಕ್ಕೆ ಬಳಸಿದ್ದ ಮೊಬೈಲ್, ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಈತ ಟೂರಿಸ್ಟ್ ವೀಸಾ ಅಡಿ ಭಾರತಕ್ಕೆ ಬಂದು ಈ ದೇಶದ ಕಾನೂನಿಗೆ ಗೌರವ ಕೊಡದೆ, ಪಾಸ್‍ಪೋರ್ಟ್ ಮತ್ತು ವೀಸಾ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರ ಕೃತ್ಯಗಳಲ್ಲಿ ಬಾಗಿಯಾಗಿ ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದನು.

ಈತ ನೈಜೀರಿಯಾ ಮೂಲದ ಮತ್ತೊಬ್ಬ ವ್ಯಕ್ತಿಯಿಂದ ಮಾದಕ ವಸ್ತು ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದನು. ಈ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಕಾಯಿದೆ ಹಾಗೂ ವಿದೇಶಿಯರ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಈ ಕಾರ್ಯಾಚರಣೆಯನ್ನು ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತರಾದ ಗೌತಮ್ ಅವರ ನೇತೃತ್ವದಲ್ಲಿ ಇನ್ಸ್‍ಸ್ಪೆಕ್ಟರ್‍ಗಳಾದ ಅಶೋಕ್, ಲಕ್ಷ್ಮೀಕಾಂತಯ್ಯ ಮತ್ತು ಸಿಬ್ಬಂದಿಗಳ ತಂಡಗಳು ಆರೋಪಿಗಳನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

Facebook Comments