ಮೂವರು ಡ್ರಗ್ ಪೆಡ್ಲರ್‌ಗಳ ಬಂಧನ , 50 ಲಕ್ಷ ಮೌಲ್ಯದ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17- ಬೃಹತ್ ಮಾದಕ ವಸ್ತು ಮಾರಾಟಗಾರ ಜಾಲವನ್ನು ಪತ್ತೆಹಚ್ಚಿರುವ ಸಿಸಿಬಿ ಪೊಲೀಸರು, ವಿಶಾಖಪಟ್ಟಣದಿಂದ ಗಾಂಜಾ ಖರೀದಿಸಿ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಿ 50 ಲಕ್ಷ ರೂ. ಮೌಲ್ಯದ 90 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕಾಡುಗೋಡಿ, ಬೆಳತ್ತೂರು ಕಾಲೋನಿ ನಿವಾಸಿ ಅಜಾಮ್ ಪಾಷ(25), ಮಸ್ತಾನ್ ವಾಲಿ(25) ಮತ್ತು ಹೊಸಕೋಟೆಯ ಮೊಹಮದ್ ಅಬ್ಬಾಸ್(27) ಬಂಧಿತರು. ಬಂಧಿತರಿಂದ 50 ಲಕ್ಷ ರೂ. ಬೆಲೆಯ 90 ಕೆಜಿ ಗಾಂಜಾ, 3 ಮೊಬೈಲ್, ಇನ್ನೇವಾ ಕಾರು, ತೂಕದ ಯಂತ್ರ ವಶಪಡಿಸಿ ಕೊಂಡಿದ್ದಾರೆ.

ಬೆಂಗಳೂರು ನಗರವನ್ನು ಮಾದಕವಸ್ತುಗಳಿಂದ ಮುಕ್ತವಾದ ನಗರವನ್ನಾಗಿಸುವ ಉದ್ದೇಶದಿಂದ ಡ್ರಗ್ಸ್ ಸೇವನೆ, ಅಕ್ರಮ ಸಾಗಾಣಿಕೆ, ಸರಬರಾಜು ಮತ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಬೆಂಗಳೂರು ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದವರು ನಿರಂತರ ಕ್ರಮ ಕೈಗೊಂಡಿದ್ದಾರೆ.

ಈ ತಂಡದವರು ಬೆಂಗಳೂರು ನಗರ ಕಾಡುಗೋಡಿಯ ದೊಡ್ಡ ಬನಹಳ್ಳಿಯ ಸಫಲ್ ಮಾರ್ಕೆಟ್ ಹಿಂಭಾಗ ಇರುವ ವಿಂಧ್ಯಗಿರಿ ಬಿಡಿಎ ಅಪಾರ್ಟ್‍ಮೆಂಟ್ 13ನೇ ಮಹಡಿಯಲ್ಲಿ ವಾಸವಾಗಿದ್ದ ಅಜಾಮ್ ಪಾಷ ಎಂಬುವನ್ನು ತನ್ನಸ ಸಹಚರರಾದ ಮಸ್ತಾನ್ ವಾಲಿ, ಮೊಹಮದ್ ಅಬ್ಬಾಸ್, ಹಪ್ಪು ಜೊತೆ ಸೇರಿಕೊಂಡು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ನೂರಾರು ಕೆಜಿ ಗಾಂಜಾವನ್ನು ಖರೀದಿಸಿ ತನ್ನ ಫ್ಲಾಟ್‍ನಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ.

ದಾಳಿ ವೇಳೆ ತಲೆಮರೆಸಿ ಕೊಂಡಿರುವ ಆರೋಪಿ ಎಚ್‍ಎಎಲ್‍ನ ಹಪ್ಪು ಜೊತೆ ಆರೋಪಿಗಳು ಈಚರ್/ಕ್ಯಾಂಟರ್‍ನಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಹೋಗಿ ಅಲ್ಲಿ ಪ್ರವೀಣ್ ಎಂಬುವನಿಂದ ಗಾಂಜಾವನ್ನು ಖರೀದಿಸಿಕೊಂಡು ತಂದು ತಮ್ಮ ಸಬ್ ಪೆಡ್ಲರ್‍ಗಳ ಮುಖಾಂತರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಹಾಗೂ ಇತರೆ ಕರ್ನಾಟಕದ ಇತರೇ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ತಮಗೆ ಗೊತ್ತಿರುವ ಗಿರಾಕಿಗಳಿಗೆ ಮಾರಾಟ ಮಾಡುತ್ತಾ ಅಕ್ರಮವಾಗಿ ಹಣ ಗಳಿಸಿವಿಲಾಸಿ ಜೀವನ ನಡೆಸುತ್ತಾ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿರುವುದು ತಿಳಿದುಬಂದಿರುತ್ತೆ. ಆರೋಪಿಗಳ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಈ ಕಾರ್ಯಾಚರಣೆಯನ್ನು ಜಂಟಿ ಪೊಲೀಸ್ ಆಯುಕ್ತ ಮತ್ತು ಉಪ ಪೊಲೀಸ್ ಆಯುಕ್ತ ಮಾರ್ಗದರ್ಶನದಲ್ಲಿ, ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಕೆ.ಸಿ.ಗೌತಮ್ ಅವರ ಮುಂದಾಳತ್ವದಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್ ಜಿ.ಲಕ್ಷ್ಮಿಕಾಂತಯ್ಯ ಮತ್ತು ಸಿಬ್ಬಂದಿಗಳ ತಂಡ ಪಾಲ್ಗೊಂಡಿತ್ತು.

Facebook Comments