ನೈಜೀರಿಯಾ ಮೂಲದ ಡ್ರಗ್ ಪ್ಲೆಡ್ಲರ್ಸ್‍ ಬಂಧನ, 65 ಲಕ್ಷ ಮೌಲ್ಯದ ಮಾದಕ ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.17- ಬ್ಯುಸಿನೆಸ್ ಮತ್ತು ಟೂರಿಸ್ಟ್ ವೀಸಾ ಅಡಿ ಭಾರತಕ್ಕೆ ಬಂದು ವೀಸಾ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿ ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ತೊಡಗಿಕೊಂಡಿದ್ದ ನೈಜೀರಿಯಾದ ಇಬ್ಬರು ಡ್ರಗ್ ಪೆಡ್ಲರ್ಸ್‍ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜೋಚುಕ್ವ್ಯು ಮಾರ್ಕ್‍ಮಾರೈಸ್ ಬಟ್ವಾಂಗ್ವಾನ್ (38) ಮತ್ತು ಜೋಸೆಫ್ ನಡುಕ್ವೆ ಒಕಾಫಾರ್ (38) ಬಂಧಿತ ಡ್ರಗ್ಸ್ ಪೆಡ್ಲರ್‍ಗಳು.

ಬಂಧಿತ ಡ್ರಗ್ ಪೆಡ್ಲರ್ಸ್‍ಗಳಿಂದ 65 ಲಕ್ಷ ರೂ. ಬೆಲೆಯ ಮಾದಕ ವಸ್ತುಗಳು, ಹಣ, ಮೊಬೈಲ್‍ಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಂಪಿಗೆಹಳ್ಳಿಪೊಲೀಸ್ ಠಾಣೆ ವ್ಯಾಪ್ತಿಯ ಯಲಹಂಕದ ಜಕ್ಕೂರು ಚೊಕ್ಕನಹಳ್ಳಿಯಲ್ಲಿರುವ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ಬಳಿ ಇರುವ ಕಟ್ಟಡದ ಎರಡನೆ ಮಹಡಿಯಲ್ಲಿ ವಾಸವಾಗಿದ್ದ ಡ್ರಗ್ ಪೆಡ್ಲರ್ ಜೋಸೆಫ್ ಟೂರಿಸ್ಟ್ ವೀಸಾ ಅಡಿ ಭಾರತಕ್ಕೆ ಬಂದು ಭಾರತ ದೇಶದ ಕಾನೂನಿಗೆ ಗೌರವ ಕೊಡದೆ ಪಾಸ್‍ಫೋರ್ಟ್ ಮತ್ತು ವೀಸಾ ನಿಯಮಗಳನ್ನು ಉಲ್ಲಂಘಿಸಿ ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ತೊಡಗಿದ್ದನು.

ಈತ ತನ್ನ ಸಹಚರನಾದ ಹುಸ್ಮಾನ್ ಮಹಮ್ಮದ್ ಅಲಿಯಾಸ್ ಮೂಸಾ ಅಲಿಯಾಸ್ ಇಚ್ಚಿ ಎಂಬುವವನಿಂದ ಮಾದಕ ವಸ್ತುಗಳನ್ನು ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುವ ವೃತ್ತಿಗತ ಆರೋಪಿಯಾಗಿದ್ದಾನೆ.

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಡ್ರಗ್ ಪೆಡ್ಲರ್‍ಗಳ ವಿರುದ್ಧ ಸಮರ ಮುಂದುವರಿಸಿದ್ದು, ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ಈತನನ್ನು ಬಂಧಿಸಿ 15 ಲಕ್ಷ ರೂ. ಬೆಲೆಬಾಳುವ 65 ಗ್ರಾಂ ಕೊಕೈನ್, 50 ಎಕ್ಸ್‍ಟೆಸ್ ಮಾತ್ರೆಗಳು, 56 ಎಲ್‍ಎಸ್‍ಡಿ ಸ್ಟ್ರಿಪ್ಸ್‍ಗಳು, 10 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 2 ಮೊಬೈಲ್ ಫೋನ್‍ಗಳು ಮತ್ತು ಒಂದು ತೂಕದ ಯಂತ್ರ ವಶಪಡಿಸಿಕೊಂಡಿದ್ದಾರೆ.

ಆರೋಪಿ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಕಾಯ್ದೆ ಮತ್ತು ವಿದೇಶಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ. ಅಮೃತಹಳ್ಳಿ: ಮತ್ತೊಂದು ಪ್ರಕರಣದಲ್ಲಿ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ಜಕ್ಕೂರಿನ ನವ್ಯಾ ನಗರದ ಶ್ರೀರಕ್ಷಾ ಮೆಡಿಕಲ್ಸ್ ಹತ್ತಿರ ಹರೀಶ್‍ರೆಡ್ಡಿ ಎಂಬುವವರ ಕಟ್ಟಡದ ಮೂರನೆ ಮಹಡಿಯಲ್ಲಿ ವಾಸವಾಗಿದ್ದ ಡ್ರಗ್ ಪೆಡ್ಲರ್ ಬಗ್ಗೆ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಸಂಗ್ರಹಿಸಿ ಮನೆ ಮೇಲೆ ದಾಳಿ ಮಾಡಿ ಆರೋಪಿ ಜೋಚುಕ್ವ್ಯು ಮಾರ್ಕ್‍ಮಾರೈಸ್ ಬಟ್ವಾಂಗ್ವಾನ್‍ನನ್ನು ಬಂಧಿಸಿದ್ದಾರೆ.

ಈತನಿಂದ 50 ಲಕ್ಷ ರೂ. ಬೆಲೆಬಾಳುವ 500 ಗ್ರಾಂ. ಮಾದಕ ವಸ್ತು ಎಂಡಿಎಂಎ, 91 ಎಕ್ಸೆಟೆಸಿ ಮಾತ್ರೆಗಳು, 56 ಎಲ್‍ಎಸ್‍ಡಿ ಸ್ಟ್ರಿಪ್ಸ್‍ಗಳು, 5 ಸಾವಿರ ಹಣ, 3 ಮೊಬೈಲ್ ಮತ್ತು ಒಂದು ಹೋಂಡಾ ಸಿಟಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈತ ಬ್ಯುಸಿನೆಸ್ ವೀಸಾ ಅಡಿ ಭಾರತಕ್ಕೆ ಬಂದು ವೀಸಾ ನಿಯಮ ಉಲ್ಲಂಘಿಸಿ ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಈತನ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಕೆ.ಸಿ.ಗೌತಮ್ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್‍ಗಳಾದ ಅಶೋಕ್, ಲಕ್ಷ್ಮಿಕಾಂತಯ್ಯ ಮತ್ತು ಸಿಬ್ಬಂದಿ ತಂಡ ಈ ಕಾರ್ಯಾಚರಣೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಮತ್ತು ಜಂಟಿ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.

Facebook Comments