11 ರಾಜ್ಯಗಳಲ್ಲಿ ಸಕ್ರಿಯವಾಗಿದ್ದ ವ್ಯವಸ್ಥಿತ ಡ್ರಗ್ಸ್ ಜಾಲ ಪತ್ತೆ, 20 ಮಂದಿ ಸೆರೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬರ್ನಾಲಾ(ಪಂಜಾಬ್), ಜು.24-ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ಕುಖ್ಯಾತಿ ಪಡೆದಿರುವ ಪಂಜಾಬ್‍ನಲ್ಲಿ ಮತ್ತೊಂದು ಬೃಹತ್ ಡ್ರಗ್ಸ್ ಜಾಲವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬರ್ನಾಲಾ ಪೊಲೀಸರು ನಡೆಸಿದ ಈ ಕಾರ್ಯಾಚರಣೆಯಲ್ಲಿ 11 ರಾಜ್ಯಗಳಲ್ಲಿ ಸಕ್ರಿಯವಾಗಿದ್ದ ವ್ಯವಸ್ಥಿತ ಮಾದಕ ವಸ್ತು ಕಳ್ಳಸಾಗಣೆ ದಂಧೆಯನ್ನು ಪತ್ತೆ ಮಾಡಲಾಗಿದೆ. ಈ ಸಂಬಂದ 20 ಜನರನ್ನು ಬಂಧಿಸಿ 70 ಲಕ್ಷ ರೂ.ಗಳಿಗೂ ಅಧಿಕ ನಗದು ಮತ್ತು 27 ಲಕ್ಷಕ್ಕೂ ಹೆಚ್ಚು ಮೌಲ್ಯದ ಡ್ರಗ್ಸ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಅಂತಾರಾಜ್ಯ ಮಾದಕ ವಸ್ತು ಕಳ್ಳಸಾಗಣೆ ಜಾಲವು ದೇಶದಲ್ಲಿನ 11 ರಾಜ್ಯಗಳು ಮತ್ತು 50ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವ್ಯವಸ್ಥಿತ ಡ್ರಗ್ಸ್ ದಂಧೆ ನಡೆಸುತ್ತಿತ್ತು ಎಂದು ಬರ್ನಾಲಾ ವಿಭಾಗದ ಹಿರಿಯ ಪೊಲೀಸ್ ವರಿóಷ್ಠಾಧಿಕಾರಿ ಸಂದೀಪ್ ಗೋಯೆಲ್ ತಿಳಿಸಿದ್ದಾರೆ.

ಅಂತಾರಾಜ್ಯ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ 20 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 70,03,800 ರೂ. ನಗದು, 27,62,137 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳು ಹಾಗೂ ಐದು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಆರೋಪಿಗಳು 11 ರಾಜ್ಯಗಳು ಮತ್ತು 50 ಜಿಲ್ಲೆಗಳಿಗೆ ನಶೆ ಏರಿಸುವ ಮಾತ್ರೆಗಳು, ಗುಳಿಗೆಗಳು, ಲಸಿಕೆಗಳು, ಮತ್ತು ಸಿರಪ್‍ಗಳನ್ನು ಪೂರೈಸುತ್ತಿತ್ತು. ಬಂಧಿತ 20 ಆರೋಪಿಗಳಲ್ಲಿ 16 ಮಂದಿ ಪಂಜಾಬ್ ರಾಜ್ಯದವರು.

ಉಳಿದವರು ಉತ್ತರಪ್ರದೇಶ, ಹರಿಯಾಣ ಮತ್ತು ದೆಹಲಿಯವರು ಎಂದು ಎಸ್‍ಎಸ್‍ಪಿ ಸಂದೀಪ್ ಗೋಯೆಲ್‍ತಿಳಿಸಿದ್ದಾರೆ. ಆಗ್ರಾ ಗ್ಯಾಂಗ್ ಹೆಸರಿನ ಈ ವ್ಯವಸ್ಥಿತ ತಂಡವು ಪಂಬಾಜ್, ಹರಿಯಾಣ, ಉತ್ತರಪ್ರದೇಶ, ದೆಹಲಿ, ಮಧ್ಯಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಳ ಸೇರಿದಂತೆ 11 ರಾಜ್ಯಗಳಲ್ಲಿ ಸಕ್ರಿಯವಾಗಿ ದಂಧೆ ನಡೆಸುತ್ತಿತ್ತು.

ಔಷಧಿಗಳ ಪೂರೈಕೆ ಸೋಗಿನಲ್ಲಿ ಆಗ್ರಾ, ಅಮೃತ್‍ಸರ್, ದೆಹಲಿ, ಜೈಪುರ್, ಗ್ವಾಲಿಯರ್, ಭೋಪಾಲ್, ಕೊಲ್ಕತಾ ಮೊದಲಾದ ನಗರಗಳಿಗೆ ಡ್ರಗ್ಸ್‍ಗಳನ್ನು ಸರಬರಾಜು ಮಾಡುತ್ತಿತ್ತು.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿಲಾಗಿದ್ದು, ಈ ಜಾಲದ ಕಾರ್ಯವ್ಯಾಪ್ತಿ ಮತ್ತಷ್ಟು ರಾಜ್ಯಗಳಿಗೂ ವಿಸ್ತಾರವಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಜಾಲದ ಸಂಬಂಧ ಇನ್ನಷ್ಟು ಆರೋಪಿಗಳು ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.

Facebook Comments

Sri Raghav

Admin