ಮೂವರು ಡ್ರಗ್ಸ್ ಫೆಡ್ಲರ್‌ಗಳು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.5- ಮತ್ತೆ ಮೂರು ಮಂದಿ ಅಂತಾರಾಜ್ಯ ಡ್ರಗ್ಸ್ ಪೆಡ್ಲರ್‍ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 44 ಲಕ್ಷ ಬೆಲೆಬಾಳುವ 2161 ಗ್ರಾಂ ತೂಕದ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ. ಕೇರಳ ಡ್ರಗ್ಸ್ ಪೆಡ್ಲರ್‍ಗಳಾದ ಎ.ಸುಬ್ರಹ್ಮಣಿ (26), ವಿದುಸ್ (31) ಹಾಗೂ ಶೆಜಿನ್ (21) ಬಂಧಿತ ಆರೋಪಿಗಳು.

ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆಗಿಳಿದ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 2161 ಗ್ರಾಂ ತೂಕದ ಹ್ಯಾಷಿಶ್ ಆಯಿಲ್, 2 ಕೆಜಿ ಗಾಂಜಾ, ಮನೆಯಲ್ಲಿ ಮಾದಕ ದ್ರವ್ಯ ತುಂಬಿಡಲು ಬಳಸಲಾಗುತ್ತಿದ್ದ 105 ಖಾಲಿ ಡಬ್ಬಗಳು, 2 ಮೊಬೈಲ್ ಫೋನ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ಆಂಧ್ರ ಪ್ರದೇಶದ ವೈಜಾಗ್‍ನ ಡ್ರಗ್ಸ್ ಪೆಡ್ಲರ್ಸ್‍ಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದು, ಅವರಿಂದ ಸಗಟು ರೂಪದಲ್ಲಿ ಗಾಂಜಾ, ಹ್ಯಾಷಿಶ್ ಆಯಿಲ್ ಮತ್ತಿತರ ಡ್ರಗ್ಸ್‍ಗಳನ್ನು ಖರೀದಿಸಿ ಬೆಂಗಳೂರಿಗೆ ತಂದು ಅವುಗಳನ್ನು ತಮ್ಮ ಮನೆಯಲ್ಲೇ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಡಬ್ಬಿಗಳಿಗೆ ತುಂಬಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಹ್ಯಾಷಿಶ್ ಆಯಿಲ್ ಮತ್ತು ಗಾಂಜಾ ಮಾರಾಟ ಮಾಡಿ ಬಂದ ಹಣದಿಂದ ಆರೋಪಿಗಳು ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿದುಸ್ ಇಂಗ್ಲೆಂಡ್‍ನ ಬೆಡ್‍ಫೋರ್ಡ್ ಶೈರ್ ಎಂಬಲ್ಲಿ ಎಂಎಸ್‍ಸಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಟರ್‍ನೆಟ್ ಅಪ್ಲಿಕೇಷನ್‍ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿರುತ್ತಾನೆ.

ವೈಜಾಗ್‍ನಿಂದ ಬೆಂಗಳೂರಿನ ಹ್ಯಾಷಿಶ್ ಆಯಿಲ್ ತರಲು ಪ್ಯಾರಾಚೂಟ್ ಕೊಬ್ಬರಿ ಎಣ್ಣೆ ಬಾಟಲ್‍ಗಳನ್ನು ಖರೀದಿಸಿ ಅದರಲ್ಲಿನ ಎಣ್ಣೆಯನ್ನು ಹೊರಗೆ ಚೆಲ್ಲಿ ಪ್ಯಾರಾಚೂಟ್ ಬಾಟಲ್‍ಗಳಲ್ಲಿ ಹ್ಯಾಷಿಶ್ ಆಯಿಲ್ ತುಂಬಿಕೊಂಡು ಬಂದು ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

ಬಂಧಿತರ ವಿರುದ್ಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಸಿಸಿಬಿ ಪೊಲೀಸರು ನಗರದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ ಎನ್ನಲಾದ ಡ್ರಗ್ಸ್ ಮಾಫಿಯಾ ಮಟ್ಟಹಾಕಲು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

Facebook Comments