ತನಿಖೆ ನಡೆಯುತ್ತಿರುವ ಗತಿ ನೋಡಿದರೆ ಡ್ರಗ್ಸ್ ಕೇಸ್‍ಗೆ ಎಳ್ಳು ನೀರು ಫಿಕ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.22- ಸ್ಯಾಂಡಲ್‍ವುಡ್ ಮಾತ್ರವಲ್ಲದೆ ಬಾಲಿವುಡ್‍ಅನ್ನೂ ಬೆಚ್ಚಿ ಬೀಳಿಸಿದ್ದ ಡ್ರಗ್ಸ್ ಪ್ರಕರಣ ಹಳ್ಳ ಹಿಡಿಯಿತೇ..?  ಡ್ರಗ್ಸ್ ಪ್ರಕರಣ ಕುರಿತಂತೆ ಸಿಸಿಬಿ ಪೊಲೀಸರು ನಡೆಸುತ್ತಿರುವ ತನಿಖೆಯ ಹಾದಿಯನ್ನು ನೋಡಿದರೆ ಇಡೀ ಪ್ರಕರಣಕ್ಕೆ ಎಳ್ಳು-ನೀರು ಬಿಡುವಂತೆ ಕಾಣುತ್ತಿದೆ. ಬೆಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಜಾಲದ ಬಗ್ಗೆ ತನಿಖೆ ಕೈಗೊಂಡ ಆರಂಭದಲ್ಲಿ ಸ್ಯಾಂಡಲ್‍ವುಡ್ ಖ್ಯಾತನಾಮರಾಗಿ  ಮಿಂಚುತ್ತಿರುವ ಕೆಲವು ನಾಯಕ ನಟ-ನಟಿಯರು ಹಾಗೂ ಪ್ರತಿಷ್ಠಿತ ರಾಜಕಾರಣಿಗಳ ಮಕ್ಕಳ ಹೆಸರುಗಳು ಡ್ರಗ್ಸ್ ಜಾಲದಲ್ಲಿ ಕೇಳಿಬಂದಿದ್ದವು.

ಆದರೆ, ಸಿಸಿಬಿ ಪೊಲೀಸರು ಬೇರೆ ರಾಜ್ಯದಿಂದ ಬಂದು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದ ಸಂಜನಾ ಮತ್ತು ರಾಗಿಣಿ ಅವರನ್ನು ಮಾತ್ರ ಬಂಧಿಸಿ ಉಳಿದವರನ್ನು ನೆಪಮಾತ್ರಕ್ಕಷ್ಟೇ ಕರೆಸಿ ವಿಚಾರಣೆ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಸಂಜನಾ ಮತ್ತು ರಾಗಿಣಿ ಜತೆಗೆ ಬಂಧನಕ್ಕೊಳಗಾಗಿರುವ ಕೆಲ ಡ್ರಗ್ಸ್ ಪೆಡ್ಲರ್‍ಗಳು ಸ್ಯಾಂಡಲ್‍ವುಡ್‍ನ ಘಟಾನುಘಟಿ ಚಿತ್ರನಟರು ಹಾಗೂ ಪ್ರಮುಖ ರಾಜಕಾರಣಿಗಳ ಹೆಸರುಗಳನ್ನು ಬಹಿರಂಗಪಡಿಸಿದ್ದರು.

ತದನಂತರ ಸಿಸಿಬಿ ಪೊಲೀಸರು ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ನಟ ದಿಗಂತ್, ಐಂದ್ರಿತಾ ರೇ, ನಟ ಯೋಗಿ, ನಿರೂಪಕ ಅಕುಲ್ ಬಾಲಾಜಿ ಸೇರಿದಂತೆ ಕೆಲವರನ್ನು ಕರೆಸಿ ವಿಚಾರಣೆ ನಡೆಸಿದ ನಂತರ ತನಿಖೆಯ ದಿಕ್ಕೇ ಬದಲಾಗತೊಡಗಿತು.  ಈ ನಡುವೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಎಲ್ಲರ ಬಣ್ಣ ಬಯಲು ಮಾಡಿ ಕಳೆದ ಹಲವಾರು ವರ್ಷಗಳಿಂದ ಡ್ರಗ್ಸ್ ನಶೆಯಲ್ಲಿರುವ ಕನ್ನಡ ಚಿತ್ರರಂಗಕ್ಕೆ ಮುಕ್ತಿ ನೀಡುವರು ಎಂದೇ ಎಲ್ಲರೂ ಭಾವಿಸಿದ್ದರು.

ಅಲ್ಲಿಯವರೆಗೂ ಶರವೇಗದಲ್ಲಿ ನಡೆಯುತ್ತಿದ್ದ ಪೊಲೀಸರ ತನಿಖೆ ಈಗ ನಿಧಾನಗತಿಯಲ್ಲಿ ಸಾಗತೊಡಗಿದೆ. ಸಾಮಾಜಿಕ ಕಾರ್ಯಕರ್ತ ಸಂಬರಗಿ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ಸಂಜನಾ, ರಾಗಿಣಿ ಮಾತ್ರವಲ್ಲದೆ ಬೇರೆ ನಟ-ನಟಿಯರು ಡ್ರಗ್ಸ್ ನಶೆಯಲ್ಲಿದ್ದಾರೆ. ಅವರನ್ನು ಬಂಧಿಸಿ ಎಂದು ಪೊಲೀಸರಿಗೆ ಸವಾಲೆಸೆದಿದ್ದರು.

ಆದರೆ, ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಬೆಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಪ್ರಕರಣ ಕುರಿತಂತೆ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಹಾಗೂ ಮತ್ತಿತರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ ಕಳುಹಿಸಿರುವುದನ್ನು ಬಿಟ್ಟರೆ ಮತ್ತಾವುದೇ ಪ್ರಮುಖ ಡ್ರಗ್ಗಿಸ್ಟ್‍ಗಳ ಬಂಧನಕ್ಕೂ ಕ್ರಮ ಕೈಗೊಳ್ಳದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಎಲ್ಲಿ ಹೋದರು? ಡ್ರಗ್ಸ್ ಜಾಲದ ಪ್ರಮುಖ ರೂವಾರಿ ಎನ್ನಲಾದ ಆದಿತ್ಯ ಆಳ್ವ ಎಲ್ಲಿಗೆ ಹೋದರು ಎಂಬುದನ್ನು ಪತ್ತೆಹಚ್ಚಲು ಪೊಲೀಸರಿಗೆ ಇದುವರೆಗೂ ಸಾಧ್ಯವಾಗಿಲ್ಲ. ಅವರ ರೆಸಾರ್ಟ್ ಮಾತ್ರವಲ್ಲದೆ ಮುಂಬೈನಲ್ಲಿರುವ ವಿವೇಕ್ ಒಬೆರಾಯ್ ಅವರ ನಿವಾಸದಲ್ಲೂ ಆಳ್ವನಿಗಾಗಿ ಶೋಧ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಮೊದಲ ಆರೋಪಿ, ಉದ್ಯಮಿ ಶಿವಪ್ರಕಾಶ್ ಇನ್ನೂ ಸಿಕ್ಕಿಲ್ಲ.
ಬೆಂಗಳೂರಿನ ಸಿಸಿಬಿ ಪೊಲೀಸರು ಆದಿತ್ಯ ಆಳ್ವ ಮತ್ತು ಶಿವಪ್ರಕಾಶ್‍ಗಾಗಿ ಇನ್ನೂ ಶೋಧ ನಡೆಸುತ್ತಿದ್ದಾರೆ.  ಮುಂಬೈಗೆ ತೆರಳುತ್ತಿದ್ದ ಖ್ಯಾತ ಡ್ಯಾನ್ಸರ್ ಕಿಶೋರ್ ಶೆಟ್ಟಿಯನ್ನು ಮಂಗಳೂರು ಪೊಲೀಸರು ಬಂಧಿಸಿದ ನಂತರ ಡ್ರಗ್ಸ್ ಪ್ರಕರಣದಲ್ಲಿ ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿಯೊಬ್ಬರ ಹೆಸರು ಕೇಳಿಬಂದಿತ್ತು.

ಮಂಗಳೂರು ಪೊಲೀಸರು ನಿರೂಪಕಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ ಬೆನ್ನಲ್ಲೇ ಕೆಲವು ಪ್ರಭಾವಿ ವ್ಯಕ್ತಿಗಳು ಪೊಲೀಸರ ಮೇಲೆ ಪ್ರಭಾವ ಬೀರಿದ್ದಾರೆ ಎಂಬ ಮಾತುಗಳು ಕೇಳಿಬಂದವು. ತದನಂತರ ಮಂಗಳೂರು ಪೊಲೀಸರು ನಡೆಸುತ್ತಿರುವ ಡ್ರಗ್ಸ್ ಜಾಲದ ತನಿಖೆಯೂ ಸಹ ಮಂದಗತಿಯಲ್ಲಿ ಸಾಗಿದೆ. ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮಂಗಳೂರು ಪೊಲೀಸರು ನಡೆಸುತ್ತಿರುವ ತನಿಖೆಯ ರೀತಿ ನೋಡಿದರೆ ರಾಜಕೀಯ ಒತ್ತಡಕ್ಕೆ ಒಳಗಾಗಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.

ಇನ್ನು ಮುಂದಾದರೂ ಬೆಂಗಳೂರು, ಮಂಗಳೂರು ಪೊಲೀಸರು ಡ್ರಗ್ಸ್ ಜಾಲವನ್ನು ಅತಿ ವೇಗವಾಗಿ ತನಿಖೆ ನಡೆಸಿ ಈ ಪ್ರಕರಣಕ್ಕೆ ಅಂತ್ಯ ಹಾಡಬೇಕಿದೆ.  ರಾಜಕಾರಣಿಗಳು, ಅಧಿಕಾರಿಗಳುಪೊಲೀಸರಿಗೆ ಸಹಕರಿಸಿ ಡ್ರಗ್ಸ್ ಪಿಡುಗನ್ನು ತೊಲಗಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕಾದ ಅವಶ್ಯಕತೆ ಈಗ ಇದೆ.

Facebook Comments