ಡ್ರಗ್ಸ್ ಜಾಲ ಕಡಿವಾಣಕ್ಕೆ ಎನ್‍ಡಿಪಿಎಸ್ ಕಾಯ್ದೆಗೆ ತಿದ್ದುಪಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.18- ಮಾದಕವಸ್ತುಗಳ ಪಿಡುಗನ್ನು ಮಟ್ಟ ಹಾಕಲು ಸಮಗ್ರವಾದ ನೀತಿಯನ್ನು ರೂಪಿಸಲಾಗುತ್ತಿದೆ. ಜೊತೆಗೆ ಕೇಂದ್ರ ಸರ್ಕಾ ರದ ಕಾಯ್ದೆಯಾಗಿರುವ ಎನ್‍ಡಿಪಿಎಸ್ ಆ್ಯಕ್ಟ್‍ನ ನಿಯಮಗಳಿಗೆ ಬದಲಾವಣೆ ತರಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ವಿಧಾನಪರಿಷತ್‍ನಲ್ಲಿ ಬಿಜೆಪಿ ಸದಸ್ಯ ಮಹಂತೇಶ್ ಕವಟಗಿಮಠ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2018ರಲ್ಲಿ 1031, 2019ರಲ್ಲಿ 1661, 2020ರಲ್ಲಿ 4066, 2021ರ ಮಾರ್ಚ್ 10ರ ವೇಳೆವರೆಗೆ 1185 ಪ್ರಕರಣಗಳನ್ನು ದಾಖಲಿಸಲಾಗಿದೆ. ಇವುಗಳಿಗೆ ಸಂಬಂಧಿಸಿದಂತೆ 2018ರಲ್ಲಿ 1452, 2019ರಲ್ಲಿ 2295, 2020ರಲ್ಲಿ 5479, 2021 ಮಾ.10ರವರೆಗೆ 1340 ಆರೋಪಿಗಳನ್ನು ಬಂಧಿಸಲಾಗಿದೆ.

ಇವರಿಂದ ಅಪಾರ ಪ್ರಮಾಣದ ಗಾಂಜಾ, ಬ್ರೌನ್ ಶುಗರ್, ಹಫೀಮ್, ಹೆರಾಯಿನ್, ಹ್ಯಾಶಿಸ್, ಚರಸ್, ಕೊಕೈನ್, ಎಪಿಡ್ರಿನ್, ಎಂಡಿಎಂಎ, ಎಂಡಿಎಸ್, ಎಲ್‍ಎಸ್‍ಡಿ ಸೇರಿದಂತೆ ನಾನಾ ರೀತಿಯಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಲಂನಿಂದ ಹಿಡಿದು ಶ್ರೀಮಂತರ ಬಡಾವಣೆವರೆಗೂ ಮಾದಕ ಜಾಲ ವ್ಯಾಪಿಸಿದೆ. ಶಾಲೆಗಳ ಆವರಣದಲ್ಲಿ ಈ ಜಾಲ ಕಂಡುಬಂದರೆ ಅದಕ್ಕೆ ಆಡಳಿತ ಮಂಡಳಿಯನ್ನು ಹೊಣೆ ಮಾಡಲಾಗುತ್ತಿದೆ. ಸಮಾಜದ ಪಿಡುಗಾಗಿರುವ ಮಾದಕವಸ್ತು ಪಿಡುಗನ್ನು ಮಟ್ಟ ಹಾಕಲು ಸಮಗ್ರ ನೀತಿ ತರಲಾಗುವುದು. ಎನ್‍ಡಿಪಿಎಸ್ ಕಾಯ್ದೆಯ ನಿಯಮಾವಳಿಗೆ ಬದಲಾವಣೆ ತರಲಾಗುವುದು ಎಂದು ಹೇಳಿದರು.

ಬೆಂಗಳೂರಿನಲ್ಲಿರುವ ಹುಕ್ಕಾ ಬಾರ್‍ಗಳನ್ನು ನಿಷೇಧಿಸಲು ಬಿಬಿಎಂಪಿ ಆಯುಕ್ತರ ಜೊತೆ ಪೊಲೀಸ್ ಆಯುಕ್ತರು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

Facebook Comments