ಡ್ರಗ್ಸ್ ತನಿಖೆ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಸ್ಫೋಟಕ ಹೇಳಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.13- ಸ್ಯಾಂಡಲ್‍ವುಡ್‍ಅನ್ನೇ ಬೆಚ್ಚಿಬೀಳಿಸಿರುವ ಡ್ರಗ್ಸ್ ಜಾಲ ಪ್ರಕರಣದಲ್ಲಿ ಮುಂದಿನ ವಾರ ಮಹತ್ವದ ತನಿಖೆ ನಡೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಒಂದು ಹಂತದ ತನಿಖೆ ಮಾತ್ರ ನಡೆದಿದೆ.

ಮುಂದಿನ ವಾರದಿಂದ ಮಹತ್ವದ ತನಿಖೆ ನಡೆಯಲಿದ್ದು, ಯಾರ್ಯಾರು ಈ ಜಾಲದಲ್ಲಿ ಭಾಗಿಯಾಗಿದ್ದಾರೋ ಅವರೆಲ್ಲರ ಹೆಸರುಗಳು ಬಹಿರಂಗಗೊಳ್ಳಲಿವೆ ಎಂಬ ಅಚ್ಚರಿಕೆ ಹೇಳಿಕೆ ನೀಡಿದ್ದಾರೆ. ಈವರೆಗೂ ನಡೆದಿರುವ ತನಿಖೆಗಿಂತ ಮುಂದಿನ ವಾರ ನಡೆಯುವ ತನಿಖೆ ಅತ್ಯಂತ ಮಹತ್ವದ್ದು, ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನಾನು ಸದ್ಯದ ಮಟ್ಟಿಗೆ ಬಹಿರಂಗ ಪಡಿಸುವುದಿಲ್ಲ.

ಏಕೆಂದರೆ ತನಿಖೆ ಪ್ರಗತಿಯಲ್ಲಿರುವುದರಿಂದ ಅದು ಬೇರೆ ರೀತಿಯ ಪರಿಣಾಮ ಬೀರುತ್ತದೆ. ಎಲ್ಲವನ್ನೂ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸುವುದಿಲ್ಲ. ಎಲ್ಲವೂ ನಿಮಗೆ ಗೊತ್ತಾಗಲಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಡ್ರಗ್ಸ್ ಜಾಲ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸಲು ಸಿಸಿಬಿ ಅಧಿಕಾರಿಗಳಿಗೆ ಮುಕ್ತ ಸ್ವಾಂತಂತ್ರ್ಯ ನೀಡಲಾಗಿದೆ. ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿರಲಿ ಯಾವುದಕ್ಕೂ ಬಗ್ಗದೆ ವಿಚಾರಣೆ ನಡೆಸುವಂತೆ ಖುದ್ದು ನಾನೇ ನಿರ್ದೇಶನ ನೀಡಿದ್ದೇನೆ.

ಇದರಲ್ಲಿ ಯಾವ ಪ್ರಭಾವವೂ ಕೆಲಸ ಮಾಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಸ್ಯಾಂಡಲ್‍ವುಡ್‍ನ ಡ್ರಗ್ಸ್ ಜಾಲ ಪ್ರಕರಣ ಮುಂದಿನ ವಾರ ಅತ್ಯಂತ ಮಹತ್ವದ್ದಾಗಲಿದೆ. ಈ ವಾರದಲ್ಲಿ ತನಿಖೆ ಇನ್ನಷ್ಟು ಚುರುಕುಗೊಳ್ಳಲಿದೆ. ಮುಂದೆ ನೀವೇ ಕಾದು ನೋಡಿ ಎಂದು ಬೊಮ್ಮಾಯಿ ಅಚ್ಚರಿ ಮೂಡಿಸಿದರು.

ಈಗಾಗಲೇ ಗಡಿ ಜಿಲ್ಲೆಯಲ್ಲಿರುವ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳೆದ ಸಭೆಯಲ್ಲೇ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ನಿಮ್ಮ ನಿಮ್ಮ ಜಿಲ್ಲಾ ವ್ಯಾಪ್ತಿಗಳಲ್ಲಿ ಇರುವ ಚೆಕ್‍ಪೋಸ್ಟ್‍ಗಳನ್ನು ಬಿಗಿಗೊಳಿಸುವುದು, ಗಡಿ ಠಾಣೆಗಳಲ್ಲಿ ಸಿಬ್ಬಂದಿ ಹೆಚ್ಚಳ ಸೇರಿದಂತೆ ಬಿಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಸಿಸಿಬಿಯನ್ನು ಇನ್ನಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಡ್ರಗ್ಸ್ ಜಾಲ ಸೇರಿದಂತೆ ಬೇರೆ ಬೇರೆ ಪ್ರಕರಣಗಳನ್ನು ಗುಪ್ತಚರ ಇಲಾಖೆ ಸಹಕಾರದೊಂದಿಗೆ ತನಿಖೆ ನಡೆಸಲು ಸೂಚಿಸಿದ್ದೇನೆ. ಎಲ್ಲವೂ ಕೆಲವೇ ದಿನಗಳಲ್ಲಿ ತಾರ್ಕಿಕ ಅಂತ್ಯಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಸಂಚಲನ: ಗೃಹ ಸಚಿವ ಬೊಮ್ಮಾಯಿ ಅವರ ಈ ಹೇಳಿಕೆಯಿಂದ ಸ್ಯಾಂಡಲ್‍ವುಡ್ ಅಲ್ಲದೆ ಈವರೆಗೂ ಡ್ರಗ್ಸ್ ದಂಧೆಯಲ್ಲಿ ಭಾಗಿಯಾದ ರಾಜಕಾರಣಿಗಳು, ಅವರ ಮಕ್ಕಳು, ಉದ್ಯಮಿಗಳು, ರಿಯಲ್‍ಎಸ್ಟೇಟ್ ಕುಳಗಳು ಸೇರಿದಂತೆ ಅನೇಕರಲ್ಲಿ ನಡುಕ ಶುರುವಾಗಿದೆ.

ಈಗಾಗಲೇ ಸಿಸಿಬಿ ಬಂಧನದಲ್ಲಿರುವ ಚಿತ್ರನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ಸಾನಿ, ಪ್ರಮುಖ ಆರೋಪಿಗಳಾದ ರಾಹುಲ್, ರವಿಶಂಕರ್, ವೀರೇನ್ ಖನ್ನಾ, ಪ್ರತೀಕ್‍ಶೆಟ್ಟಿ, ವೈಭವ್ ಜೈನ್ ಸೇರಿದಂತೆ ಅನೇಕರು ತನಿಖೆಯ ವೇಳೆ ಡ್ರಗ್ಸ್ ಜಾಲದಲ್ಲಿ ಇದ್ದವರ ಹೆಸರುಗಳನ್ನು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.

ತಾವು ಎಲ್ಲೆಲ್ಲಿ ಪಾರ್ಟಿಗೆ ಹೋಗುತ್ತಿದ್ದೆವು, ಮಾದಕ ವಸ್ತುಗಳು ಎಲ್ಲಿಂದ ಪೂರೈಕೆಯಾಗುತ್ತಿದ್ದವು, ಇದರ ಹಿಂದೆ ಇರುವ ಮಾಫಿಯಾಗಳು ಸೇರಿದಂತೆ ಇಂಚಿಂಚೂ ಮಾಹಿತಿಯನ್ನು ತನಿಖಾಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದರ ಆಧಾರದ ಮೇಲೆ ಬಸವರಾಜ ಬೊಮ್ಮಾಯಿ ಅವರು ಮುಂದಿನ ವಾರ ಮಹತ್ವದ ತನಿಖೆ ನಡೆಯಲಿದೆ ಎಂದು ಹೇಳಿದ್ದು, ಪ್ರಮುಖರಿಗೆ ನೋಟಿಸ್ ಜಾರಿಯಾಗಲಿದೆ ಎಂಬ ಸುಳಿವನ್ನು ಪರೋಕ್ಷವಾಗಿ ನೀಡಿದ್ದಾರೆ.

Facebook Comments