ಹೊಸ ವರ್ಷಕ್ಕೆ ಕಿಕ್ಕೇರಿಸಲು ತಂದಿದ್ದ 1 ಕೋಟಿ ಮೌಲ್ಯದ ಡ್ರಗ್ಸ್ ವಶ, ನೈಜೀರಿಯ ಪ್ರಜೆಗಳ ಬಂಧನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.24- ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್‍ನ್ನು ಲಂಡನ್‍ನಿಂದ ಆನ್‍ಲೈನ್ ಮೂಲಕ ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ನೈಜೀರಿಯಾದ ಇಬ್ಬರು ಪ್ರಜೆಗಳನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಹಾಗೂ ಹಲಸೂರು ಉಪವಿಭಾಗದ ಅಪರಾಧ ಪತ್ತೆದಳದ ಅಧಿಕಾರಿ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.

ಬಂಧಿತರಿಬ್ಬರು ನೈಜೀರಿಯಾ ಪ್ರಜೆಗಳಾಗಿದ್ದು, ಹುಣಸಮಾರನಹಳ್ಳಿಯಲ್ಲಿ ವಾಸವಿದ್ದ ಮೊದಲನೇ ಆರೋಪಿ ಡಾನ್‍ಚುಕ್ಸ್ ಒಕೇಕೆ ಅಲಿಯಾಸ್ ಟಾಮ್‍ಟಾಮ್ ಅಲಿಯಾಸ್ ಡೊಮೆನ್‍ಕ್ಯೂ (39), ಬಿದರಹಳ್ಳಿ ಕಣ್ಣೂರು ಗ್ರಾಮದಲ್ಲಿ ವಾಸವಿದ್ದ ಸೆಲೆಸ್ಟೈನ್ ಅಂಗೂವಾ ಅಲಿಯಾಸ್ ಒಮೇಮಾ (40) ಅವರನ್ನು ಬಂಧಿಸಲಾಗಿದೆ.

ಈ ಇಬ್ಬರು ಸೂಕ್ತ ಪಾಸ್‍ಪೋರ್ಟ್, ವೀಸಾ ಇಲ್ಲದೆ ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದರು. ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಾರ್ಕ್‍ನೆಟ್ ಮೂಲಕ ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನುಯುನೈಟೆಡ್ ಕಿಂಗ್‍ಡಮ್‍ನ ಲೀಡ್ಸ್‍ನಿಂದ ಪಾರ್ಸಲ್‍ನಿಂದ ತರಿಸಿಕೊಂಡಿದ್ದರು.

ಸಿ.ವಿ.ರಾಮನ್‍ನಗರ, ಬಾಗಮನೆ ಟೆಕ್‍ಪಾರ್ಕ್ ಹಿಂಭಾಗ, ಕೃಷ್ಣಪ್ಪಗಾರ್ಡನ್, ಟೀಸ್ಟಾಲ್ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಆಧರಿಸಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ಮತ್ತು ಹಲಸೂರು ಉಪ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 3300 ಎಂಡಿಎಂ ಮಾತ್ರೆಗಳು, 600 ಗ್ರಾಂ ತೂಕದ ಮತ್ತೇರಿಸುವ ಪೌಡರ್ ಮತ್ತು ಮಾದಕ ವಸ್ತು ಸಾಗಾಣಿಕೆಗೆ ಬಳಸಿದ್ದ ಟೊಯೊಟಾ ಕರೊಲಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 1.07 ಕೋಟಿ ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಎನ್‍ಡಿಪಿಎಸ್ ಆ್ಯಕ್ಟ್, ಫಾರಿನರ್ಸ್ ಆ್ಯಕ್ಟ್ ಸೇರಿದಂತೆ ವಿವಿಧ ಸೆಕ್ಷನ್‍ಗಳ ಅಡಿ ಕೇಸು ದಾಖಲಿಸಲಾಗಿದೆ.

ಆರೋಪಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಅವರು, 40ಸಾವಿರ ರೂ.ಗಳ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

Facebook Comments