32 ಲಕ್ಷ ಬೆಲೆಯ ಮಾದಕ ವಸ್ತು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.28- ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೂರ್ವ ವಿಭಾಗದ ಹಲಸೂರು ಉಪವಿಭಾಗದ ಅಪರಾಧ ಪತ್ತೆ ತಂಡ ಬಂಧಿಸಿ 32 ಲಕ್ಷ ಬೆಲೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ. ಮೂಲತಃ ಕೇರಳ ರಾಜ್ಯದವರಾದ ಬೊಮ್ಮನಹಳ್ಳಿ, ಮಂಗಮ್ಮನಪಾಳ್ಯದ ಮಹಮ್ಮದ್ ಶಾಕೀರ್ (34) ಮತ್ತು ತಾವರೆಕೆರೆ, ಕಾವೇರಿ ಲೇಔಟ್ ವಾಸಿ ಕೃಷ್ಣಕುಮಾರ್ (36) ಬಂಧಿತ ಆರೋಪಿಗಳು.

ಬಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿವಿ ರಾಮನ್ ನಗರ, ಭಾಗಮನೆ ಟೆಕ್‍ಪಾರ್ಕ್ ಬಳಿ ಆರೋಪಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಹಲಸೂರು ಉಪವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.

ಆರೋಪಿಗಳಿಂದ 32 ಲಕ್ಷ ಬೆಲೆಯ ಒಂದು ಲೀಟರ್ ವೀಡ್ ಆಯಿಲ್, 16 ಕೆಜಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ವೋಲ್ಸ್ ವಯಾಗನ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಆಂಧ್ರ ಪ್ರದೇಶದ ವಿಜಯವಾಡದಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ತಂದು ಬೆಂಗಳೂರು ಮತ್ತು ಕೇರಳದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದುದು ವಿಚಾರಣೆ ವೇಳೆ ಗೊತ್ತಾಗಿದೆ. ಹಲಸೂರು ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಅಪರಾಧ ಪತ್ತೆ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Facebook Comments