ಕನ್ನಡ ಕಿರುತೆರೆಯಲ್ಲಿ ಈಗ ಡಬ್ಬಿಂಗ್ ಧಾರಾವಾಹಿಗಳದ್ದೇ ದರ್ಬಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಕಳೆದ ಸುಮಾರು ದಿನಗಳಿಂದ ಸ್ಥಗಿತ ಗೊಂಡಿದ್ದ ಕನ್ನಡ ಸಿನಿಮಾಗಳ ಚಿತ್ರೀಕರಣ ಮುಂದುವರಿಕೆಗೆ ರಾಜ್ಯ ಸರ್ಕಾರ ಷರತ್ತು ಬದ್ಧ ಅನುಮತಿ ಕೊಟ್ಟಿದೆ. ಈಗ ಹೊರಡಿಸಿರುವ ಆದೇಶದ ಪ್ರಕಾರ ಈಗಾಗಲೇ ಪ್ರಾರಂಭವಾಗಿ ಅರ್ಧಕ್ಕೆ ನಿಂತಿರುವ ಸಿನಿಮಾಗಳ ಚಿತ್ರೀಕರಣ ವನ್ನು ಮಾತ್ರ ಮುಂದುವರೆಸಬಹುದು.

ಹೊಸ ಸಿನಿಮಾ ಗಳನ್ನು ಪ್ರಾರಂಭಿಸಲು ಅವಕಾಶವಿಲ್ಲ. ನಿರ್ಮಾಪಕರು ಈಗಾಗಲೇ ಹೂಡಿರುವ ಬಂಡವಾಳಕ್ಕೆ ರಕ್ಷಣೆ ನೀಡುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಚಿತ್ರೋದ್ಯಮಕ್ಕೆ ಚೈತನ್ಯ ಬರಬೇಕಾದರೆ ಚಿತ್ರ ಪ್ರದರ್ಶನ ಪುನರಾರಂಭ ಆಗಬೇಕು. ಆಗ ಮಾತ್ರ ಹಣಕಾಸಿನ ವಹಿವಾಟು ನಡೆಯಲು ಸಾಧ್ಯ.  ಚಿತ್ರೀಕರಣ ಪೂರ್ಣಗೊಂಡರೆ ಸಾಲದು. ಪ್ರದರ್ಶನವೂ ಆಗಬೇಕು. ಆದರೆ ಸರ್ಕಾರದಿಂದ ಚಿತ್ರ ಪ್ರದರ್ಶನಕ್ಕೆ ಸದ್ಯದಲ್ಲೇ ಅವಕಾಶ ದೊರೆಯುವ ಸಾಧ್ಯತೆ ಕಡಿಮೆ.

ಟಿವಿ ಸೀರಿಯಲ್‍ಗಳ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಆದರೆ, 60 ವರ್ಷ ಮೀರಿದ ವಯೋಮಾನದವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಹಾಗಿಲ್ಲ ಎಂದು ನಿರ್ಬಂಧ ಹೇರಲಾಗಿದೆ. ಧಾರಾವಾಹಿ ಕಲಾವಿದರ ಪೈಕಿ 60 ವರ್ಷ ದಾಟಿದ ಕಲಾವಿದರು ಬಹಳ ಜನರಿದ್ದಾರೆ.

ಈ ಆದೇಶದಿಂದ ಅವರ ಬದುಕಿಗೆ ಹೊಡೆತ ಬಿದ್ದಿದೆ. ಈ ನಿರ್ಬಂಧವನ್ನು ತೆಗೆದು ಹಾಕಿ ನಾವು ಸುರಕ್ಷತಾ ಮುನ್ನೆಚ್ಚರಿಕೆಯೊಂದಿಗೆ ಕೆಲಸ ಮಾಡುತ್ತೇವೆ ಎಂದು ಕಲಾವಿದರ ನಿಯೋಗವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.

ಲಾಕ್‍ಡೌನ್ ಅವಧಿಯಲ್ಲಿ ಸಿನಿಮಾ ಮಾತ್ರವಲ್ಲದೆ ಧಾರಾವಾಹಿ ವಲಯ ಕೂಡ ಕೋಟಿಗಟ್ಟಲೆ ನಷ್ಟ ಅನುಭವಿಸಿದೆ.  ಟಿವಿ ಪ್ರೇಕ್ಷಕರಿಗೆ ಉಣ ಬಡಿಸಲು ಧಾರಾವಾಹಿಯ ಹೊಸ ಕಂತುಗಳ ಕೊರತೆ ಆದಾಗ ಹಳೇ ಕಂತುಗಳ ಪುನರಾವರ್ತನೆ ಮಾಡಿ ವಿಫಲ ರಾಗಿದ್ದಾರೆ. ಒಂದೆರಡು ಟಿವಿ ವಾಹಿನಿಗಳು ತಾತ್ಕಾಲಿಕವಾಗಿ ಬಂದ್ ಆಗಿವೆ.

ಈ ಸಂದಿಗ್ಧದಲ್ಲಿ ಡಬ್ಬಿಂಗ್ ಧಾರಾವಾಹಿ ಗಳು ಲಾಭ ಮಾಡಿಕೊಳ್ಳುತ್ತಿವೆ. ದೃಶ್ಯ, ರಾಮಾಯಣ, ಮಹಾಭಾರತ, ರಾಧಾಕೃಷ್ಣ, ಅಲಾದಿನ್ ಮುಂತಾದ ಸುಮಾರು 15 ಪರಭಾಷಾ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿವೆ. ಮಹಾ ಭಾರತ, ರಾಧಾಕೃಷ್ಣ ಮುಂತಾದ ಕೆಲ ಧಾರಾವಾಹಿಗಳನ್ನು ಪ್ರೇಕ್ಷಕರು ಇಷ್ಟಪಟ್ಟು ನೋಡುತ್ತಿದ್ದಾರೆ.

ಟಿಆರ್‍ಪಿ ರೇಟಿಂಗ್ ಏರುತ್ತಿದೆ. ಇದು ಸ್ಥಳೀಯ ಧಾರಾವಾಹಿ ಕಲಾವಿದರು ಹಾಗೂ ನಿರ್ಮಾಪಕ , ನಿರ್ದೇಶಕರ ಪಾಲಿಗೆ ನುಂಗಲಾರದ ತುತ್ತಾಗಿದೆ. ನಾಯಕಿ, ಸತ್ಯಂ ಶಿವಂ ಸುಂದರಂ, ರಾಧಾ ಕಲ್ಯಾಣ, ಬಯಸದೆ ಬಳಿ ಬಂದೆ, ಸುಬ್ಬಲಕ್ಷ್ಮಿ ಸಂಸಾರ, ಮಗಳು ಜಾನಕಿ ಮುಂತಾದ ಮೂಲ ಕನ್ನಡ ಧಾರಾವಾಹಿಗಳಿಗೆ ಪೆಟ್ಟು ಬಿದ್ದಿದೆ. ಹಲವಾರು ರಿಯಾಲಿಟಿ ಶೋಗಳು ಸ್ಥಗಿತಗೊಂಡಿವೆ.

ಸೀರಿಯಲ್‍ಗಳಿಂದ ನಿರ್ಮಾಪಕರಿಗೆ ಆದಾಯ ಬರಬೇಕು ನಿಜ. ಆದರೆ ಅದೊಂದೇ ಏಕ ಮಾತ್ರ ಗುರಿ ಆಗಬಾರದು. ಈ ಉದ್ಯಮವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಸಾವಿರಾರು ಕಲಾವಿದರು, ಕಾರ್ಮಿಕರು, ತಂತ್ರಜ್ಞರ ಹಿತವನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಚಿತ್ರರಂಗಕ್ಕೆ ಈ ಮಾತು ಅನ್ವಯಿಸುತ್ತದೆ.

ಅರ್ಧಕ್ಕೆ ನಿಂತು ಹೋಗಿರುವ ಸಿನಿಮಾಗಳ ಚಿತ್ರೀಕರಣ ಮುಂದುವರಿಕೆ ಹಾಗೂ ಚಿತ್ರೀಕರಣ ನಂತರ ಕೆಲಸಗಳನ್ನು ಮುಂದು ವರೆಸಲು ಈಗ ಅವಕಾಶ ಇದೆ. ಆದರೆ ಸ್ಟಾರ್ ಕಲಾವಿದರು ತಕ್ಷಣ ಚಿತ್ರೀಕರಣಕ್ಕೆ ಹಾಜರಾಗಲು ಸಿದ್ಧವಾಗಿದ್ದಾರೆಯೇ.

ಸಿನಿಮಾ ಚಟುವಟಿಕೆ ಮುಂದುವರೆಯ ಬೇಕು ಎಂಬ ಅಭಿಯಾನದಿಂದ ಅವರೇಕೆ ದೂರ ಉಳಿದರು? ಸೂಪರ್ ಸ್ಟಾರ್ ಅನ್ನಿಸಿ ಕೊಂಡಿರುವ ಕಲಾವಿದರ ಅಭಿನಯದ ಕೆಲವು ಸಿನಿಮಾಗಳ ಸಣ್ಣ ಪುಟ್ಟ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಅದನ್ನು ಆದ್ಯತೆಯ ಮೇಲೆ ಕಲಾವಿದರು ಮಾಡಲು ಸಿದ್ಧರಿದ್ದಾರೆಯೇ? ಈ ಪ್ರಶ್ನೆಗಳಿಗೆ ಕಲಾವಿದರಿಂದ ನೇರ ಹಾಗೂ ಸ್ಪಷ್ಟ ವಿವರಣೆ ದೊರೆತಿಲ್ಲ. ದಿವ್ಯಮೌನಕ್ಕೆ ಶರಣಾಗಿದ್ದಾರೆ.

ಸಿನಿಮಾ ಹಾಗೂ ಸೀರಿಯಲ್ ಚಟುವಟಿಕೆ ಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಸರ್ಕಾರವು ಹಂತ ಹಂತವಾಗಿ ತೆರವುಗೊಳಿ ಸುತ್ತಿರುವುದು ಸ್ವಾಗತಾರ್ಹ. ಸದ್ಯದಲ್ಲೇ ಹೊಸ ಸಿನಿಮಾಗಳ ಚಿತ್ರೀಕರಣಕ್ಕೂ ಅನುಮತಿ ದೊರೆಯಬಹುದು.

ಆದರೆ, ಆಗಲೇ ಹೇಳಿದ ಹಾಗೆ ಸಿನಿಮಾ ಪ್ರದರ್ಶನ ಪುನರಾರಂಭವಾದಾಗ ಮಾತ್ರ ಸಂಪೂರ್ಣ ಸಾರ್ಥಕತೆ. ಈ ದಿಸೆಯಲ್ಲಿ ಚಿತ್ರರಂಗದ ಎಲ್ಲಾ ವಲಯದವರೂ ಸಾಮೂಹಿಕ ಪ್ರಯತ್ನ ಮಾಡುವ ಅಗತ್ಯವಿದೆ.

Facebook Comments