ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿಯೇ ತೀರುತ್ತೇವೆ : ಡಿವಿಎಸ್

ಈ ಸುದ್ದಿಯನ್ನು ಶೇರ್ ಮಾಡಿ

ದಾಸರಹಳ್ಳಿ , ಜ.5- ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿಯೇ ತೀರುತ್ತೇವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ. ಶೆಟ್ಟಿಹಳ್ಳಿಯ ಡಿಫೆನ್ಸ್ ಕಾಲೋನಿಯಲ್ಲಿ ಪೌರತ್ವ ಪರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ಹಾಗೂ ಎನ್‍ಆರ್‍ಸಿಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ.

ವಿರೋಧ ಪಕ್ಷಗಳು ಈ ವಿಚಾರದಲ್ಲಿ ಅನಗತ್ಯ ಗೊಂದಲ ಮೂಡಿಸುತ್ತಿವೆ. ರಾಜ್ಯಾದ್ಯಂತ ಪೌರತ್ವ ಕಾಯ್ದೆಯ ವಾಸ್ತವಾಂಶಗಳನ್ನು ನಾಗರಿಕರಿಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದ್ದು, ಇದರ ಭಾಗವಾಗಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರತಿ ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು ಪೌರತ್ವ ಕಾಯ್ದೆಯನ್ನು ಸರ್ವಾನುಮತದಿಂದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.ಈ ಸಂಬಂಧ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ಎಲ್ಲವೂ ಸಂವಿಧಾನಬದ್ಧವಾಗಿದೆ.

ವಿರೋಧ ಪಕ್ಷಗಳಿಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಲು ವಿಷಯಗಳಿಲ್ಲ ಆದ್ದರಿಂದ ಜನತೆಯಲ್ಲಿ ಗೊಂದಲ ಮೂಡಿಸಿ ಮುಸ್ಲಿಮರನ್ನು ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದರು. ದೇಶದ ಹಿತಾಸಕ್ತಿ ಹಾಗೂ ಪ್ರಗತಿಗೆ ಪೌರತ್ವ ಕಾಯ್ದೆ ಬಹಳ ಮಹತ್ವದ್ದಾಗಿದ್ದು, ಜಾರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಸಂವಿಧಾನದಲ್ಲಿ ಇಸ್ಲಾಂ ಅನ್ನು ನಮ್ಮ ಧರ್ಮ ಎಂದು ಸ್ಪಷ್ಟಪಡಿಸಿರುವ ಸಂಬಂಧ ಮುಸ್ಲಿಮರನ್ನು ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರೆಂದು ಪರಿಗಣಿಸಲಾಗುವುದಿಲ್ಲ.

ಆದ್ದರಿಂದ ಈ ಮೂರು ದೇಶಗಳಲ್ಲಿನ ಹಿಂದೂ, ಸಿಖ್ಖರು ಸೇರಿ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಆಶ್ರಯ ಒದಗಿಸಲು ಪೌರತ್ವ ನೀಡುವ ಅವಕಾಶವನ್ನು ಕಾಯ್ದೆಯಲ್ಲಿ ನೀಡಲಾಗಿದೆಯೇ ಹೊರತು ಯಾವುದೇ ಮುಸ್ಲಿಂ ವ್ಯಕ್ತಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದರೆ ಮುಕ್ತ ಮನಸ್ಸಿನಿಂದ ಪರಿಗಣಿಸಲಾಗುವುದು ಎಂದರು.
ಮಾಜಿ ಶಾಸಕ ಮುನಿರಾಜು, ಮಂಡಲದ ಅಧ್ಯಕ್ಷ ಎನ್.ಲೋಕೇಶ್ ಸದಾನಂದ ಗೌಡರಿಗೆ ಸಾಥ್ ನೀಡಿದರು.

Facebook Comments