ಮಾರ್ಚ್ ವೇಳೆಗೆ ರಾಜ್ಯದಲ್ಲಿ 1000 ಜನೌಷಧಿ ಕೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.6- ಮುಂದಿನ ಮಾರ್ಚ್ ತಿಂಗಳ ನಂತರ ಕರ್ನಾಟಕದಲ್ಲಿ ಒಂದು ಸಾವಿರ ಜನೌಷಧಿ ಕೇಂದ್ರ ಸ್ಥಾಪನೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ವತಿಯಿಂದ ಕೇಂದ್ರ ಸರ್ಕಾರದ ಯೋಜನೆಯಡಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ವರ್ಚುವಲ್ ಉದ್ಘಾಟನೆ(ಹುಬ್ಬಳ್ಳಿಯಲ್ಲಿ ಪ್ರಾಂತೀಯ ಕಚೇರಿ) ನೆರವೇರಿಸಿ ಅವರು ಮಾತನಾಡಿದರು.

ಸಾಧ್ಯವಿರುವ ಸಹಕಾರಸಂಘಗಳಲ್ಲಿ ಜನೌಷಧಿ ಔಟ್‍ಲೆಟ್(ಮಳಿಗೆ) ಗಳನ್ನು ಸ್ಥಾಪನೆ ಮಾಡಲು ಸಲಹೆ ಮಾಡಿದರು. ದೇಶದಲ್ಲಿ 6,635 ಜನೌಷಧಿ ಮಳಿಗೆಗಳಿವೆ. ರಾಜ್ಯದಲ್ಲಿ 715 ಮಳಿಗೆಗಳಿದ್ದು ಇಂದು ಮತ್ತೊಂದು ಮಳಿಗೆ ಉದ್ಘಾಟನೆ ಮಾಡಲಾಗಿದೆ ಎಂದರು.  ಬೆಂಗಳೂರಿನಲ್ಲಿ ಜನೌಷಧಿ ಮಳಿಗೆ ತೆರೆಯಲು 300 ಅರ್ಜಿಗಳು ಸಲ್ಲಿಕೆಯಾಗಿವೆ. ಪ್ರತಿಯೊಬ್ಬ ಬಡವರಿಗೂ ಅಗ್ಗದ ದರದಲ್ಲಿ ಗ್ರಾಮೀಣ ಸಹಕಾರ ಸಂಘದ ಮೂಲಕ ಔಷಧಿ ದೊರೆಯಬೇಕೆಂಬುದು ಸರ್ಕಾರದ ಉದ್ದೇಶ ಎಂದರು.

ಆಯುಷ್ಮಾನ್ ಭಾರತ್ ವಿಮಾ ಯೋಜನೆ ಮೂಲಕ ಹತ್ತು ಕೋಟಿ ಜನರಿಗೆ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ.ನಂತೆ ಚಿಕಿತ್ಸೆಗೆ ಅವಕಾಶ ನೀಡಲಾಗುತ್ತಿದೆ. 10 ಲಕ್ಷ ಜನರಲ್ಲಿ ಐದೂವರೆ ಸಾವಿರ ಜನರಿಗೆ ಮಾತ್ರ ಕೊರೊನಾ ಸೋಂಕು ಕಂಡುಬಂದಿದೆ. ಅಮೆರಿಕ ಮುಂತಾದ ದೇಶಗಳಲ್ಲಿ 18ರಿಂದ 24 ಸಾವಿರದ ಜನರಿಗೆ ಬಂದಿದೆ. ಸಾವಿನ ಪ್ರಮಾಣವು ಶ್ರೀಮಂತ ರಾಷ್ಟ್ರಗಳಿಗಿಂತ ಕಡಿಮೆ ಇದೆ.

ಕೊರೊನಾ ರೋಗಿಗಳ ಚಿಕಿತ್ಸೆಗಾಗಿಯೇ ದೇಶದಲ್ಲೇ 90 ಲಕ್ಷ ಹಾಸಿಗೆಗಳು ಲಭ್ಯವಿದೆ. 12 ಸಾವಿರ ಕ್ವಾರಂಟೇನ್ ಕೇಂದ್ರಗಳನ್ನು ತೆರೆಯಲಾಗಿದೆ. ಈಗಾಗಲೇ 10 ಕೋಟಿ ಜನರಿಗೆ ಕೊರೊನ ಪರೀಕ್ಷೆ ಮಾಡಲಾಗಿದೆ. ದಿನಕ್ಕೆ ಮೂರು ಲಕ್ಷ ಎನ್ 95 ಮಾಸ್ಕ್, 3 ಲಕ್ಷ ವೆಂಟಿಲೇಟರ್ ಹಾಗೂ 5 ಲಕ್ಷ ಪಿಪಿಇ ಕಿಟ್‍ಗಳ ಉತ್ಪಾದನೆ ಸಾಮಥ್ರ್ಯ ಹೊಂದಲಾಗಿದೆ.

ಆರೋಗ್ಯ ಸರ್ವೆ ವರದಿ ಪ್ರಕಾರ ಶೇ.15ರಿಂದ 20ರಷ್ಟು ಆದಾಯದ ಹಣವನ್ನು ಆರೋಗ್ಯಕ್ಕಾಗಿ ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಬಡತನದಿಂದ ಮೇಲೆತ್ತುವ ಕಾರ್ಯದಲ್ಲಿ ಸಫಲವಾಗುತ್ತಿಲ್ಲ. ಆರೋಗ್ಯ ಪರಿಸ್ಥಿತಿ ಸುಧಾರಣೆಯಾಗದಿದ್ದರೆ ಅಭಿವೃದ್ದಿ ಸಾದ್ಯವಿಲ್ಲ ಎಂಬ ಆತಂಕಕಾರಿ ಅಂಶ ತಿಳಿದುಬಂದಿದೆ.
ಬ್ರಾಂಡೆಡ್ ಔಷಧಿಗಳಂತೆಯೇ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಜನೌಷಧಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಶೇ.10ರಿಂದ 90ರಷ್ಟು ಕಡಿಮೆ ದರದಲ್ಲಿ ಲಭ್ಯವಾಗುತ್ತಿದೆ.

ಇತ್ತೀಚೆಗೆ 50 ಕ್ಯಾನ್ಸರ್ ಸಂಬಂಧಿ ಔಷಧಿಗಳನ್ನು ಜನೌಷಧಿಗೆ ಸೇರ್ಪಡೆ ಮಾಡಲಾಗಿದೆ. ಕೊರೊನಾ ಸಂದರ್ಭದಲ್ಲಿ 128 ದೇಶಗಳಿಗೆ ಔಷಧ ಪೂರೈಕೆ ಮಾಡಲಾಗಿದೆ. ಆದರೂ ಶೇ.85ರಷ್ಟು ಮೆಡಿಕಲ್ ಡಿವೈಸ್‍ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ತಾವು ಕೂಡ ಸಹಕಾರಿ ಕ್ಷೇತ್ರದಿಂದ ಬಂದಿದ್ದು, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶವನ್ನು ದೂರವಿಡಬೇಕು ಎಂದು ಕಿವಿಮಾತು ಹೇಳಿದರು.

ಆರೋಗ್ಯ ಸಚಿವರೊಂದಿಗೆ ಚರ್ಚೆ ನಡೆಸಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ ಜನೌಷಧಿ ಮಳಿಗೆ ತೆರೆಯುವ ಬಗ್ಗೆ ಹಾಗೂ ಸರ್ಕಾರಿ ವೈದ್ಯರಿಗೆ ಜನೌಷಧಿಗಳನ್ನು ನೀಡುವಂತೆ ಸಲಹೆ ನೀಡಲು ನಿರ್ದೇಶನ ನೀಡಲಾಗುತ್ತದೆ ಎಂದರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಪ್ರತಿ ಗ್ರಾಮದಲ್ಲೂ ಜನೌಷಧಿ ಸಿಗಬೇಕು. ಮನೆ ಮನೆಗೆ ಜನೌಷಧಿ ತಲುವಂತೆ ಮಾಡಬೇಕೆಂದು ಹೇಳಿದರು.

ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಹಕಾರ ಸಂಘಗಳ ನಿಬಂಧಕ ಎಸ್.ಜಿಯಾವುಲ್ಲಾ, ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್, ಉಪಾಧ್ಯಕ್ಷ ಬಸಗೌಡ ರಾಮಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕರಾದ ಆರ್.ಶ್ರೀಧರ್, ಮಾಜಿ ಸಚಿವ ಕೆ.ಶ್ರೀನಿವಾಸ್ ಗೌಡ ಹಲವು ಗಣ್ಯರು ಪಾಲ್ಗೊಂಡಿದ್ದರು.

Facebook Comments