ಉಪನೋಂದಣಿ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.10- ಬೆಂಗಳೂರು ಉತ್ತರ ತಾಲ್ಲೂಕಿನ ಬ್ಯಾಟರಾಯನಪುರದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತವಾದ ಉಪನೋಂದಣಿ ಕಚೇರಿಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಉದ್ಘಾಟಿಸಿದರು.

ಕೊಡಿಗೆಹಳ್ಳಿ ಟಾಟಾನಗರದಲ್ಲಿ ನಿರ್ಮಾಣಗೊಂಡಿರುವ ಈ ಕಚೇರಿಯ ಉದ್ಘಾಟನೆಗಾಗಿ ಇಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಗಿರೀಶ್ ಕಾರ್ನಾಡ್ ಅವರ ನಿಧನದಿಂದಾಗಿ ಕಾರ್ಯಕ್ರಮ ನಡೆಯಲಿಲ್ಲ.

ಬದಲಾಗಿ ಕೇಂದ್ರ ಸಚಿವ ಸದಾನಂದಗೌಡ ಅವರು ಟೇಪ್ ಕತ್ತರಿಸಿ ಕಟ್ಟಡವನ್ನು ಉದ್ಘಾಟಿಸಿದರು. ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣಭೈರೇಗೌಡ, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರಾದ ಡಾ.ಕೆ.ವಿ.ತ್ರಿಲೋಕಚಂದ್ರ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ್ ಕತ್ರಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗಾಂಧಿನಗರ ಜಿಲ್ಲಾ ನೋಂದಣಿ ಕಚೇರಿ ಮತ್ತು ಬ್ಯಾಟರಾಯನಪುರ ಉಪನೋಂದಣಿ ಅಧಿಕಾರಿಗಳ ಕಚೇರಿಗಾಗಿ ಸುಮಾರು 3.40 ಕೋಟಿ ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ.  ಸುಮಾರು 36 ಚದರಮೀಟರ್ ಪಾರ್ಕಿಂಗ್, 243 ಚ.ಮೀ ನೆಲಮಹಡಿ, 243 ಚ.ಮೀ ಮೊದಲ ಮಹಡಿ ಕಟ್ಟಡಗಳಿವೆ. ಎಲ್ಲ ರೀತಿಯ ಸುಸಜ್ಜಿತವಾದ ಸೌಲಭ್ಯಗಳನ್ನು ಹೊಂದಿರುವ ಈ ಕಟ್ಟಡ ಇಂದಿನಿಂದ ಸಾರ್ವಜನಿಕ ಸೇವೆಗೆ ಸಮರ್ಪಣೆಗೊಂಡಿದೆ.

ಕಟ್ಟಡ ಉದ್ಘಾಟನೆ ವೇಳೆ ಗಿರೀಶ್ ಕಾರ್ನಾಡ್ ಅವರು ನಿಧನರಾಗಿರುವ ಸುದ್ದಿ ಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಯಿತು. ಸಚಿವರು ಕಟ್ಟಡವನ್ನು ಟೇಪ್ ಕಟ್ ಮಾಡಿ ಉದ್ಘಾಟನೆ ನೆರವೇರಿಸಿದರು.

Facebook Comments