2030ರ ವೇಳೆಗೆ ಔಷಧ ಕ್ಷೇತ್ರ ವೃದ್ಧಿ: ಸಚಿವ ಸದಾನಂದ ಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಫೆ.9- ಭಾರತದ ಔಷಧ ವಲಯವು 2030ರ ವೇಳೆಗೆ 130 ಬಿಲಿಯನ್ ಡಾಲರ್ (ಸುಮಾರು 9.5 ಲಕ್ಷ ಕೋಟಿ ರೂ.) ಉದ್ಯಮವಾಗಿ ಬೆಳೆಯಲಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು. ಫೆ.25,26 ಹಾಗೂ ಮಾ.1 ಹಾಗೂ 2ರಂದು ದೆಹಲಿಯಲ್ಲಿ ನಡೆಯಲಿರುವ ಇಂಡಿಯಾ ಫಾರ್ಮಾ ಮತ್ತು ಇಂಡಿಯಾ ಮೆಡಿಕಲ್ ಡಿವೈಸ್ 2021 ಸಮಾವೇಶದ ವಿವರಗಳನ್ನು ಸಚಿವರು ಮಾಧ್ಯಮದವರೊಂದಿಗೆ ಹಂಚಿಕೊಂಡರು.

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾ ಲಯದ ಔಷಧ ಇಲಾಖೆ, ಎಫ್‍ಐಸಿಸಿಐ ಮತ್ತು ಇನ್ವೆಸ್ಟ್ ಇಂಡಿಯಾ ಜಂಟಿಯಾಗಿ ಈ ಸಮಾವೇಶವನ್ನು ನಡೆಸುತ್ತಿವೆ. ಇದು 6ನೇ ಆವೃತ್ತಿ. ಬಂಡವಾಳ ಹೂಡಿಕೆದಾರರು, ಉದ್ದಿಮೆದಾರರು, ನವೋದ್ಯಮಿಗಳು, ತಂತ್ರಜ್ಞರು, ವಿಜ್ಞಾನಿಗಳು, ಅವಿಷ್ಕಾರಿಗಳು ಇದರಲ್ಲಿ ಸಮಾವೇಶಗೊಳ್ಳಲಿವೆ. ಸಮಾವೇಶದಲ್ಲಿ ಸಾಮಾನ್ಯವಾಗಿ ಬಂಡವಾಳ ಹೂಡಿಕೆ, ಕಂಪನಿ ಸ್ಥಾಪನೆ, ವಿಸ್ತರಣೆ, ತಂತ್ರಜ್ಞಾನ ವಿನಿಮಯ ಸೇರಿದಂತೆ ಮುಂತಾದ ಒಪ್ಪಂದ- ಒಡಂಬಡಿಕೆಗಳು ಏರ್ಪಡುತ್ತವೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ದೇಶದ ನಾಯಕತ್ವವನ್ನು ವಹಿಸಿಕೊಂಡ ಮೇಲೆ ದೇಶದ ಬಹುತೇಕ ವಲಯಗಳಲ್ಲಿ ರಚನಾತ್ಮಕ ಸುಧಾರಣೆ ಗಳನ್ನು ತರಲಾಗಿದ್ದು, ಭಾರತದಲ್ಲಿ ವ್ಯವಹಾರ, ಉದ್ದಮೆ ನಡೆಸುವುದು ಸುಲಭವಾಗಿದೆ. ಬೇರೆ ಬೇರೆ ದೇಶಗಳೊಂದಿಗೆ ನಮ್ಮ ರಾಜತಾಂತ್ರಕ ಸಂಬಂಧ ಹಾಗೂ ವ್ಯಾಪಾರ-ವಹಿವಾಟು ಬಲಗೊಳ್ಳುತ್ತಿದೆ. ಉದಾಹರಣೆಗೆ 2019-20ರಲ್ಲಿ ಔಷಧೋದ್ಯಮ ವಲಯದಲ್ಲಿ 3650 ಕೋಟಿ ರೂ.ವಿದೇಶಿ ಬಂಡವಾಳ ಹರಿದುಬಂದಿದೆ. ಅದಕ್ಕೂ ಹಿಂದಿನ ವರ್ಷದ ವಿದೇಶಿ ಬಂಡವಾಳ ಹೂಡಿಕೆಗೆ ಹೋಲಿಕೆ ಮಾಡಿದೆರೆ ಇದು ಶೇ.98ರಷ್ಟು ಹೆಚ್ಚು ಎಂದು ಸಚಿವರು ವಿವರಿಸಿದರು.

ಮೇಕ್ ಇನ್ ಇಂಡಿಯಾ ನೀತಿಯಂತೆ ವೈದ್ಯಕೀಯ ಉಪಕರಣಗಳ ಉದ್ಯಮವನ್ನು ಉತ್ತೇಜಿಸಲು ನಾಲ್ಕು ಭಿಮೆಡಿಕಲ್ ಡಿವೈಸ್ ಪಾರ್ಕ್‍ಭಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕೆ ನಮ್ಮ ಇಲಾಖೆಯು ತಲಾ 100 ಕೋಟಿ ರೂ. ಒದಗಿಸುತ್ತದೆ. ಈ ವಲಯದಲ್ಲಿಯೂ ಉತ್ಪಾದನಾ ಆಧಾರಿತ ಪ್ರೋತ್ಸಾಹ ಧನ ಯೋಜನೆ ಜಾರಿಗೊಳಿಸಲಾಗಿದ್ದು, ಇದಕ್ಕಾಗಿ 3420 ಕೋಟಿ ರೂ. ಒದಗಿಸಲಾಗುತ್ತಿದೆ. ಭಾರತದ ಮೆಡಿಕಲ್ ಡಿವೈಸ್ ಉದ್ಯಮವು ಶೇ.28ರ ಗತಿಯಲ್ಲಿ ಬೆಳವಣಿಗೆ ಹೊಂದುತ್ತಿದ್ದು, 2025ರ ವೇಳೆಗೆ ಇದರ ವಹಿವಾಟು 50 ಬಿಲಿಯನ್ ಡಾಲರ್ ಅಂದರೆ ಸುಮಾರು 3.65 ಲಕ್ಷ ಕೋಟಿ ರೂ. ತಲುಪಲಿದೆ ಎಂದು ಸದಾನಂದಗೌಡ ಹೇಳಿದರು.

ಈ ಸಂದರ್ಭದಲ್ಲಿ ರಸಾಯನಿಕ ಹಾಗೂ ರಸಗೊಬ್ಬರ ಖಾತೆಯ ರಾಜ್ಯ ಸಚಿವ ಮನ್ಸುಖ್ ಎಲ್.ಮಾಂಡವಿಯಾ, ಇಲಾಖಾ ಅಧಿಕಾರಿಗಳು, ಇನ್ವೆಸ್ಟ್ ಇಂಡಿಯಾ ಹಾಗೂ ಎಫ್‍ಐಸಿಸಿಐ ಪದಾಧಿಕಾರಿಗಳು ಪಾಲ್ಗೊಂಡರು.

Facebook Comments