ಸಿದ್ದರಾಮಯ್ಯ ವಿರುದ್ಧ ಡಿವಿಎಸ್ ತೀವ್ರ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಟಿ.ದಾಸರಹಳ್ಳಿ, ಅ.21- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೇರೆಯವರ ಮೇಲೆ ಗೂಬೆ ಕೂರಿಸುವುದರಲ್ಲಿ ನಿಸ್ಸೀಮರು. ಇತಿಹಾಸವನ್ನು ತಿರುಚುವುದೆ ಅವರ ಕೆಲಸ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೆಂಡಕಾರಿದ್ದಾರೆ. ಚಿಕ್ಕಬಾಣಾವರದ ಶ್ರೀ ಕೃಷ್ಣ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಯೋಜಿಸಲಾಗಿದ್ದ ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಮತ್ತು ಕಾಂಗ್ರೆಸ್‍ನವರಿಗೆ ಸಿದ್ದರಾಮಯ್ಯನವರು ಏನೆಂಬುದು ಗೊತ್ತಾಗಿದೆ.  ಕುಹಕ, ಕೊಂಕು ಮಾತನಾಡುವುದೆ ಅವರ ಚಾಳಿ ಎಂದು ಟೀಕಿಸಿದರು.

ವೀರ ಸಾವರ್ಕರ್ ಇದ್ದ ಅಂಡಮಾನ್-ನಿಕೋಬಾರ್ ಜೈಲನ್ನೊಮ್ಮೆ ನೋಡಿ ಬರಲಿ. ಪ್ರಯಾಣದ ಖರ್ಚನ್ನು ಸಾರ್ವಜನಿಕರಿಂದ ಭರಿಸೋಣ. ಆಗಲಾದರೂ ವಾಸ್ತವ ಇತಿಹಾಸ ಅರಿವಾಗುತ್ತದೆ ಎಂದು ವ್ಯಂಗ್ಯವಾಡಿದರು.  ಡಾ. ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡುವುದು ನಮ್ಮ ಆದ್ಯತೆಯೂ ಆಗಿದೆ. ಜನಾಭಿಪ್ರಾಯದಂತೆ ಕೇಂದ್ರಕ್ಕೆ ಈಗಾಗಲೇ ಶಿಫಾರಸು ಕಳುಹಿಸಿ ಕೊಡಲಾಗಿದೆ.

ಸಾವರ್ಕರ್ ಹಾಗೂ ಸ್ವಾಮೀಜಿ ಪ್ರಕರಣಗಳನ್ನು ಒಂದಕ್ಕೊಂದು ತಳುಕು ಹಾಕುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ರಾಜಕೀಯ ಪ್ರವೃತ್ತಿ ಯಾರಿಗೂ ಶೋಭೆ ತರುವಂಥದ್ದಲ್ಲ ಎಂದು ಡಿವಿಎಸ್ ಕಿಡಿಕಾರಿದರು. ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡುವುದು ಕೇಂದ್ರೀಯ ಸಂಸದೀಯ ಮಂಡಳಿಯ ನಿರ್ಧಾರ. ಅಭ್ಯರ್ಥಿ ಯಾರಾದರೂ ಅವರನ್ನು ಗೆಲ್ಲಿಸಿಕೊಂಡು ಬರುವುದಷ್ಟೇ ನಮ್ಮ ಜವಾಬ್ದಾರಿ ಎಂದರು.

ಒಳ್ಳೆಯ ಕೆಲಸವನ್ನು ಯಾರಿಂದಲೂ ಮುಚ್ಚಿಡಲು ಆಗುವುದಿಲ್ಲ. ದೇವೇಗೌಡರಿಗೆ ಮೋದಿಯವರ ಒಳ್ಳೆಯ ಕೆಲಸಗಳ ಬಗ್ಗೆ ಈಗ ಜ್ಞಾನೋದಯವಾಗಿರಬೇಕು. ಪ್ರಧಾನಿ, ಬಿಜೆಪಿಯನ್ನು ಬೆಂಬಲಿಸಿ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುತ್ತೇವೆ. ಜೆಡಿಎಸ್‍ನವರಿಗೆ ಬಿಜೆಪಿಗೆ ಬರುವ ಮನಸ್ಸಾದರೆ ಕಾಲ ಬಂದಾಗ ಪರಿಶೀಲಿಸುತ್ತೇವೆ ಎನ್ನುವ ಮೂಲಕ ಜೆಡಿಎಸ್ ಜತೆ ಕೈಜೋಡಿಸಲು ಅಭ್ಯಂತರವಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.

ಮಾಜಿ ಶಾಸಕ ಮುನಿರಾಜು, ರಾಘವೇಂದ್ರ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ರಾಘವೇಂದ್ರ, ನಟ ಭರತ್ ಭೋಪಣ್ಣ, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Facebook Comments