ಮಾರುತಿ ಮಾನ್ಪಡೆ ಸಾವಿಗೆ ಸಿದ್ದರಾಮಯ್ಯ-ಡಿಕೆಶಿ ಕಾರಣ : ಡಿವಿಎಸ್ ಗಂಭೀರ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.26- ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ ಅವರ ಸಾವಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರಣ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಕಾಯ್ದೆಗಳನ್ನು ವಿರೋಸಲು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸಿಗರು ಕೆಲವು ಬಾಡಿಗೆ ಭಂಟರನ್ನು ಕರೆತಂದರು. ಮಾರುತಿ ಮಾನ್ಪಡೆ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರ ಪರಿಣಾಮ ಕೊರೊನಾ ಸೋಂಕು ಆವರಿಸಿ ಸಾವನ್ನಪ್ಪಿದರು. ಇದಕ್ಕೆ ಡಿ.ಕೆ.ಶಿವಕುಮಾರ್ ಅವರೇ ಕಾರಣಕರ್ತರು ಎಂದು ದೂರಿದರು.

ಬೆಂಗಳೂರು ಮಹಾಘಟಕದ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತ ವಿರೋ ಕಾಯ್ದೆಗಳನ್ನು ಜಾರಿ ಮಾಡಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಅನೇಕರು ರೈತರನ್ನು ಬೀದಿಗೆ ತಂದು ನಿಲ್ಲಿಸಿದರು. ಇದರಿಂದ ಕೊರೊನಾ ಸೋಂಕು ಹಬ್ಬಿತು ಎಂದು ಕಿಡಿಕಾರಿದರು.

ಸೋಂಕು ಹಬ್ಬಲು ಕಾರಣ ಯಾರು ? ರೈತರನ್ನು ಬೀದಿಯಲ್ಲೇ ಬಿಡಲು ನಿಮಗೆ ಅಕಾರ ಕೊಟ್ಟವರು ಯಾರು ? ಇಂದು ಎಪಿಎಂಸಿಗಳು ರೈತರ ಹಿಡಿತದಲ್ಲಿ ಇಲ್ಲ ಎಂಬ ಕಟು ಸತ್ಯ ನಿಮಗೆ ಅರ್ಥವಾಗಿಲ್ಲವೆ ? ಬಿಜೆಪಿ ಹಾಗೂ ಮೋದಿಯನ್ನು ಟೀಕಿಸಲು ಹೋರಾಟ ಮಾಡಬೇಕಾಗಿತ್ತೇ ಎಂದು ಸದಾನಂದಗೌಡರು ಪ್ರಶ್ನಿಸಿದರು.

ಸುಮ್ಮನಿದ್ದ ರೈತರನ್ನು ಹಳ್ಳಿಯಿಂದ ಕರೆತಂದಿದ್ದೇ ಕಾಂಗ್ರೆಸಿಗರು. ರೈತರು ಬರುವುದಿಲ್ಲ ಎಂದಾಗ ಬಾಡಿಗೆಗೆ ಕರೆತರಲಾಯಿತು. ಪ್ರತಿಭಟನೆ ನಡೆಸಿ ಕೊರೊನಾ ಸೋಂಕು ಹಬ್ಬಿಸಿದಿರಿ. ಯಾವ ಪುರುಷಾರ್ಥಕ್ಕೆ ಹೋರಾಟ ಮಾಡಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.

ಪ್ರಸ್ತುತ ನಡೆಯುತ್ತಿರುವ ಎರಡು ವಿಧಾನಸಭೆ ಹಾಗೂ ನಾಲ್ಕು ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಸುವುದರಲ್ಲಿ ಯಾವ ಸಂಶಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿರುವ ಸಾಧನೆಗಳ ಮೇಲೆ ಮತ ಕೇಳುತ್ತೇವೆ ಎಂದು ಹೇಳಿದರು.

ನಮಗೆ ಸ್ಪಷ್ಟ ಗುರಿ ಇದೆ. ನಾವು ಮಾಡಿರುವ ಕೆಲಸಗಳಿಗೆ ಮತ ಕೊಡಿ ಎಂದು ಮತದಾರರ ಬಳಿ ಹೋಗುತ್ತೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಗುರಿಯೂ ಇಲ್ಲ. ಗುರುವೂ ಇಲ್ಲ. ಯಾವ ಆಧಾರದ ಮೇಲೆ ಮತ ಕೇಳುತ್ತೀರಿ ಎಂದು ಡಿವಿಎಸ್ ತರಾಟೆಗೆ ತೆಗೆದುಕೊಂಡರು.

ನಕಾರಾತ್ಮಕ ಮಾತುಗಳಿಂದ ಮತಗಳಿಸಲು ಸಾಧ್ಯವಿಲ್ಲ. ನಮ್ಮ ಕೆಲಸಗಳ ಆಧಾರದ ಮೇಲೆ ಮತಯಾಚಿಸಬೇಕು. ಕಾಂಗ್ರೆಸ್ ಹಾಗೂ ಜೆಡಿಎಸ್‍ನವರಿಗೆ ಬಂಡವಾಳವಿಲ್ಲ. ಹೀಗಾಗಿ ಬಿಜೆಪಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಯಾವಾಗಲೂ ನಕಾರಾತ್ಮಕ ಮಾತುಗಳಿಂದ ಚುನಾವಣೆ ನಡೆಸುವುದು ಸೂಕ್ತವಲ್ಲ. ಇಂದು ಒಂದು ಕೆಜಿ ಈರುಳ್ಳಿ ಬೆಲೆ ಎಷ್ಟಿದೆ. ಇದರಿಂದ ರೈತರಿಗೆ ಎಷ್ಟು ಸಿಗುತ್ತದೆ ಎಂಬುದನ್ನು ಪ್ರತಿಪಕ್ಷದವರು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.

ಹಿಂದಿನ ಉಪ ಚುನಾವಣೆ ರೀತಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಬಿಜೆಪಿ ವಿರುದ್ಧ ಹೋರಾಟ ಮಾಡುವ ಶಕ್ತಿಯನ್ನೇ ಕಳೆದುಕೊಂಡಿವೆ. ನಮಗೆ ಮತದಾರರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಉತ್ತಮ ಫಲಿತಾಂಶ ಬರುತ್ತಿದೆ. ಬಿಜೆಪಿ ಗೆಲ್ಲುವುದರಲ್ಲಿ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ರವಿಸುಬ್ರಹ್ಮಣ್ಯ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ, ವಿಧಾನಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin