ಚೇತರಿಸಿಕೊಂಡ ಕೇಂದ್ರ ಸಚಿವ ಸದಾನಂದಗೌಡ, 24 ಗಂಟೆ ಐಸಿಯುನಲ್ಲಿ ನಿಗಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ತೀವ್ರ ಅನಾರೋಗ್ಯದಿಂದ ಅಸ್ತತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಆರೋಗ್ಯ ಸ್ಥಿತಿ ಸುಧಾರಣೆ ಕಂಡು ಬಂದಿದ್ದು,ಯಾವುದೇ ಆತಂಕ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.ಪ್ರಸ್ತುತ ಬೆಂಗಳೂರಿನ ಅಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸದಾನಂದಗೌಡ ಅವರನ್ನು 24 ಗಂಟೆಗಳ ಕಾಲ ನಿಗಾವಹಿಸಿ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ.ಸದ್ಯ ಅವರ ಆರೋಗ್ಯ ಸ್ಥಿತಿ ಸಹಜವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಆಸ್ಟರ್ ಆಸ್ಪತ್ರೆ
ಫಿಜಿಷಿಯನ್ ಡಾ.ಬೃಂದಾ ಮಾಹಿತಿ ನೀಡಿದ್ದಾರೆ.

ಆಸ್ಟರ್ ಆಸ್ಪತ್ರೆಯಲ್ಲಿ ಡಾ. ಬೃಂದಾ ಮತ್ತವರ ವೈದ್ಯಕೀಯ ತಂಡವು ಡಿವಿಎಸ್ ಅವರ ಆರೋಗ್ಯದ ಬಗ್ಗೆ ನಿಗಾ ಇರಿಸಲಾಗಿದೆ. ಇಂದು ಮಧ್ಯಾಹ್ನ ಚಿತ್ರದುರ್ಗದಲ್ಲಿ ಅಸ್ವಸ್ಥರಾದ ಸದಾನಂದಗೌಡರಿಗೆ ಅಲ್ಲಿನ ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚುವರಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಯಿತು. ಸಚಿವರಿಗೆ ಚಿಕಿತ್ಸೆ ನೀಡಲಾಗಿದ್ದು,ಅವರ ಹೃದಯ ಬಡಿತ ಸಹಜವಾಗಿದೆ.

ಇಸಿಜಿ, ಎಕೋ, ರಕ್ತ ಚಲನೆ ಎಲ್ಲವೂ ಸಹಜ ಸ್ಥಿತಿಯಲ್ಲಿದೆ. ಹೀಗಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದರು. ಸದ್ಯ ತುರ್ತುನಿಗಾ ಘಟಕದಲ್ಲಿ 24 ಗಂಟೆಗಳ ಕಾಲ ಕೇಂದ್ರ ಸಚಿವರ ಆರೋಗ್ಯದ ಮೇಲೆ ನಿಗಾ ಇರಿಸಲಿದ್ದು, ನಾಳೆ ಮತ್ತೊಮ್ಮೆ ಆರೋಗ್ಯ ತಪಾಸಣೆ ನಡೆಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ರಕ್ತದೊತ್ತಡ, ಶುಗರ್ ಎಲ್ಲವೂ ಈಗ ನಾರ್ಮಲ್ ಆಗಿದೆ. ಮುಂದಿನ 24 ಗಂಟೆ ವೈದ್ಯರು ನಿಗಾ ಇಡಲಿದ್ದಾರೆ ಎಂದು ಡಿವಿಎಸ್ ಪುತ್ರ ಕಾರ್ತಿಕ್ ಗೌಡ ಕೂಡ ಇದನ್ನು ದೃಢಪಡಿಸಿದ್ದಾರೆ. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯಂ ನಾಯ್ಡು ಸೇರಿದಂತೆ ಹಲವು ಗಣ್ಯರು, ರಾಜಕಾರಣಿಗಳು ಡಿವಿಎಸ್ ಆರೋಗ್ಯ ವಿಚಾರಿಸಲು ಆಸ್ಟರ್ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ಮುಗಿದ ಬಳಿಕ 12:10 ವೇಳೆಗೆ ಶಿವಮೊಗ್ಗದಿಂದ ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದರು. ಚಿತ್ರದುರ್ಗ ನಗರದ ನವೀನ್ ರೆಸಿಡೆನ್ಸಿ ಹೋಟೆಲ್​ನಲ್ಲಿ ಉಪಾಹಾರ ಸೇವಿಸಿ ಸ್ವಲ್ಪ ವಿಶ್ರಮಿಸಿ ಹೋಗುವ ಇಚ್ಚೆಯಿಂದ ಆಗಮಿಸಿದರು.

ಆದರೆ, ಹೋಟೆಲ್ ಬಳಿ ಕಾರ್ ಇಳಿಯುತ್ತಿದ್ದಂತೆ ಚಿತ್ರದುರ್ಗ ಬಿಜೆಪಿ ಕಾರ್ಯಕರ್ತರು ಹೂ ಗುಚ್ಚ, ನೀಡಿ ಶಾಲು ಹಾಕಿ ಅವರಿಗೆ ಆತ್ಮೀಯ ಸ್ವಾಗತ ಕೋರಿದರು. ಅಷ್ಟೊತ್ತಿಗಾಗಲೇ ಶುಗರ್ ಲೋ ಆಗಿ ಹೋಟೆಲ್ ಮುಂಭಾಗ ಅವರು ಕುಸಿದು ಬಿದ್ದೇ ಬಿಟ್ಟರು. ಡಿವಿಎಸ್ ಕುಸಿಯುತ್ತಿದ್ದಂತೆ, ಅವರ ಅಂಗರಕ್ಷಕರು, ಆಪ್ತ ಸಹಾಯಕರು ತಡ ಮಾಡದೇ ಎಸ್ಕಾರ್ಟ್ ವಾಹನದಲ್ಲಿಯೇ ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು.

Facebook Comments

Sri Raghav

Admin