Dysp ಗಣಪತಿ ಪ್ರಕರಣ : ಸಿಐಡಿ ತನಿಖೆ ಆರಂಭ, ಸೆ.19ರೊಳಗೆ ವರದಿಗೆ ಕೋರ್ಟ್ ಆದೇಶ
ಬೆಂಗಳೂರು, ಆ.5- ಮಡಿಕೇರಿಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.19ರೊಳಗೆ ತನಿಖಾ ವರದಿ ನೀಡಬೇಕೆಂದು ಮಡಿಕೇರಿ ಜೆಎಂಎಫ್ಸಿ ನ್ಯಾಯಾಲಯ ಸಿಐಡಿ ಅಧಿಕಾರಿಗಳಿಗೆ ಆದೇಶಿಸಿದೆ. ಹೈಕೋರ್ಟ್ ಆದೇಶದಂತೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಸಿಐಡಿ ತಂಡ ಸಮಯಾವಕಾಶ ಕೋರಿ ಮಡಿಕೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆ ನಡೆಸಿ ಸೆ.19ರೊಳಗೆ ವರದಿ ನೀಡುವಂತೆ ತನಿಖಾ ತಂಡದ ಮುಖ್ಯಸ್ಥ ಶ್ರೀಧರ್ ಅವರಿಗೆ ಸೂಚಿಸಿದೆ. ಜು.9ರಂದು ಡಿವೈಎಸ್ಪಿ ಗಣಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೂ ಮುನ್ನ ಖಾಸಗಿ ಟಿವಿ ವಾಹಿನಿಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಆಗಿನ ಗೃಹ ಸಚಿವರಾದ ಜಾರ್ಜ್ ಮತ್ತು ಇಬ್ಬರು ಹಿರಿಯ ಪೆÇಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಮತ್ತು ಪ್ರಸಾದ್ ಅವರ ಹೆಸರು ಪ್ರಸ್ತಾಪಿಸಿದ್ದರು. ನಂತರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಅವರ ಪತ್ನಿ ಹಾಗೂ ಪುತ್ರ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಮಡಿಕೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಈ ಮೂವರ ಮೇಲೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆದೇಶಿಸಿತ್ತು. ಆಗ ಗೃಹ ಸಚಿವರಾಗಿದ್ದ ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇಬ್ಬರು ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿತ್ತು. ಇಬ್ಬರು ಅಧಿಕಾರಿಗಳು ಪ್ರಕರಣದ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಉನ್ನತ ಮಟ್ಟದ ಅಧಿಕಾರಿಗಳ ಹೆಸರುಗಳು ಪ್ರಕರಣದಲ್ಲಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಸೂಚಿಸಿದ್ದ ಹೈಕೋರ್ಟ್ ಪ್ರಕರಣ ರದ್ದುಗೊಳಿಸಲು ನಿರಾಕರಿಸಿತ್ತು. ಹಾಗಾಗಿ ತಮ್ಮ ಅರ್ಜಿಯನ್ನು ಈ ಅಧಿಕಾರಿಗಳು ಹಿಂದಕ್ಕೆ ಪಡೆದಿದ್ದರು. ಹೈಕೋರ್ಟ್ ಆದೇಶದಂತೆ ಸಿಐಡಿ ತಂಡ ಇಂದಿನಿಂದ ತನಿಖೆ ಆರಂಭಿಸಿದೆ. ಮಡಿಕೇರಿಗೆ ತೆರಳಿರುವ ಸಿಐಡಿ ತಂಡ ಅಲ್ಲಿನ ಪೊಲೀಸರು ದಾಖಲಿಸಿರುವ ಎಫ್ಐಆರ್ ಪಡೆದು ತನಿಖಾವರದಿಗೆ ನ್ಯಾಯಾಲಯದ ಮುಂದೆ ಸಮಯಾವಕಾಶ ಕೋರಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸೆ.19ರೊಳಗೆ ವರದಿ ನೀಡುವಂತೆ ಸೂಚನೆ ನೀಡಿದೆ.
► Follow us on – Facebook / Twitter / Google+
► ಡೌನ್ಲೋಡ್ ‘ಈ ಸಂಜೆ’ ಮೊಬೈಲ್ ಆಪ್