ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಮರುಜೀವ, ಜಾರ್ಜ್ ಸೇರಿ ಮೂವರಿಗೆ ಮತ್ತೆ ಸಂಕಷ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.28- ರಾಜ್ಯ ರಾಜಕಾರಣದಲ್ಲಿ ಭಾರೀ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಮೂವರಿಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ.

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿದ್ದ ಸಿಬಿಐ ತನಿಖಾ ತಂಡದ ವರದಿಯನ್ನು ಜನಪ್ರತಿನಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದು, ಮರುತನಿಖೆಗೆ ಆದೇಶ ಮಾಡಿದೆ.

ವಾದ ಮತ್ತು ಪ್ರತಿವಾದವನ್ನು ಆಲಿಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಇನವಳ್ಳಿ ವರದಿಯನ್ನು ತಿರಸ್ಕರಿಸಿದರು.  ಈ ಹಿನ್ನೆಲೆಯಲ್ಲಿ ಮಾಜಿ ಸಚಿವ, ಶಾಸಕ ಕೆ.ಜೆ.ಜಾರ್ಜ್, ಹಿರಿಯ ಐಪಿಎಸ್ ಅಕಾರಿಗಳಾದ ಪ್ರಣಬ್ ಮೊಹಂತಿ ಹಾಗೂ ಎ.ಎಂ.ಪ್ರಸಾದ್ ಅವರುಗಳಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಲಾಗಿದೆ.

ಗಣಪತಿ ಆತ್ಮಹತ್ಯೆಗೆ ಯಾರೊಬ್ಬರೂ ಪ್ರಚೋದನೆ ನೀಡಿಲ್ಲ ಎಂದು ಸಿಬಿಐ ಪ್ರಕರಣದ ಮೂವರು ಆರೋಪಿಗಳಿಗೆ ಕ್ಲೀನ್‍ಚೀಟ್ ನೀಡಿತ್ತು. ಇದೀಗ ವರದಿಯನ್ನು ತಿರಸ್ಕರಿಸಿರುವುದರಿಂದ ಮತ್ತೆ ತನಿಖೆ ಆರಂಭವಾಗಲಿದೆ. ಸಿಬಿಐ ತನಿಖಾ ತಂಡ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದನ್ನು ಪ್ರಶ್ನಿಸಿ ಗಣಪತಿ ಅವರ ಪುತ್ರ ನೇಹಲ್ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನೆ ಮಾಡಿದ್ದರು.

ಸಿಬಿಐ ನಿಷ್ಪಕ್ಷಪಾತವಾಗಿ ತನಿಖೆ ನಡೆಸದೆ ಏಕಮುಖವಾಗಿ ಬಿ ರಿಪೋರ್ಟ್ ಸಲ್ಲಿಸಿದೆ ಎಂಬುದು ಪುತ್ರ ನೆಹೆಲ್ ಆರೋಪವಾಗಿತ್ತು. ಗಣಪತಿ ಸ್ವಯಂಪ್ರೇರಿತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಯಾರೊಬ್ಬರ ಪ್ರಚೋದನೆ ಕಾರಣವಲ್ಲ ಎಂದು ಸಿಬಿಐ ಬಿ ರಿಪೋರ್ಟ್ ಸಲ್ಲಿಸಿತ್ತು.

ಅವರು ವೈಯಕ್ತಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ಕೌಟುಂಬಿಕ ಸಮಸ್ಯೆಗಳು ಕೂಡ ಇದಕ್ಕೆ ಕಾರಣವಾಗಿದೆ. ಯಾವುದೋ ಒಂದು ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಸಿಬಿಐ ಹೇಳಿತ್ತು.

ಅಂದಿನ ಗೃಹಸಚಿವರಾಗಿದ್ದ ಕೆ.ಜೆ.ಜಾರ್ಜ್ ಹಾಗೂ ಪ್ರಣಬ್ ಮೊಹಂತಿ ಮತ್ತು ಎ.ಎಂ.ಪ್ರಸಾದ್ ಅವರು ನನ್ನ ಸಾವಿಗೆ ಕಾರಣ ಎಂದು ಆತ್ಮಹತ್ಯೆಗೂ ಮುನ್ನ ಗಣಪತಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ್ದರು.

ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದವನ್ನೇ ಸೃಷ್ಟಿಸಿ ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಗಂಡಾಂತರವನ್ನೇ ತಂದಿತ್ತು.  ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪ್ರಕರಣದಲ್ಲಿ ಜಾರ್ಜ್ ಹೆಸರು ಕೇಳಿಬಂದ ಕಾರಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದರು.

ಕೊನೆಗೆ ಮಡಿಕೇರಿಯ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ದೂರು ದಾಖಲಾಗಿ ಜಾರ್ಜ್, ಪ್ರಣಬ್ ಮೊಹಂತಿ, ಎ.ಎಂ.ಪ್ರಸಾದ್ ಮೇಲೆ ಎಫ್‍ಐಆರ್ ದಾಖಲಿಸುವಂತೆ ನ್ಯಾಯಾಲಯ ಸ್ಥಳೀಯ ಠಾಣೆಗೆ ನಿರ್ದೇಶನ ನೀಡಿತ್ತು. ಯಾವಾಗ ನ್ಯಾಯಾಲಯದ ಸೂಚನೆಯಂತೆ ಪೊಲೀಸರು ಜಾರ್ಜ್ ವಿರುದ್ಧ ಎಫ್‍ಐಆರ್ ದಾಖಲಿಸಿದರೋ ವಿಯಿಲ್ಲದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಮಂಗಳೂರು ಐಜಿ ಕಚೇರಿಯಲ್ಲಿ ಡಿವೈಎಸ್ಪಿ ಆಗಿದ್ದ ಗಣಪತಿ 2016ರ ಜುಲೈ 7ರಂದು ಮಡಿಕೇರಿಯ ಲಾಡ್ಜ್‍ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೂ ಮುನ್ನ ಮಾಧ್ಯಮದ ಮುಂದೆ ತನಗೆ ಸಚಿವ ಕೆ.ಜೆ. ಜಾರ್ಜ್, ಐಪಿಎಸ್ ಅಕಾರಿಗಳಾದ ಎ.ಎಂ.ಪ್ರಸಾದ್, ಪ್ರಣವ್ ಮೊಹಂತಿ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದರು.

ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿ ತನಿಖೆಗೆ ವಹಿಸಿತ್ತು. ಕೆಲವೇ ತಿಂಗಳುಗಳಲ್ಲಿ ಸಿಐಡಿ ಮೂವರಿಗೂ ಕ್ಲೀನ್‍ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿದ ಗಣಪತಿ ಕುಟುಂಬ ಸುಪ್ರೀಂಕೋರ್ಟ್ ಮೊರೆ ಹೋಗಿ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿತ್ತು. 2017ರ ಸೆ. 5ರಂದು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿತ್ತು.

ಇದರಂತೆ ಡಿಸೆಂಬರ್‍ಗೆ ತನಿಖೆಗೆ ಮುಗಿಸಬೇಕಿತ್ತಾದರೂ, ಪ್ರಕರಣದಲ್ಲಿ ಇನ್ನೂ ಸಾಕಷ್ಟು ಸಾಕ್ಷಿಗಳ ವಿಚಾರಣೆ ಹಾಗೂ ವಿಜ್ಞಾನ ಪರೀಕ್ಷೆ ಬಾಕಿ ಇರುವುದರಿಂದ ಸಿಬಿಐ ಹೆಚ್ಚುವರಿ ಕಾಲಾವಕಾಶ ಕೋರಿದ್ದು, ಕೋರ್ಟ್ ಪುರಸ್ಕರಿಸಿದೆ.

Facebook Comments

Sri Raghav

Admin