ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಕೇಸ್, ಮಾಜಿ ಸಚಿವ ಜಾರ್ಜ್‍ಗೆ ಸಿಬಿಐ ಸಮನ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಕೆ.ಜೆ.ಜಾರ್ಜ್‍ಗೆಸಿಬಿಐ ಸಮನ್ಸ್ ಜಾರಿ ಮಾಡಿದೆ. 2016ರ ಜು.17ರಂದು ನಡೆದಿದ್ದ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಸಿಬಿಐ ನ್ಯಾಯಲಾಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿತ್ತು.

ಆದರೆ ಆತ್ಮಹತ್ಯೆಗೆ ಕಾರಣವೆಂದು ಹಲವರ ಮೇಲೆ ಮಾಡಿದ್ದ ಆರೋಪಗಳಲ್ಲಿ ಹುರುಳಿಲ್ಲ ಎಂದು ಸಿಬಿಐ ಸಲ್ಲಿಸಿದ್ದ ‘ಬಿ’ ರಿಪೋರ್ಟ್‍ನ್ನು ನ್ಯಾಯಾಲಯ ತಿರಸ್ಕರಿಸಿ, ಮರು ತನಿಖೆಗೆ ಆದೇಶಿಸಿತ್ತು. ಹೀಗಾಗಿ ಪ್ರಕರಣಕ್ಕೆ ಮರುಜೀವ ಬಂದಿದೆ. ಈ ಮೂಲಕ ಮಾಜಿ ಸಚಿವ ಕೆ.ಜೆ. ಜಾರ್ಜ್‌, ಐಪಿಎಸ್‌ ಅಧಿಕಾರಿಗಳಾದ ಪ್ರಣವ್‌ ಮೊಹಾಂತಿ, ಎ.ಎಂ. ಪ್ರಸಾದ್‌ ಅವರಿಗೆ ಮತ್ತೂಮ್ಮೆ ತನಿಖೆಯ ಉರುಳು ಸುತ್ತಿಕೊಂಡಿದೆ.

ಸಿಬಿಐ ‘ಬಿ’ ರಿಪೋರ್ಟ್ ಸಲ್ಲಿಸಿರುವುದನ್ನು ಗಣಪತಿ ಅವರ ಪುತ್ರ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಪ್ರಕರಣದ ಆರೋಪಿಗಳಾದ ಕೆ.ಜೆ.ಜಾರ್ಜ್, ಪ್ರಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್‍ಗೆ ಸೆ.28ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ಏನಿದು ಪ್ರಕರಣ?: ಮಂಗಳೂರಿನ ಐಜಿಪಿ ಕಚೇರಿಯಲ್ಲಿ ಡಿವೈಎಸ್‌ಪಿ ಆಗಿದ್ದ ಕೊಡಗು ಮೂಲದ ಎಂ.ಕೆ.ಗಣಪತಿ ಅವರು 2016ರ ಜುಲೈ 7ರಂದು ಮಡಿಕೇರಿಯ ವಿನಾಯಕ ಲಾಡ್ಜ್‌ನ ಕೊಠಡಿ ಸಂಖ್ಯೆ 315ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಇಲ್ಲಿನ ಸ್ಥಳೀಯ ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಮಾಡಿದ್ದ ಆರೋಪಗಳು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ– ಕಲ್ಲೋಲವನ್ನೇ ಸೃಷ್ಟಿಸಿದ್ದವು. ‘ಕೆ.ಜೆ.ಜಾರ್ಜ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ‘ನನ್ನ ಸಾವಿಗೆ ಈ ಮೂವರೇ ಕಾರಣ’ ಎಂದು ಹೇಳಿಕೊಂಡಿದ್ದರು. ಬಳಿಕ ಅದೇ ದಿನ ಸಂಜೆ 6ರ ಸುಮಾರಿಗೆ ವಿನಾಯಕ ಲಾಡ್ಜ್‌ಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಅವರ ಮೃತದೇಹ ಪತ್ತೆಯಾದ ನಂತರ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು, ಜಾರ್ಜ್‌ ಮೇಲೆ ತಿರುಗಿ ಬಿದ್ದಿದ್ದರು. ಸ್ಥಳೀಯವಾಗಿಯೂ ಜಾರ್ಜ್‌ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಕೊಡಗು ಬಂದ್‌ ಆಗಿತ್ತು. ಸರಣಿ ಪ್ರತಿಭಟನೆಗಳು ನಡೆದಿದ್ದವು. ಜಾರ್ಜ್‌ ರಾಜೀನಾಮೆಗೆ ಪಟ್ಟು ಹಿಡಿಯಲಾಯಿತು. ಅದೇ ವೇಳೆಯಲ್ಲಿ ವಿಧಾನಸಭೆ ಅಧಿವೇಶನ ಸಹ ನಡೆಯುತ್ತಿತ್ತು. ಬಿಜೆಪಿ ಶಾಸಕರು ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿ, ಅಹೋರಾತ್ರಿ ಧರಣಿ ನಡೆಸಿದ್ದರು.

ಕೊನೆಗೆ ಜಾರ್ಜ್‌ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿಗೂ ವಹಿಸಿತ್ತು. ಸಿಐಡಿ ತಂಡವು ಜಾರ್ಜ್‌ ವಿರುದ್ಧದ ಆರೋಪಕ್ಕೆ ‘ಕ್ಲೀನ್‌ ಚಿಟ್‌’ ನೀಡಿ ನ್ಯಾಯಾಲಯಕ್ಕೆ 800 ಪುಟಗಳ ವರದಿ ಸಲ್ಲಿಸಿತ್ತು. ಸಿಐಡಿ ವರದಿ ಬಂದ ಬಳಿಕ ಗಣಪತಿ ಪತ್ನಿ ಪಾವನಾ ಹಾಗೂ ಪುತ್ರ ನೇಹಾಲ್‌ ಪ್ರಕರಣದಿಂದ ಹಿಂದೆ ಸರಿದಿದ್ದರು.

ನ್ಯಾಯಾಂಗ ತನಿಖೆಯೂ ನಡೆದಿತ್ತು. ಆ ವರದಿ ಮಾತ್ರ ಇದುವರೆಗೂ ಬಹಿರಂಗಗೊಂಡಿಲ್ಲ. ಅಂದಿನ ಕೊಡಗು ಎಸ್‌ಪಿ, ಸಿಪಿಐ ಅವರಿಂದ ಹೇಳಿಕೆ ಪಡೆಯಲಾಗಿತ್ತು. ಇದರ ನಡುವೆ ಗಣಪತಿ ಅವರು ಸಂಗ್ರಹಿಸಿದ್ದ ಸಿ.ಡಿ, ಪೇಪರ್‌ ಕಟಿಂಗ್ಸ್‌, ಛಾಯಾಚಿತ್ರಗಳು ನಾಪತ್ತೆ ಆಗಿವೆ ಎಂಬ ಆರೋಪವು ಜೋರಾಗಿ ಸದ್ದು ಹಾಗೂ ಸುದ್ದಿ ಮಾಡಿತ್ತು.

ಇದರ ನಡುವೆ ಗಣಪತಿ ಸಹೋದರ ಎಂ.ಕೆ.ಮಾಚಯ್ಯ ಹಾಗೂ ತಂದೆ ಕುಶಾಲಪ್ಪ ಅವರು ‘ನಮ್ಮ ಕುಟುಂಬಕ್ಕೆ ನ್ಯಾಯ ಬೇಕು. ನಮ್ಮ ಸಹೋದರ ಗಣಪತಿ ಅವರು ಕಿರುಕುಳದಿಂದಲೇ ಸಾವನ್ನಪ್ಪಿದ್ದಾರೆ. ಅವರು ಹೆಸರು ಹೇಳಿರುವ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು’ ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

2017ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಕೋರ್ಟ್‌ ಆದೇಶದ ಬಳಿಕ ಚೆನ್ನೈ ಸಿಬಿಐ ಕಚೇರಿಯ ಎಸ್‌ಪಿಯಾಗಿದ್ದ ಶರವಣನ್‌, ಜಾರ್ಜ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಮೊದಲ ಆರೋಪಿ ಜಾರ್ಜ್‌ ಆಗಿದ್ದರೆ, ಪ್ರಣವ್‌ ಮೊಹಂತಿ ಹಾಗೂ ಎ.ಎಂ.ಪ್ರಸಾದ್‌ ಅವರು ಕ್ರಮವಾಗಿ ಎರಡು, ಮೂರನೇ ಆರೋಪಿಯಾಗಿ ಹೆಸರಿಸಲಾಗಿತ್ತು.

ಮಡಿಕೇರಿಯಲ್ಲಿ ಬೀಡುಬಿಟ್ಟಿದ್ದ ತಂಡ: ಎಫ್‌ಐಆರ್‌ ದಾಖಲಾದ ಮರು ದಿನವೇ ಸಿಬಿಐ ಅಧಿಕಾರಿಗಳು ಮಡಿಕೇರಿಗೆ ಧಾವಿಸಿದ್ದರು. ಗಣಪತಿ ಶವವಾಗಿ ಪತ್ತೆಯಾದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಮೀಪದ ವಿನಾಯಕ ಲಾಡ್ಜ್‌ಗೂ ಭೇಟಿ ನೀಡಿ ಪರಿಶೀಲಿಸಿದ್ದರು.

ಎಂ.ಕೆ.ಮಾಚಯ್ಯ ಅವರನ್ನೇ ಅಲ್ಲಿಗೆ ಕರೆಸಿ, ಹೇಳಿಕೆ ದಾಖಲಿಸಿಕೊಂಡಿದ್ದರು. ರಂಗಸಮುದ್ರ ಮನೆಗೂ ತೆರಳಿ ಹೇಳಿಕೆ ಪಡೆಯಲಾಗಿತ್ತು.ಈ ಪ್ರಕರಣ ತೀವ್ರ ಸ್ವರೂಪ ಪಡೆದು ಜಾರ್ಜ್‌ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರು.

Facebook Comments

Sri Raghav

Admin