ಐಡಾ ಬದುಕಿದ್ದೇ ಪವಾಡ, 91 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದ ಮಗು ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಅಂಕಾರಾ,ನ.5- ಪಶ್ಚಿಮ ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕಟ್ಟಡ ಕುಸಿದು ಹಲವಾರು ಮಂದಿ ಸಾವಿಗೀಡಿದ್ದಾರೆ. ಆದರೆ ಸತತ 91 ಗಂಟೆಗಳ ಕಾಲ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಮೂರು ವರ್ಷದ ಮಗು ಪವಾಡ ಸದೃಶವೆಂಬಂತೆ ಬದುಕುಳಿದಿದೆ. ಐಡಾ ಗೆಜ್ಜಿನ್(3) ಸಾವನ್ನೇ ಗೆದ್ದಿರುವ ಬಾಲಕಿ.

ಇಜ್ಮಿರ್ ಮೇಯರ್ ಟಂಕ್ ಸೋಯರ್ ಈ ಬಗ್ಗೆ ಟ್ವೀಟ್ ಮಾಡಿ, ಟರ್ಕಿಯ ಕರಾವಳಿ ನಗರ ಇಜ್ಮಿರ್‍ನಲ್ಲಿ ಕುಸಿದ ಅಪಾರ್ಟ್‍ಮೆಂಟ್ ಅವಶೇಷಗಳಡಿ ಅನ್ನನೀರು ಇಲ್ಲದೆ ಸಿಲುಕಿದ್ದ ಮಗುವನ್ನು ರಕ್ಷಿಸಲಾಗಿದೆ ಎಂದು ಐಡಾ ಳ ಚಿತ್ರವನ್ನು ತಮ್ಮ ಟ್ವಿಟರ್‍ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ವೇಳೆ ಪ್ರತಿ ಶವಗಳನ್ನು ಹೊರ ತೆಗೆಯುವಾಗ ತುಂಬ ನೋವು ಅನುಭವಿಸುತ್ತಿದ್ದೆವು. ನಾವು ಅನುಭವಿಸಿದ ದೊಡ್ಡ ನೋವಿನ ಜೊತೆಗೆ, ಈ ಮಗು ಜೀವಂತವಾಗಿರುವ ಸಂತೋಷವೂ ಇದೆ ಎಂದು ಭಾವುಕವಾಗಿ ನುಡಿದಿದ್ದಾರೆ.

ಇದೊಂದು ಪವಾಡ. ಐಡಾ ಪವಾಡದ ಹೆಸರು. ದೇವರೇ, ನಿಮ್ಮ ನಗು ಕಣ್ಣುಗಳಿಂದ ನಮಗೆ ಹೊಸ ಭರವಸೆ ನೀಡಲು ಧನ್ಯವಾದಗಳು ಎಂದು ಎಂದು ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಟ್ವೀಟ್ ಮಾಡಿದ್ದಾರೆ. ಭೂಕಂಪದಲ್ಲಿ ಕನಿಷ್ಠ 111 ಜನರು ಸಾವನ್ನಪ್ಪಿದ್ದು 994 ಮಂದಿ ಗಾಯಗೊಂಡಿದ್ದಾರೆ.

Facebook Comments