ಸರ್ಕಾರ ಪ್ಯಾಕೇಜ್ ಘೋಷಿಸಿ ಐದು ದಿನಕಳೆದರೂ ಇನ್ನು ಪ್ರಾರಂಭವಾಗದ ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 24- ಸಂಕಷ್ಟ ಕಾಲದಲ್ಲಿ ಚಾಲಕರಿಗೆ, ವೃತ್ತಿನಿರತರಿಗೆ ಆರ್ಥಿಕ ನೆರವು ನೀಡುವುದಾಗಿ ಪ್ಯಾಕೇಜ್ ಘೋಷಿಸಿರುವ ರಾಜ್ಯ ಸರ್ಕಾರ ಈವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶವನ್ನೇ ನೀಡಿಲ್ಲ. ಚಾಲಕರಿಂದ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ಅರ್ಜಿ ಸ್ವೀಕರಿಸಲಿದೆ. ಉಳಿದಂತೆ ಕ್ಷೌರಿಕರು, ಅಗಸರು, ಹಮಾಲಿಗಳು, ಅಕ್ಕಸಾಲಿಗರು, ಕುಂಬಾರರು, ಮೆಕ್ಯಾನಿಕಗಳು, ಕಮ್ಮಾರರು, ಗೃಹ ಕಾರ್ಮಿಕರು, ಚಮ್ಮಾರರು ಸೇರಿದಂತೆ ಇತರಿಂದ ಕಳೆದ ವರ್ಷ ಕಾರ್ಮಿಕ ಇಲಾಖೆ ಅರ್ಜಿ ಸ್ವೀಕರಿಸಿತ್ತು.

ಈ ವರ್ಷ ಪ್ಯಾಕೇಜ್ ಘೋಷಣೆ ಮಾಡಿ ಸುಮಾರು 3.04 ಲಕ್ಷ ಮಂದಿಗೆ ನೆರವು ನೀಡುವುದಾಗಿ ತಿಳಿಸಲಾಗಿದೆ. ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿ ಐದು ದಿನಗಳಾಗಿವೆ. ಈವರೆಗೂ ಅರ್ಜಿ ಸಲ್ಲಿಕೆ ಚಾಲುಗೊಂಡಿಲ್ಲ. ಪ್ಯಾಕೇಜ್ ಘೋಷಣೆಯ ಬಳಿಕ ಎಲ್ಲಾ ಇಲಾಖೆಗಳು ಚುರುಕುಗೊಂಡು ಅರ್ಜಿ ಸಲ್ಲಿಕೆಗೆ ಪ್ರತ್ಯೇಕ ಸಾಫ್ಟವೇರ್ ಲಿಂಕ್ ಅಳವಡಿಲು ಮುಂದಾಗಿವೆ. ಅದರ ಕೆಲಸ ಇನ್ನೂ ಪ್ರಗತಿಯಲ್ಲಿದೆ.

ಅದು ಮುಗಿದು ಅರ್ಜಿ ಸಲ್ಲಿಕೆ ಆರಂಭವಾಗುವ ವೇಳೆಗೆ ಈ ತಿಂಗಳು ಕಳೆದಿರುತ್ತದೆ, ಅಲ್ಲಿಂದ ಅರ್ಜಿ ಸಲ್ಲಿಕೆಗೆ ಒಂದು ವಾರ ಕಾಲಾವಕಾಶ ನೀಡಲಾಗುತ್ತೆ. ಅಷ್ಟರಲ್ಲಿ ಜೂನ್ 7 ಸಮೀಪಿಸಿರುತ್ತದೆ. ಬಹುತೇಕ ಸೋಂಕಿನ ಪ್ರಕರಣಗಳು ಕಡಿಮೆಯಾಗಿವೆ ಎಂದು ಹೇಳಿ ಲಾಕ್ ಡೌನ್ ಮುಕ್ತ ಗೊಳಿಸಲಾಗುತ್ತದೆ.

ಜನ ಜೀವನ ಸಹಜ ಸ್ಥಿತಿಗೆ ಬಂದ ಮೇಲೆ ಫಲಾನುಭವಿಗಳು ತಾವಾಯಿತು ತಮ್ಮ ದುಡಿಮೆಯಾಯಿತು ಎಂದು ತೊಡಗಿಸಿಕೊಳ್ಳುತ್ತಾರೆ. ಸರ್ಕಾರ ಕೊಡುವ 2500, 3 ಸಾವಿರ ರೂಪಾಯಿಗೆ ಅರ್ಜಿ ಸಲ್ಲಿಸಿ ದಿನ ಗಟ್ಟಲೆ ಅಲೆಯುವವರ ಸಂಖ್ಯೆ ಕಡಿಮೆ. ಬೆರಳೆಣಿಕೆಯಷ್ಟು ಮಂದಿ ಅರ್ಜಿ ಸಲ್ಲಿಸುತ್ತಾರೆ. ಸರ್ಕಾರವೂ ಅರ್ಜಿ ಸಲ್ಲಿಸಿದವರಿಗೆ ಪರಿಹಾರ ಕೊಟ್ಟಿದ್ದೇವೆ ಎಂದು ಹೇಳಿಕೊಂಡು ಹೆಮ್ಮೆ ಪಟ್ಟುಕೊಳ್ಳಲಿದೆ.

ಊಟಕ್ಕೆ ಇಲ್ಲದ ಉಪ್ಪಿನಕಾಯಿಯಂತಾಗಿಗೆ ಸರ್ಕಾರದ ಪ್ಯಾಕೇಜ್ ಸ್ಥಿತಿ. ಸಂಕಷ್ಟ ಇರುವುದು ಈಗ. ಘೋಷಿತ ಪ್ಯಾಕೇಜ್ ಮೊತ್ತ ಕಡಿಮೆ ಇದ್ದರೂ ಸರಿ, ಕನಿಷ್ಠ ಲಾಕ್ ಡೌನ್ ಸಂದರ್ಭದಲ್ಲಿ ಅದು ಕೈಗೆ ಸಿಕ್ಕಿದ್ದರೆ ಎಷ್ಟೋ ಜನ ಸರ್ಕಾರದ ಉಪಕಾರವನ್ನು ಸ್ಮರಿಸಿಕೊಳ್ಳುತ್ತಿದ್ದರು.

ಆದರೆ ಸರ್ಕಾರ ಕೊಟ್ಟ ಹಾಗೂ ಹಾಗಬೇಕು, ಬೋಕ್ಕಸಕ್ಕೆ ನಷ್ಟವೂ ಆಗಬಾರದು ಎಂಬ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆ. ಒತ್ತಾಯಕ್ಕೆ ಮಣಿದು ಪ್ಯಾಕೇಜ್ ಘೋಷಣೆ ಮಾಡಿದೆ, ಆದರೆ ಅದರೆ ಅರ್ಜಿ ಸ್ವೀಕಾರವನ್ನೇ ವಿಳಂಬ ಮಾಡಿದೆ.

ಕಳೆದ ವರ್ಷ ಪ್ಯಾಕೇಜ್ ಕೊಟ್ಟ ಅನುಭವ ಇರುವ ಸರ್ಕಾರ ಈ ವರ್ಷ ಆರ್ಥಿಕ ನೆರವು ಘೋಷಣೆ ಮಾಡುತ್ತಿದ್ದಂತೆ ತಕ್ಷಣವೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕಿತ್ತು. ಆದರೆ ಪ್ಯಾಕೇಜ್ ಘೋಷಣೆಯಾದ ಎರಡು ದಿನಗಳ ಬಳಿಕ ಆಯಾ ಇಲಾಖೆಗಳು ಅರ್ಜಿ ಸ್ವೀಕಾರದ ಪ್ರಕ್ರಿಯೆಗೆ ಸಿದ್ಧತೆ ನಡೆಸಿದ್ದೇವೆ ಎಂದು ಹೇಳಿಕೆ ನೀಡಿವೆ.

ಸೇವಾ ಸಿಂಧು ಎಂಬ ಟೋಳ್ಳು ಲಿಂಕ್:

ಇನ್ನೂ ಸರ್ಕಾರ ಸೇವಾ ಸಿಂಧು ವೆಬ್ ಫೋರ್ಟಲ್ ಮತ್ತು ಅಪ್ಲಿಕೇಷನ್ ಮೂಲಕ ಅರ್ಜಿ ಸ್ವೀಕರಿಸಲಿದೆ. ಸೇವಾ ಸಿಂಧು ಲಿಂಕ್ ಅನ್ನು ಸರ್ಕಾರ ಬಹುತೇಕ ವೆಬ್ ಸೈಟ್ ಗಳಿಗೆ ಲಿಂಕ್ ಮಾಡಲಾಗಿದೆ. ಅದರಲ್ಲಿ ಜನ್ಮ ಪ್ರಮಾಣ ಪತ್ರದಿಂದ ಹಿಡಿದು ಮರಣದವರೆಗೆ, ಆಸ್ತಿ ದಾಖಲಾತಿಗಳಿಂದ ಹಿಡಿದು ದಿವಾಳಿ ಸರ್ಟಿಫಿಕೆಟ್ ವರೆಗೆ ಎಲ್ಲವನ್ನು ಅದರಲ್ಲಿ ನೀಡುವುದಾಗಿ ಸರ್ಕಾರ ತಿಳಿಸಿದೆ. ಸುಮಾರು 67 ಪ್ರಮಾಣ ಸೇವೆಗಳು ಲಭ್ಯವಾಗಲಿವೆ ಎಂದು ಅಲ್ಲಿ ಲಿಂಕ್ ನೀಡಲಾಗಿದೆ. ನೀವು ಅದಕ್ಕೆ ಹೋಗಿ ಒಪನ್ ಮಾಡಿದರೆ ಅನಗತ್ಯವಾದ ಸೈಟ್ ಗಳು ತೆರೆದುಕೊಳ್ಳುತ್ತವೆ ಇಲ್ಲವೇ ಮತ್ತೇನೋ ಮೆಸೇಜ್ ಕಾಣಿಸುತ್ತದೆ.

ಸೇವಾ ಸಿಂಧು ಎಂಬುದು ಜನರನ್ನು ಯಾಮಾರಿಸುವ ಸಾಧನವಾದಂತಿದೆ.

ಯಾವತ್ತೋ ಪ್ಯಾಕೇಜ್ ಹಣ ಸಿಗುವುದಾದರೆ ಸಂಕಷ್ಟ ಕಾಲದಲ್ಲಿ ಜನ ಬದುಕುವುದಾದರೂ ಹೇಗೆ. ಜನರ ಕಷ್ಟಸುಖಗಳ ನಡುವೆ ಬೆಳೆದು ಬಂದ ಯಡಿಯೂರಪ್ಪ ಅವರಂತಹ ಅನುಭವಿ ಆಡಳಿತಗಾರರ ಕಾಲದಲ್ಲೂ ಅಧಿಕಾರಿಗಳು ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಾರೆ. ಅದನ್ನು ನೋಡಿಯೂ ಸರ್ಕಾರ ಮೌನ ಸಮ್ಮತಿ ಸೂಚಿಸುತ್ತದೆ ಎಂದರೆ ಎಂಬ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ.

Facebook Comments