ಇಡಿ ಇಂದ ಐಎಂಎ ಜುವ್ಯೆಲೆರ್ಸ್ ಹಗರಣದ ತನಿಖೆ, ಘಟಾನುಘಟಿಗಳಿಗೆ ಬಿಗ್ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.12- ಕರ್ನಾಟಕ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ಭಾರೀ ಸದ್ದು ಮಾಡಿರುವ ಐಎಂಎ ಜುವ್ಯೆಲೆರ್ಸ್ ವಂಚನೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ(ಇಡಿ) ಕೈಗೆತ್ತಿಕೊಳ್ಳಲು ಮುಂದಾಗಿದೆ.

ಐಎಂಎ ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಮತ್ತಿತರ ಕಡೆ ವಹಿವಾಟು ನಡೆಸಿರುವುದು ಕಂಡು ಬಂದಿದೆ. ಅಂತರಾಜ್ಯಗಳ ಪ್ರಕರಣವಾಗಿರುವುದರಿಂದ ಇಡಿ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಲು ಮುಂದಾಗಿದೆ.

ನಿನ್ನೆಯಷ್ಟೆ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ವಿಶೇಷ ತನಿಖಾದಳ(ಎಸ್‍ಐಟಿ) ಮೂಲಕ ತನಿಖೆ ನಡೆಸಲು ಮುಂದಾಗಿತ್ತು. ಎಸ್‍ಐಟಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ತನಿಖೆ ನಡೆಸಬಹುದು.

ಐಎಂಎ ಬೇರುಗಳು ಬೇರೆ ಬೇರೆ ರಾಜ್ಯಗಳಲ್ಲು ವ್ಯಾಪಿಸಿರುವುದರಿಂದ ಮುಕ್ತ ಮತ್ತು ಸ್ವತಂತ್ರವಾಗಿ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಡಿ ಮೂಲಕವೇ ತನಿಖೆ ನಡೆಸುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ.

ಸಾಮಾನ್ಯವಾಗಿ ಯಾವುದೇ ಪ್ರಕರಣವನ್ನು ಸಿಬಿಐ ಇಲ್ಲವೆ ಇಡಿಯಿಂದ ತನಿಖೆ ನಡೆಸಬೇಕಾದರೆ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯ ಎಂಬ ನಿಯಮವಿದೆ. ಆದರೆ ಬಹಕೋಟಿ ವಂಚನೆ ಪ್ರಕರಣ ಬೇರೆ ಬೇರೆ ರಾಜ್ಯಗಳಿಗೆ ವ್ಯಾಪಿಸಿದಾಗ ಯಾವುದೇ ರಾಜ್ಯದ ಸರ್ಕಾರ ಒಪ್ಪಿಗೆಯನ್ನು ಪಡೆಯದೇ ಸ್ವತಂತ್ರವಾಗಿ ತನಿಖೆ ನಡೆಸಲು ಕಾನೂನಿನಲ್ಲಿ ಅವಕಾಶವಿದೆ.

ಐಎಂಎ ಸುಮಾರು 5000ಕೋಟಿಗೂ ಹೆಚ್ಚು ವಹಿವಾಟು ನಡೆಸಿದ್ದು, 5ಕೋಟಿಗೂ ಮೇಲೂ ವಂಚನೆಯಾಗಿದ್ದರೆ ಸರ್ಕಾರದ ಒಪ್ಪಿಗೆಯನ್ನು ಪಡೆಯದೆ ಕೇಂದ್ರ ಯಾವುದೇ ತನಿಖಾ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಬಹುದು.

ಇದೀಗ ಬೇರೆ ಬೇರೆ ರಾಜ್ಯಗಳಲ್ಲೂ ಐಎಂಎ ಸಾರ್ವಜನಿಕರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿರುವುದರಿಂದ ಇದರ ಜಾಲವನ್ನು ಇಡಿಯಿಂದಲೇ ಬೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

# ಘಟಾನುಘಟಿಗಳು ಭಾಗಿ:
ಈ ಪ್ರಕರಣದಲ್ಲಿ ಅನೇಕ ನಾಯಕರು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.  ಶಿವಾಜಿನಗರದ ಶಾಸಕ ರೋಷನ ಬೇಗ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮ್ಮದ್ 5ಕೋಟಿ ಇದೇ ಸಂಸ್ಥೆಯಿಂದ ಸಾಲ ಪಡೆದಿರುವುದು, ಬಿಬಿಎಂಪಿ ಸದಸ್ಯರು ಬಂಡವಾಳ ಹೂಡಿಕೆ ಮಾಡಿರುವುದು, ಸರ್ಕಾರಿ ಮತ್ತು ನಿವೃತ್ತ ಅಧಿಕಾರಿಗಳು ಕೂಡ ಹಣದ ಆಸೆಗಾಗಿ ಹೂಡಿಕೆ ಮಾಡಿರುವುದು ಬಹಿರಂಗಗೊಂಡಿದೆ.

ಎಸ್‍ಐಟಿಯಿಂದ ಪ್ರಭಾವಿ ವ್ಯಕ್ತಿಗಳನ್ನು ಮುಕ್ತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ರಾಜಕೀಯ ಹಸ್ತಕ್ಷೇಪ ಕಂಡು ಬರುವುದರಿಂದ ವಂಚಿತರಿಗೆ ನ್ಯಾಯ ಸಿಗುವುದು ಮರೀಚಿಕೆಯಾಗುತ್ತದೆ. ಅಲ್ಲದೆ ಯಾರನ್ನು ರಾಜಕೀಯವಾಗಿ ಹಣಿಯಲು ಎಸ್‍ಐಟಿಯನ್ನು ದುರುಪಯೋಗ ಪಡಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಇದೆಲ್ಲ ಕಳಂಕದಿಂದ ಹೊರಬರುವ ಉದ್ದೇಶದಿಂದಲೇ ಇಡಿ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಕೇಂದ್ರ ಸಂಸ್ಥೆಗಳಿಂದಲೆ ತನಿಖೆ ನಡೆಸುವ ಬಗ್ಗೆ ಮುಕ್ತ ಮನಸ್ಸು ಹೊಂದಿದ್ದಾರೆ.

ಈಗಾಗಲೇ ಎಸ್‍ಐಟಿ ಕೂಡ ಇದೇ ಸೂಚನೆಯನ್ನು ಕೊಟ್ಟಿದ್ದು, ಮುಕ್ತ ಮತ್ತು ನ್ಯಾಯ ಸಮ್ಮತ ತನಿಖೆ ನಡೆಸುವಂತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ, ಎಷ್ಟೇ ಪ್ರಭಾವಿಗಳಾಗಿರಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ವಂಚಿತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಗೃಹ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

#ದೂರಿನ ಸುರಿಮಳೆ:
ಇನ್ನೂ ಬೆಂಗಳೂರಿನ ಶಿವಾಜಿನಗರದಲ್ಲಿರುವ ಐಎಂಎ ಕಚೇರಿ ಬಳಿ ಇಂದು ಕೂಡ ಹಣ ಕಳೆದುಕೊಂಡು ಬೀದಿಪಾಲಾಗಿರುವ ಸಾವಿರಾರು ಜನ ದೂರು ಕೊಡಲು ಆಗಮಿಸಿದ್ದರು.

ಕಳೆದ ರಾತ್ರಿಯಿಂದಲೇ ಮನೆ-ಮಠ ಬಿಟ್ಟು, ಕುಟುಂಬದ ಸದಸ್ಯರೊಂದಿಗೆ ಆಗಮಿಸಿದ್ದ ನೊಂದವರು ಪ್ರತ್ಯೇಕ ಕೌಂಟರ್‍ಗಳಲ್ಲಿ ದೂರು ನೀಡುತ್ತಿರುವ ದೃಶ್ಯ ಕಂಡು ಬಂತು.

ಬೆಂಗಳೂರು ಮಾತ್ರವಲ್ಲದೆ ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಸೇರಿದಂತೆ ಬೇರೆ ಬೇರೆ ಸ್ಥಳಗಳಿಂದ ಆಗಮಿಸಿದ್ದ ನೂರಾರು ಮಂದಿ ಹಿಡಿಕಣ್ಣೀರು ಹಾಕಿ, ಹಿಡಿಶಾಪ ಹಾಕುತ್ತಲೇ ದೂರು ನೀಡುತ್ತಿದ್ದ ದೃಶ್ಯ ಸರ್ವೆ ಸಾಮಾನ್ಯವಾಗಿತ್ತು.

Facebook Comments

Sri Raghav

Admin