ಕರೋನಾ : ಸರ್ಕಾರದ ಆದೇಶಕ್ಕೂ ಕ್ಯಾರೇ ಅನ್ನದ ಧನದಾಹಿ ಶಿಕ್ಷಣ ಸಂಸ್ಥೆಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.14- ಇಡೀ ರಾಜ್ಯವೇ ಕೊರೊನಾ ಭೀತಿ ಆತಂಕ ಎದುರಿಸುತ್ತಿದೆ. ಆದರೆ, ಧನದಾಹಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶುಲ್ಕ ವಸೂಲಿಯಲ್ಲಿ ತೊಡಗಿವೆ.  1 ರಿಂದ 6ನೆ ತರಗತಿವರೆಗೆ ಬೇಸಿಗೆ ರಜೆ ಘೋಷಣೆ ಮಾಡಬೇಕೆಂದು ಸರ್ಕಾರ ಆದೇಶ ನೀಡಿದೆ. ಆದರೆ, ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇನ್ನೂ ಪರೀಕ್ಷೆ ನಡೆದಿರಲಿಲ್ಲ. ಪ್ರವೇಶ ಪತ್ರ ಕೊಡುವ ನೆಪದಲ್ಲಿ ಶುಲ್ಕ ವಸೂಲಿ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದ ಈ ಆದೇಶದಿಂದ ಅನಾನುಕೂಲವಾಗಿದೆ.

ಹಾಗಾಗಿ ಕೆಲವೆಡೆ ರಜೆಯನ್ನೂ ಘೋಷಿಸದೆ ಶಾಲೆಗೆ ಬರುವಂತೆ ಸೂಚಿಸಿರುವ ಘಟನೆಗಳು ಕಂಡುಬಂದಿವೆ. ಮುಂದಿನ ತರಗತಿಗೆ ಬಡ್ತಿ ನೀಡಬೇಕಾದರೆ ಎಲ್ಲ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ. ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ಹಲವು ಶಾಲೆಗಳ ಮುಖ್ಯಸ್ಥರು ಪೋಷಕರಿಗೆ ಮೆಸೇಜ್ ರವಾನಿಸಿದ್ದಾರೆ.

ಈಗಾಗಲೇ 1 ರಿಂದ 6ರ ವರೆಗೆ ಈ ಹಿಂದೆ ನಡೆದ ಟೆಸ್ಟ್‍ಗಳನ್ನು ಆಧರಿಸಿ ಫಲಿತಾಂಶ ನೀಡಬೇಕೆಂದು ಸರ್ಕಾರ ಆದೇಶಿಸಿದ್ದರೂ ಹಲವೆಡೆ ಸರ್ಕಾರದ ಆದೇಶವನ್ನೂ ಲೆಕ್ಕಿಸದೆ 6ನೆ ತರಗತಿಯ ಮಕ್ಕಳಿಗೂ ಪರೀಕ್ಷೆ ನಡೆಸುತ್ತಿರುವುದು ಕಂಡುಬಂದಿದೆ. ಇದು ಶುಲ್ಕ ವಸೂಲಿ ದಂಧೆಯ ಕರಾಳ ಮುಖವಾಡವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಭೀತಿ ಎದುರಾಗಿದೆ. ಯಾವಾಗ, ಎಲ್ಲಿ, ಯಾರಿಗೆ ಹರಡುತ್ತದೆ, ಯಾರು ಈ ಸೋಂಕಿನಿಂದ ಬಳಲುತ್ತಾರೆ, ಸಾಯುತ್ತಾರೆ ಎಂಬ ಆತಂಕದಲ್ಲಿ ಸರ್ಕಾರ ಮತ್ತು ಸಾರ್ವಜನಿಕರು ಇದ್ದಾರೆ. ಆದರೆ, ಈ ಶಿಕ್ಷಣ ಸಂಸ್ಥೆಯವರು ಪರೀಕ್ಷೆಯ ನೆಪದಲ್ಲಿ ಸುಲಿಗೆಯಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

6ನೆ ತರಗತಿವರೆಗೆ ಯಾವುದೇ ಪರೀಕ್ಷೆ ಬೇಡ. ರಜೆ ಕೊಟ್ಟು ಕಳುಹಿಸಿ ಎಂದು ಸರ್ಕಾರವೇ ಆದೇಶ ನೀಡಿದೆ. ಆದರೆ, ಕೆಲವು ಶಿಕ್ಷಣ ಸಂಸ್ಥೆಗಳು ಇದನ್ನು ಕೇರ್ ಮಾಡದೆ ಇರುವುದು ಎಷ್ಟು ಸಮಂಜಸ. ಮಕ್ಕಳು ಮೊದಲೇ ಸೂಕ್ಷ್ಮವಾಗಿರುತ್ತಾರೆ. ಮಕ್ಕಳಿಗೆ ಈ ರೋಗದ ಸೋಂಕು ತಗುಲಿದರೆ ಗುಣಪಡಿಸುವುದು ಕಷ್ಟಸಾಧ್ಯವಾಗುತ್ತದೆ. ಇದನ್ನು ಶಿಕ್ಷಣ ಸಂಸ್ಥೆಗಳವರು ಮನಗಾಣಬೇಕು. ಶಾಲೆಯ ಶುಲ್ಕವನ್ನು ಇಂದು ಅಥವಾ ಮುಂದಿನ ಪ್ರವೇಶದ ಸಂದರ್ಭದಲ್ಲಾದರೂ ವಸೂಲು ಮಾಡಬಹುದಾಗಿದೆ. ರೋಗ ಭೀತಿಯ ಆತಂಕದಲ್ಲೇ ವಸೂಲಿ ಮಾಡುವ ಅಗತ್ಯವೇನಿದೆ..?

Facebook Comments