ಸಚಿವರ ಮನದಲ್ಲಿ ನೆಲೆನಿಂತ ವ್ಯಕ್ತಿಯ ಮುಗ್ದತೆ
ಬೆಂಗಳೂರು, ಜ.24- ಸಾರ್ವಜನಿಕ ಬದುಕಿನಲ್ಲಿ ರುವವರಿಗೆ ಎದುರಾಗುವ ಕೆಲವು ಪ್ರಸಂಗಗಳು ನಮ್ಮ ಜವಾಬ್ದಾರಿ ಹೆಚ್ಚಿಸುವ, ಎಚ್ಚರಿಕೆ ನೀಡುವ ಮತ್ತು ಕೆಲವೊಮ್ಮೆ ಇರಿಸು ಮುರಿಸು ಉಂಟು ಮಾಡುತ್ತದೆ.ಇಂತಹ ಒಂದು ಪ್ರಸಂಗ ಎದುರಿಸಿದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು. ಅವರೇ ಸ್ವತಃ ಹೇಳಿಕೊಂಡಿದ್ದು , ಸಾಮಾನ್ಯ ಜನರ ನಂಬಿಕೆ ಕಂಡು ಮೂಕ ವಿಸ್ಮಿತನಾದೆ ಎಂದಿದ್ದಾರೆ.
ಆ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ…. ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ಸು ಬರುತ್ತಿದ್ದಾಗ, ಬೆಳಗ್ಗಿನ ಜಾವದ ಆ ವಾತಾವರಣದಲ್ಲಿ ಸ್ವಲ್ಪ ದೂರ ನಡೆಯೋಣ ಎಂದೆನಿಸಿ ಹೈ ವೇನಲ್ಲಿ ನಡೆಯಲು ಪ್ರಾರಂಭಿಸಿದೆ.
ಸ್ವಲ್ಪ ದೂರ ನಡೆದ ನಂತರ ನನ್ನ ಮುಂದೆ ಒಂದು ಟಿವಿಎಸ್ 50 ಗಾಡಿ ನಿಂತುಕೊಂಡಿತು. ಓರ್ವ ವ್ಯಕ್ತಿ ನನ್ನನ್ನು ಮಾತನಾಡಿಸಲು ಬಂದರು.
ವಿಜಯ ಕುಮಾರ್ ಎಂದು ಅವರ ಹೆಸರು. ಹತ್ತಿರದ ಹಳ್ಳಿಯೊಂದರಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ಸಣ್ಣ ವ್ಯಾಪಾರ ಮಾಡುತ್ತಿದ್ದಾರೆ. ನನ್ನ ಬಳಿ ಬಂದು , ನನ್ನೊಡನೆ ಮಾತನಾಡುವಾಗ ತಮ್ಮ ಚಪ್ಪಲಿ ಬಿಟ್ಟೇ ಮಾತನಾಡತೊಡಗಿದ ವಿಜಯಕುಮಾರ್ರವರು ಎಷ್ಟೇ ಹೇಳಿದರೂ ಚಪ್ಪಲಿ ಹಾಕಿಕೊಳ್ಳಲಿಲ್ಲ.
ತಮ್ಮ ಮಕ್ಕಳ ಶಾಲೆ ತರಗತಿ ( 2 ಮತ್ತು 4 ನೆ ತರಗತಿಗಳು) ಯಾವಾಗ ಪ್ರಾರಂಭವಾಗುತ್ತದೆ ಎಂದು ಕೇಳುವುದು ಅವರ ಮುಖ್ಯ ಉದ್ದೇಶವಾಗಿತ್ತು. ಅವರ ಆ ನಡೆ-ನುಡಿ ಹಾಗೂ ಆ ವ್ಯಕ್ತಿಯ ಮುಗ್ಧತೆ ನನ್ನ ಮನಸ್ಸನ್ನು ಬಹಳಷ್ಟು ಸಮಯ ಕಾಡಿತು.
ಇಂತಹ ಪ್ರಸಂಗಗಳು ಕೆಲವೊಮ್ಮೆ ಮುಜುಗರ ಉಂಟು ಮಾಡುವ ಜೊತೆಗೆ ಇಂತಹವರು ಸಹ ನನ್ನ ಮೇಲೆ ಇಟ್ಟಿರುವ ಭಾವನೆ ನನ್ನ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ ಎಂದು ಬರೆದುಕೊಂಡಿದ್ದಾರೆ.