ಮಕ್ಕಳಿಗೆ ಪರೀಕ್ಷೆ ಶಿಕ್ಷೆಯಲ್ಲ ಎಂಬ ಭಾವನೆ ಮೂಡಿಸಿ : ಸುರೇಶ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಮಕ್ಕಳಿಗೆ ಪರೀಕ್ಷಾ ಕೊಠಡಿಗಳೆಂದರೆ ಆಟದ ಕ್ರೀಡಾಂಗಣಗಳಿದ್ದಂತೆ ಎಂಬ ವಾತಾವರಣ ಮೂಡಿಸಿ ಮಕ್ಕಳನ್ನು ಯಾವುದೇ ಭಯ, ಖಿನ್ನತೆ, ಹಿಂಜರಿಕೆಗಳಿಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸುವಂತಹ ಮನಸ್ಥಿತಿಯನ್ನು ಮೂಡಿಸಲು ಕ್ರಮ ವಹಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಮಕ್ಕಳಲ್ಲಿ ಕಲಿಕಾ ಸಾಮಥ್ರ್ಯ ಹೆಚ್ಚಿಸುವ, ಎಸ್.ಎಸ್.ಎಲ್.ಸಿ. ಪರೀಕ್ಷೆ ಸಿದ್ಧತೆ ಕುರಿತಂತೆ ಜಿಲ್ಲಾಡಳಿತಗಳು ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲೆಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರೊಂದಿಗೆ ಶುಕ್ರವಾರ ನಡೆಸಿದ ವಿಡಿಯೊ ಕಾನ್ಫೆರೆನ್ಸ್ನಲ್ಲಿ ಮಾತನಾಡಿದ ಅವರು, ‘ಪರೀಕ್ಷಾ ಕೊಠಡಿಯೆಂದರೆ ಯುದ್ಧಭೂಮಿಯಲ್ಲ, ಅದು ಕ್ರೀಡಾಂಗಣವಿದ್ದಂತೆ’ ಎಂಬ ಮನಸ್ಥಿತಿಯನ್ನು ಮಕ್ಕಳಲ್ಲಿ ಮೂಡಿಸಿ ಮಕ್ಕಳನ್ನು ಹೆಚ್ಚು ಅಂಕಗಳ ಮೂಲಕ ಉತ್ತೀರ್ಣರಾಗಲು ಉತ್ತೇಜನ ನೀಡಬೇಕೆಂದರು.

ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದ ಸುಧಾರಣೆಗೆ ಕೈಗೊಂಡ ಕ್ರಮಗಳ ಕುರಿತು ಎಲ್ಲ ಸಿಇಒ-ಡಿಡಿಪಿಐಗಳಿಂದ ಮಾಹಿತಿ ಪಡೆದ ಸಚಿವರು, ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ವಿವಿಧ ಜಿಲ್ಲೆಗಳಲ್ಲಿ ಕೈಗೊಂಡಿರುವ ಉತ್ತಮ ಕ್ರಮಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿದರು.

ಪ್ರಶ್ನೆ ಪತ್ರಿಕೆ ರಚನೆ, ಪರೀಕ್ಷೆಗಳನ್ನು ಯಾವುದೇ ಭಯವಿಲ್ಲದೇ ಎದುರಿಸುವುದು, ಮಕ್ಕಳು ಪರೀಕ್ಷಾ ಸಮಯದಲ್ಲಿ ಆರೋಗ್ಯ ಕೆಡಿಸಿಕೊಳ್ಳದಂತೆ ಉತ್ತಮ ಆಹಾರ ಪದ್ಧತಿ ಪ್ರೇರೇಪಣೆಗೆ ಕ್ರಮ ಕೈಗೊಳ್ಳುವುದು, ಮಕ್ಕಳು ಮೊಬೈಲ್ ಫೋನ್ ಬಳಸದಂತೆ ಕ್ರಮ ಕೈಗೊಳ್ಳುವುದು, ಪರೀಕ್ಷೆಗಳು ಹತ್ತಿರವಾಗಿರುವುದರಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಮನೆಗಳಲ್ಲಿ ಸಂಜೆ ಪೋಷಕರು ಟಿವಿ ವೀಕ್ಷಣೆ ಮಾಡುವುದನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತು ಹಾಗೆಯೇ ವಿದ್ಯಾರ್ಥಿಗಳ ಪೋಷಕರಿಗೆ ಪ್ರತಿದಿನ ನಸುಕಿನಲ್ಲಿ ಫೋನ್ಗೆ ಮಿಸ್ಕಾಲ್ ನೀಡಿ ಮಕ್ಕಳನ್ನು ಬೇಗನೆ ಎಬ್ಬಿಸಿ ಓದಿಕೊಳ್ಳಲು ಅನುವು ಮಾಡಿಕೊಡಲು ಕ್ರಮ ಕೈಗೊಂಡಿರುವುದು ಸೇರಿದಂತೆ ಸಿಇಒಗಳು ತಮ್ಮತಮ್ಮ ಜಿಲ್ಲೆಗಳಲ್ಲಿ ಕೈಗೊಂಡಿರುವ ಹಲವು ಉತ್ತಮ ಕ್ರಮಗಳ ಕುರಿತು ಸಚಿವರ ಗಮನಕ್ಕೆ ತಂದರು.

ಅಧಿಕಾರಿಗಳು ಫಲಿತಾಂಶ ಉತ್ತಮ ಪಡಿಸುವ ಭರದಲ್ಲಿ ಶಾಲೆಗಳ ಶಿಕ್ಷಕರಿಗೆ ಎಚ್ಚರಿಕೆ ನೀಡುವುದರಿಂದ ಅದು ವ್ಯತಿರಿಕ್ತ ಪರಿಣಾಮ ಬೀರಿ ಪ್ರಾಮಾಣಿಕ ಪರೀಕ್ಷಾ ಕ್ರಮಕ್ಕೆ ಧಕ್ಕೆಯಾಗಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದ ಸಚಿವರು, ನಿಧಾನಗತಿಯ ಕಲಿಕೆ ಹೊಂದಿದ ಮತ್ತು ಕಲಿಕೆಯಲ್ಲಿ ಹಿನ್ನಡೆಯಲ್ಲಿರುವ ಮಕ್ಕಳ ಕಡೆ ವಿಶೇಷ ಗಮನ ಹರಿಸಿ ಅವರು ಉತ್ತಮಗೊಳ್ಳುವಂತೆ ಮಾಡಲು ಶಾಲಾ ಸಮಯಕ್ಕೆ ಮೊದಲು ಮತ್ತು ನಂತರ ವಿಶೇಷ ತರಗತಿಗಳನ್ನು ನಡೆಸಬೇಕೆಂದು ಸೂಚಿಸಿದರು.

# ಶಾಲಾರಂಭದ ದಿನವೇ ಅತಿಥಿ ಶಿಕ್ಷಕರ ನೇಮಕ ಪೂರ್ಣ:
ಒಂದೆರಡು ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆಯ ಸಮಸ್ಯೆ ಕುರಿತಂತೆ, ಶಾಲಾ ಶಿಕ್ಷಕರನ್ನು ನೇಮಕವಾಗುವ ತನಕ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸಚಿವ ಸುರೇಶ್ ಕುಮಾರ್ ಸಲಹೆ ನೀಡಿದರು. ಹಾಗೆಯೇ ಇನ್ನು ಮುಂದೆ ಜೂನ್ ಒಂದನೇ ತಾರೀಖಿನಿಂದಲೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಈಗಾಗಲೇ ತಾವು ಇಲಾಖಾಧಿಕಾರಿಗಳಿಗೆ ಸೂಚಿಸಿದ್ದು, ಮುಂದಿನದಿನಗಳಲ್ಲಿ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಭರವಸೆ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಸುಧಾರಣೆಗೆ ಚಿಕ್ಕಬಳ್ಳಾಪುರ ಜಿಲ್ಲೆ, ರಾಯಚೂರು, ಮಂಡ್ಯ ಜಿಲ್ಲೆ, ಧಾರವಾಡ ಶೈಕ್ಷಣಿಕ ವಲಯ ಮತ್ತು ಬೆಂಗಳೂರು ನಗರ ಜಿಲ್ಲೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಹಲವಾರು ಉತ್ತಮ ಕ್ರಮಗಳನ್ನು ಕೈಗೊಂಡಿದ್ದು ಅವುಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದರು.ಫಲಿತಾಂಶದಲ್ಲಿ ತೀವ್ರ ಹಿನ್ನಡೆಯಲ್ಲಿರುವ ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳ ಅಧಿಕಾರಿಗಳಿಗೆ ನೀವೆಲ್ಲಾ ಮೊದಲನೇ ಸ್ಥಾನಕ್ಕೆ ಬರುವ ಸಾಕಷ್ಟು ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳಬೇಕೆಂದರು.

ಅಂತೆಯೇ ಪರೀಕ್ಷಾ ಸುಧಾರಣೆಗೆ ಶಿಕ್ಷಣ ತಜ್ಞರು, ಸ್ವಯಂ ಸೇವಾ ಸಂಸ್ಥೆಗಳು, ಕೆಲ ನಿವೃತ್ತ ಹಾಗೂ ಖಾಸಗಿ ಸಂಸ್ಥೆಗಳ ಉಪನ್ಯಾಸಕರ ಸೇವೆ ಬಳಸಿಕೊಳ್ಳಬಹುದು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಫಲಿತಾಂಶ ಉತ್ತಮ ಪಡಿಸಲು ಕೈಗೊಂಡಿರುವ ಕ್ರಮಗಳನ್ನು ಪ್ರಶಂಶಿಸಿದ ಸಚಿವರು, ಪೂರ್ವಸಿದ್ಧತಾ ಪರೀಕ್ಷೆಗಳನ್ನು ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳಲ್ಲೇ ಬರೆಯುವ ಮೂಲಕ ಹೊಸ ಪರೀಕ್ಷಾ ಸ್ಥಳ ಎಂಬ ಭಾವನೆ ಮೂಡದಂತೆ ಕೈಗೊಂಡ ಕ್ರಮವನ್ನು ಶ್ಲಾಘಿಸಿದರು.

ಅಧಿಕಾರಿಗಳು ಶಾಲೆಗಳ ದತ್ತು ಪಡೆಯುವುದು, ಹಾಸ್ಟೆಲ್ಗಳಲ್ಲಿ ಕಾರ್ಯಪಡೆ ರಚಿಸುವುದು, ಪೋಷಕರು-ಶಿಕ್ಷಕರು-ಮಕ್ಕಳ ಸಭೆ ನಡೆಸುವುದು, ತಮ್ಮ ಮಕ್ಕಳು ಯಾವ ವಿಷಯದಲ್ಲಿ ಹಿನ್ನಡೆಯಲ್ಲಿದ್ದಾರೆಂದು ತಿಳಿಸಿ ಅವರನ್ನು ಹೆಚ್ಚು ಸಮಯ ಶಾಲೆಯಲ್ಲಿಟ್ಟುಕೊಳ್ಳುವ ಮೂಲಕ ವಿಶೇಷ ತರಗತಿಗಳನ್ನು ನಡೆಸಬೇಕೆಂದೂ ಸಚಿವರು ಸಲಹೆ ನೀಡಿದರು. ವಿಡಿಯೊ ಸಂವಾದದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾಶಿಇ ಆಯುಕ್ತ ಡಾ. ಕೆ.ಜಿ. ಜಗದೀಶ್ ಭಾಗವಹಿಸಿದ್ದರು.

Facebook Comments

Sri Raghav

Admin