ಖಾಸಗಿ ಶಾಲೆಗಳ ಆರ್.ಆರ್. ನವೀಕರಣ ನವೀಕರಣಕ್ಕೆ ಸಂಬಂಧಿಸಿದಂತೆ ಶೀಘ್ರ ಸಭೆ : ಸುರೇಶ್‌ ಕುಮಾರ್‌:

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಖಾಸಗಿ ಶಾಲೆಗಳ ನೋಂದಣಿ ನವೀಕರಣಕ್ಕೆ ಸಂಬಂಧಿಸಿದಂತೆ ಕೊರೋನಾ ಸಂದಭದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸಲು ಅಗ್ನಿ ಶಾಮಕ ದಳವೂ ಸೇರಿದಂತೆ ಅಧಿಕಾರಿಗಳ ಸಭೆಯನ್ನು ಇಷ್ಟರಲ್ಲಿಯೇ ನಡೆಸಿ ಅಗತ್ಯ ವಿನಾಯಿತಿ ನೀಡಲು ಸೂಚಿಸಲಾಗುವುದು ಎಂದು ಸಚಿವ ಎಸ್. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಸೋಮವಾರದಿಂದ ವಿಧಾನಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರಮುಖವಾಗಿ ಚರ್ಚಿಸಬೇಕಾದ ವಿಷಯಗಳ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್‌ ಬುಧವಾರ ಸಮಗ್ರಶಿಕ್ಷಣ ಕರ್ನಾಟಕ ಸಭಾಂಗಣದಲ್ಲಿ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಸದಸ್ಯರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೊರೋನಾ ಸೃಷ್ಟಿಸಿರುವ ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಸಮಸ್ಯೆಗಳ ಕುರಿತು ತಮಗೆ ಸಂಪೂರ್ಣ ಅರಿವಿದ್ದು, ಈ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದ ಅನುಮತಿಗಳನ್ನು ನೀಡುವಾಗ ನಿಯಮಾವಳಿಗಳನ್ನು ಸರಳೀಕರಣಗೊಳಿಸುವ ಅನಿವಾರ್ಯತೆ ಇದೆ ಎಂದರು.

ಶಿಕ್ಷಣ ತಜ್ಞರ ವರದಿಯನ್ವಯ ಕರೋನಾ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಅನುಷ್ಠಾನಗೊಳಿಸಿರುವ ವಿದ್ಯಾಗಮ ಯೋಜನೆ ಇಡೀ ರಾಷ್ಟ್ರದ ಗಮನ ಸೆಳೆದಿದ್ದು, ಹಲವು ರಾಜ್ಯಗಳು ಯೋಜನೆಯ ಉಪಯುಕ್ತತೆ ಕುರಿತು ಪ್ರಶಂಸೆ ವ್ಯಕ್ತಪಡಿಸಿವೆ ಎಂದು ಅವರು ತಿಳಿಸಿದರು.

ಸಂವೇದಾ ಕಾರ್ಯಕ್ರಮದ ಮೂಲಕ ದೂರದರ್ಶನದ ಚಂದನವಾಹಿನಿಯಲ್ಲಿ 8-10ನೇ ತರಗತಿಯ ಮಕ್ಕಳಿಗೆ ಪಾಠ ಪ್ರವಚನಗಳನ್ನು ನಡೆಸಲಾಗುತ್ತದೆ. 1-8ನೇ ತರಗತಿಯ ಮಕ್ಕಳಿಗೆ ಸ್ಥಳೀಯ ಕೇಬಲ್ ಚಾನೆಲ್‌ ಗಳ ಮೂಲಕ ತರಗತಿಗಳನ್ನು ನಡೆಸಲು ಕ್ರಮ ವಹಿಸಲಾಗುತ್ತಿದ್ದು, ಇಷ್ಟರಲ್ಲಿಯೇ ಪ್ರಾರಂಭವಾಗಲಿದೆ.

ಸಂವೇದಾ ತರಗತಿಗಳು ವಿದ್ಯಾಗಮದೊಂದಿಗೆ ಸಂಯೋಜನೆಗೊಂಡಿದ್ದು, ನಮ್ಮ ಇಲಾಖೆಯ ಯೂ-ಟೂಬ್‌ ಚಾನೆಲ್‌ ನಲ್ಲಿ ಸಹಾ ಲಭ್ಯವಿದ ಎಂದು ಅವರು ವಿವರಿಸಿದರು

# ಶುಲ್ಕ ಸಂಗ್ರಹಕ್ಕೆ ಅನುಮತಿ:
ಕೋವಿಡ್‌ ಹಿನ್ನೆಲೆಯಲ್ಲಿ ಸಮಾಜದ ಎಲ್ಲ ವರ್ಗಗಳ ಸಮಾನ ಸಮಸ್ಯಗಳಿಗೆ ಒಳಗಾದ ಕಾರಣ ಪಾಲಕರಿಂದ ಶುಲ್ಕ ಸಂಗ್ರಹಕ್ಕೆ ಒತ್ತಾಯ ಮಾಡಬಾರದೆಂದು ನಾವು ಆದೇಶಿಸಿದ್ದೆವು. ಬಜೆಟ್‌ ಶಾಲೆಗಳು ತೊಂದರೆಗೀಡಾದ್ದನ್ನು ಗಮನದಲ್ಲಿಟ್ಟುಕೊಂಡು ಹಾಗೂ ಖಾಸಗಿ ಶಾಲೆಗಳ ಶಿಕ್ಷಕರ ವೇತನಕ್ಕೆ ಸಮಸ್ಯೆಯಾಗಿರುವ ಅಂಶ ಪರಿಗಣಿಸಿ ಕಳೆದ ಹದಿನೈದು ದಿನಗಳ ಹಿಂದೆ ಶುಲ್ಕ ವಸೂಲಾತಿಗೆ ಅನುಮತಿ ನೀಡಲಾಗಿದೆ ಎಂದರು.

ಶಾಲಾ ಕಾಲೇಜುಗಳು ದಿಢೀರನೇ ಮುಚ್ಚಬೇಕಾದ ಸಂದರ್ಭ ಒದಗಿಬಂದ ಕಾರಣ ಶುಲ್ಕ ವಸೂಲಾತಿಯನ್ನು ನೆಪವಾಗಿಟ್ಟುಕೊಂಡು ಖಾಸಗಿ ಶಾಲೆಗಳು ಆನ್ ಲೈನ್ ಮೂಲಕ ಅವೈಜ್ಞಾನಿಕ ಬೋಧನೆಯನ್ನು ಪ್ರಾರಂಭಿಸಿದವು. ಹೆಚ್ಚುವರಿ ಶುಲ್ಕವನ್ನು ಪೋಷಕರಿಂದ ವಸೂಲಿ ಮಾಡಲು ಪ್ರಾರಂಭಿಸಿದ ಕಾರಣ ನಿಮ್ಹಾನ್ಸ್ ಸಂಸ್ಥೆಯ ಮಕ್ಕಳ ಮಾನಸಿಕ ತಜ್ಞರನ್ನು ಸಂಪರ್ಕಿಸಿ ಎಲ್ ಕೆ ಜಿ ಯಿಂದ ಐದನೇ ತರಗತಿವರೆಗೆ ಆನ್ ಲೈನ್ ಬೋಧನೆ ಮಾಡುವುದನ್ನು ನಿಷೇಧಿಸಿದೆವು.

ನಮ್ಮ ಸರ್ಕಾರದ ನಿರ್ಣಯಕ್ಕೆ ರಾಜ್ಯ ಘನ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿತು. ಅದೇ ಸಂದರ್ಭದಲ್ಲಿ ಇಡೀ ರಾಷ್ಟ್ರದಲ್ಲಿ ಮೊದಲ ಪ್ರಯತ್ನವಾಗಿ ಕೋವಿಡ್ ಸಂದರ್ಭದಲ್ಲಿ ಶಿಕ್ಷಣವನ್ನು ಮುಂದುವರೆಸಲು ಮಾರ್ಗಸೂಚಿಗಳ ಬಗ್ಗೆ ಹಿರಿಯ ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿ ರಚಿಸಿ ವರದಿಯನ್ನು ಪಡೆಯಲಾಯಿತು ಎಂದು ಅವರು ವಿವರಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವ ಸಂಬಂಧ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಗಟ್ಟಿಯಾದ ಕ್ರಿಯಾ ಯೋಜನೆಯನ್ನು ರೂಪಿಸುತ್ತಿದ್ದು, ಉನ್ನತ ಶಿಕ್ಷಣ ಇಲಾಖೆಯೊಂದಿಗೆ ಜೊತೆಗೂಡಿ ಇಷ್ಟರಲ್ಲಿಯೇ ವರದಿಯನ್ನು ಲೋಕಾರ್ಪಣೆಗೊಳಿಸಲಿದೆ. ಈ ನೀತಿಯನ್ನು ಅನುಷ್ಠಾನಗೊಳಿಸಲಿರುವ ಮೊದಲ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ.

ಮಧ್ಯಾಹ್ನದ ಬಿಸಿಯೂಟ ನೌಕರರದ್ದೂ ಸಹ ಸಮಸ್ಯೆಗಳಿವೆ. 15 ದಿನಗಳ ಹಿಂದೆ, ಕಳೆದ 3-4 ತಿಂಗಳ (ಜೂನ್-ಆಗಸ್ಟ್) ರೂ.93.46 ಕೋಟಿ ಸಂಭಾವನೆಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಉಳಿದ ಸಮಸ್ಯೆಗಳಾದ ಕನಿಷ್ಠ ವೇತನ, ಸೇರಿದಂತೆ ಹಲವನ್ನು ಬಗೆ ಹರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

ಅರ್ಥಿಕ ಮಿತವ್ಯಯದ ಹಿನ್ನೆಲೆಯಲ್ಲಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ನಿವೃತ್ತಿ, ನಿಧನ ಕಾರಣ ಖಾಲಿ ಯಾದ ಹುದ್ದೆಗಳನ್ನು ತುಂಬಲು ಆರ್ಥಿಕ ಇಲಾಖೆ ನಿರ್ಬಂಧ ಹೇರಿದೆ. ಇಷ್ಟರಲ್ಲಿಯೇ ಈ ಮಿತವ್ಯಯವನ್ನು ಸಡಿಲಿಸಲು ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ನೇಮಕಾತಿಯನ್ನು ಮುಂದುವರೆಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ವಿವರಿಸಿದರು. ಶಿಕ್ಷಕರ ಮತ್ತು ಉಪನ್ಯಾಸಕರ ವೇತನ ಬಡ್ತಿ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.

ಕೋವಿಡ್ ಸಂಕ್ರಮಣ ಕಾಲವು ಶಿಕ್ಷಣ ಇಲಾಖೆಗೆ ಬಹಳ ದೊಡ್ಡ ಸವಾಲುಗಳನ್ನು ತಂದೊಡ್ಡಿದೆ. ಕಳೆದ ಸಾಲಿನಲ್ಲಿ ಶಾಲಾಕಾಲೇಜುಗಳನ್ನು ಅವಧಿ ಪೂರ್ವದಲ್ಲಿ ಮುಚ್ಚಿ ಒಂದರಿಂದ ಒಂಭತ್ತನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸುವ ನಿರ್ಣಯವನ್ನು ತೆಗೆದುಕೊಳ್ಳಬೇಕಾಯಿತು.

ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ನಾವು ಎಸ್. ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಸಚಿವ ಸುರೇಶ್‌ ಕುಮಾರ್‌ ಕೊರೋನಾ ಕಾಲಘಟ್ಟದಲ್ಲಿ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಕೋವಿಡ್‌ ಸಂದರ್ಭದಲ್ಲಿ ಕೈಗೊಂಡ ಇಲಾಖೆಯ ಕ್ರಮಗಳನ್ನು ಸಭೆಯಲ್ಲಿ ಹಾಜರಿದ್ದ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಸದಸ್ಯರು ಮುಕ್ತಕಂಠದೊಂದಿಗೆ ಪ್ರಶಂಸಿಸಿ, ಇಲಾಖೆ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಶಿಕ್ಷಣ ಸಚಿವರಿಗೆ ತಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಹೇಳಿದ ವಿಧಾನಪರಿಷತ್‌ ಸದಸ್ಯರು ಭರವಸೆ ನೀಡಿದರು.

ವಿಧಾನಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಡಾ. ವೈ.ಎ. ನಾರಾಯಣ ಸ್ವಾಮಿ, ಅ.ದೇವೇಗೌಡ, ಹಣಮಂತ ಎಚ್. ನಿರಾಣಿ, ಎಸ್. ಎಲ್. ಭೋಜೇಗೌಡ ಮತ್ತಿತರರು ಹಾಜರಿದ್ದರು. ಕೆಲವರು ವೆಬಿನಾರ್‌ ಮೂಲಕ ಚರ್ಚೆಯಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin