“ರಾಜ್ಯದ ಒಳಿತು, ಕೆಡಕಿನ ಬಗ್ಗೆ ಅರಿವಿದೆ” : ಬಿಜೆಪಿ ರಾಜ್ಯಸಭೆ ಅಭ್ಯರ್ಥಿ ಈರಣ್ಣ ಕಡಾಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.9- ಶಾಸನಸಭೆಗೆ ನಾನು ಹೊಸಬನಿರಬಹುದು. ಆದರೆ 30 ವರ್ಷ ಬಿಜೆಪಿ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ರಾಜ್ಯಕ್ಕೆ ಒಳ್ಳೆಯದು ಯಾವುದು, ಕೆಟ್ಟದು ಯಾವುದು ಎಂದು ಗೊತ್ತಿದೆ ಎಂದು ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಈರಣ್ಣ ಕಡಾಡಿ ಹೇಳಿದರು.

ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ, ಪ್ರಭಾಕರ್ ಕೋರೆ ಸೇರಿದಂತೆ ನಾವೆಲ್ಲ ಒಂದೇ ಕುಟುಂಬದ ಸದಸ್ಯರು. ರಾಜ್ಯಸಭೆಗೆ ತನ್ನ ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಉಮೇಶ್ ಕತ್ತಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಾಗಲಿ, ರಾಜ್ಯ ರಾಜಕಾರಣದಲ್ಲಾಗಲಿ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿದರು. ಸಾಮಾನ್ಯ ಕಾರ್ಯಕರ್ತರಾದ ನಮ್ಮ ಆಯ್ಕೆ ಸಂದರ್ಭದಲ್ಲಿ, ರಾಜ್ಯ, ರಾಷ್ಟ್ರ ನಾಯಕರು ಪರಸ್ಪರ ಚರ್ಚೆ ನಡೆಸಿದ್ದಾರೆ.

ಏಕಾಏಕಿ ಯಾವುದೆ ನಿರ್ಧಾರಗಳಾಗಿಲ್ಲ ಎಂದರು. ಯಡಿಯೂರಪ್ಪನವರು ಕೆಜಿಪಿ ಕಟ್ಟಿದಾಗ ನಾನು ಅವರ ಕೇಸು ದಾಖಲಿಸಿದ್ದೆ ಎಂಬ ಸುಳ್ಳು ಆರೋಪಗಳು ಕೇಳಿಬರುತ್ತಿವೆ. ಅಂತಹ ಕೆಳಮಟ್ಟದ ರಾಜಕಾರಣ ನಾನು ಮಾಡಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ಇನ್ನೊಬ್ಬ ಅಭ್ಯರ್ಥಿ ಅಶೋಕ್ ಗಸ್ತಿ, ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಪಕ್ಷದ ನಾಯಕರು ನನ್ನನ್ನು ಗುರುತಿಸಿದ್ದಾರೆ. ಈ ಹಿಂದೆ ರಾಯಣ್ಣ ಬ್ರಿಗೇಡ್‍ನಲ್ಲಿ ನಾನು ಗುರುತಿಸಿಕೊಂಡಿದ್ದೆ. ಹಾಗೆಂದ ಮಾತ್ರಕ್ಕೆ ಅದನ್ನು ಬಿಎಸ್‍ವೈ ವಿರುದ್ಧದ ಹೋರಾಟ ಎಂದು ಭಾವಿಸಬೇಕಿಲ್ಲ ಎಂದರು.

Facebook Comments