ನೀವೇ ಬೆಳಸಿದ ‘ಈ ಸಂಜೆ’ ಪತ್ರಿಕೆಗೆ ಇಂದು 28 ವರ್ಷದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

28-Years

ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಹುಟ್ಟಿಕೊಂಡ ಈ ಸಂಜೆ ಪತ್ರಿಕೆಗೆ ಈಗ 28ರ ಹರೆಯ. ಈ 27 ವರ್ಷಗಳ ಹಿಂದೆ ಆರಂಭವಾದ `ಈ ಸಂಜೆ’ ಪತ್ರಿಕೆ ಹಲವು ಏಳು-ಬೀಳುಗಳೊಂದಿಗೆ ನಾಡಿನುದ್ದಗಲಕ್ಕೂ ಹೆಮ್ಮರವಾಗಿ ಬೆಳೆದು ನಿಂತಿದೆ.

ರಾಜಧಾನಿ ಬೆಂಗಳೂರಿಗೆ ಸೀಮಿತವಾಗಿದ್ದ ಈ ಸಂಜೆ ಪತ್ರಿಕೆ ಈಗ 20ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ತನ್ನ ಪ್ರಸಾರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಗಡಿನಾಡಿನಲ್ಲಿ ಈ ಸಂಜೆ ಪತ್ರಿಕೆ ಸಂಚಲನ ಮೂಡಿಸಿದೆ.
ಬೆಳಗಾವಿ, ಧಾರವಾಡ, ಗದಗ, ಹುಬ್ಬಳ್ಳಿ, ದಾವಣಗೆರೆ, ಮೈಸೂರು, ತುಮಕೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಈ ಸಂಜೆ ಪತ್ರಿಕೆ ತಲುಪುತ್ತಿದ್ದು, ಪ್ರಾದೇಶಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಿದೆ.

ಉತ್ತರ ಕರ್ನಾಟಕ ನಿರ್ಲಕ್ಷ್ಯ, ಹಳೆ ಮೈಸೂರು ಭಾಗ ಕ್ಕೆ ಅಭಿವೃದ್ಧಿ ಸೀಮಿತ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದ್ದ ಸಂದರ್ಭದಲ್ಲಿ ಸಮಗ್ರ ಕರ್ನಾಟಕದ ಕನಸನ್ನು ಹೊತ್ತು ಈ ಸಂಜೆ ಪತ್ರಿಕೆ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ರಾಜಧಾನಿ ಬೆಂಗಳೂರಿನಲ್ಲಿರುವ ನಾಯಕರಿಗೆ ತಲುಪಿಸಬೇಕೆಂಬ ನಿಟ್ಟಿನಲ್ಲಿ ಗಡಿ ನಾಡಿನಲ್ಲಿ ಈ ಸಂಜೆ ಪತ್ರಿಕೆಯನ್ನು ಪ್ರಾರಂಭಿಸಿ ಯಶಸ್ವಿಯಾಗಿರುವುದು ಹೆಮ್ಮೆಯ ವಿಷಯ.

ಈ ಸಂಜೆ ಪತ್ರಿಕೆ ಸಂಜೆ ದೈನಿಕವಾದರೂ ದಿನಪತ್ರಿಕೆಗಳಿಗೇನು ಕಡಿಮೆ ಇಲ್ಲದಂತೆ ಸುದ್ದಿಗಳ ವಿಸ್ತಾರವನ್ನು ಬೆಳೆಸಿಕೊಂಡಿದೆ. ಈ ಸಂಜೆ ಪತ್ರಿಕೆ ಇತರೆ ಮಾಧ್ಯಮಗಳಿಗೆ ಆಕರವಾದರೆ, ಈ ಸಂಜೆ ಕಚೇರಿ ಮಾಧ್ಯಮಗಳ ಪ್ರಯೋಗ ಶಾಲೆಯೆಂದೇ ಬಿಂಬಿತವಾಗಿದೆ.

ಈ ಸಂಜೆಯಲ್ಲಿ ಅರಿತು ನುರಿತವರು ಇಂದು ಪತ್ರಿಕೋದ್ಯಮದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವುದು ಈ ಸಂಜೆಯ ಹೆಮ್ಮೆಯ ವಿಷಯವೇ ಆಗಿದೆ. 27ರ ಸುದೀರ್ಘ ಪ್ರಯಾಣದ ಅವಧಿಯನ್ನು ಸವೆಸಿದ್ದು ಸುಲಭವಲ್ಲ. ಕಲ್ಲು-ಮುಳ್ಳುಗಳು, ಏಳು-ಬೀಳುಗಳು, ಎದುರಾದ ಸವಾಲುಗಳು, ಅಡ್ಡಿ-ಆತಂಕಗಳನ್ನು ಮೆಟ್ಟಿ ನಿಂತು ಅಳುಕದೆ, ಬೆದರಿಕೆಗಳಿಗೆ ಜಗ್ಗದೆ, ಆಸೆ ಆಮಿಷಗಳಿಗೆ ಒಳಗಾಗದೆ, ಎಲ್ಲೂ ರಾಜಿಯಾಗದೆ ಮುನ್ನಡೆಯುತ್ತಿದೆ ಈ ಸಂಜೆ.

ಕಳೆದ 27 ವರ್ಷಗಳಲ್ಲಿ ಭಾಷೆ, ಸಾಹಿತ್ಯದ ಉಳಿವಿಗೆ ಈ ಸಂಜೆಯ ಕೊಡುಗೆ ಅನನ್ಯವಾಗಿದೆ. ವಿದ್ಯುನ್ಮಾನ ಮಾಧ್ಯಮಗಳ ಅಬ್ಬರ ಪ್ರಚಾರದ ನಡುವೆಯೂ ಮುದ್ರಣ ಮಾಧ್ಯಮಗಳು ಉಳಿಸಿಕೊಂಡಿರುವ ಗಟ್ಟಿತನದಲ್ಲಿ ಈ ಸಂಜೆ ತನ್ನದೇ ಆದ ಛಾಪು ಮೂಡಿಸಿದ್ದು. ನಗರ, ಗ್ರಾಮೀಣ ಪ್ರದೇಶದ ಅಚ್ಚುಮೆಚ್ಚಿನ ಸಂಜೆ ದೈನಿಕವಾಗಿ ಹೊರ ಹೊಮ್ಮಿದೆ.

ಪತ್ರಿಕೋದ್ಯಮ ಎಂಬುದು ತಂತಿಯ ಮೇಲಿನ ನಡಿಗೆಯಾಗಿದ್ದು, ಅದು ಒಂದು ತಪಸ್ಸು ಕೂಡ. ಇಲ್ಲಿ ಯಜ್ಞ ಯಾಗಾದಿಗಳನ್ನು ಮಾಡಬೇಕಾಗುತ್ತೆ. ಯಜ್ಞದ ಫಲ ಅವಿಸ್ಸು ಲೋಕ ಕಲ್ಯಾಣಕ್ಕೆ ಸಲ್ಲಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ಈ ಸಂಜೆ.

ಸಮಾಜದ ಸ್ವಾಸ್ಥ್ಯ, ಆರೋಗ್ಯ, ಸುಸ್ಥಿರ ಬದುಕಿಗೆ ಯಾವುದು ಬೇಕೋ ಅದನ್ನು ಗ್ರಹಿಸಿ ಪ್ರಮಾಣಿಕವಾಗಿ ಕೊಡುವ ಪತ್ರಿಕೋದ್ಯಮದ ಭಾಗವಾಗಿ 27 ವರ್ಷಗಳಿಂದ ಈ ಸಂಜೆ ದಾಪುಗಾಲನ್ನಿಡುತ್ತಾ ಬರುತ್ತಿದೆ.
ನಾಡಿನ ಒಳಿತಿಗೆ ಅಗತ್ಯವಾಗಿರುವುದನ್ನು ನೀಡುತ್ತಿದೆ. ಕೆಡುಕನ್ನು ಖಂಡಿಸುತ್ತದೆ. ಒಳಿತಿನ ನಿಟ್ಟಿನಲ್ಲಿ ಸಮಾಜವನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ರಾಷ್ಟ್ರ ಪ್ರೇಮ, ಐಕ್ಯತೆ, ಸ್ವಾಭಿಮಾನ, ಪರೋಪಕರಾದಂತಹ ಭಾವನೆಗಳನ್ನು ಮೂಡಿಸಿ ಸತ್ಪ್ರಜೆಗಳನ್ನು ಸೃಷ್ಟಿಸುತ್ತಿದೆ.

ನೈತಿಕ ನೆಲೆಗಟ್ಟಿನಲ್ಲಿ ಸುಸಂಸ್ಕøತ ಮನರಂಜನೆಯನ್ನು ನೀಡುವ ಕೆಲಸವನ್ನೂ ಕೂಡ ಈ ಸಂಜೆ ಮಾಡುತ್ತಾ ಬಂದಿದೆ. ವದಂತಿಗಳನ್ನು ವೈಭವೀಕರಿಸದೆ ಜನರ ಭಾವನೆಗಳನ್ನು ಕೆಣಕಿ, ಜನರನ್ನು ದಾರಿ ತಪ್ಪಿಸಿ, ಸಮಾಜದ ಸ್ವಾಸ್ತ್ಯವನ್ನು ಕದಡವುಂತಹ ಕೆಲಸ ಮಾಡದೆ ಅತ್ಯಂತ ಸಂಯಮದಿಂದ ಸುದ್ದಿಗಳನ್ನು ಶೋಧಿಸಿ ನೈಜ ವರದಿಗಳನ್ನು ಸಮಾಜದ ಮುಂದಿಡುವ ಕೆಲಸಗಳನ್ನು ಮಾಡುತ್ತಾ ಬಂದಿದೆ.

ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಸಮಚಿತ್ತ ದೃಢ ಮನಸ್ಸಿನಿಂದ ಸತ್ಯದ ಮಾರ್ಗದಲ್ಲಿ 27 ವರ್ಷಗಳ ಕಾಲ ಸುದೀರ್ಘ ಹೆಜ್ಜೆ ಹಾಕುತ್ತಾ ಬಂದಿದೆ. ಮುಂದಿನ ವರ್ಷಗಳÀಲ್ಲೂ ಅದೇ ದೃಢ ಹೆಜ್ಜೆಯ ನಿಲುವು ಈ ಸಂಜೆಯದ್ದಾಗಿದೆ.

ಭಾಷೆ, ಸಾಹಿತ್ಯ ಕ್ಷೇತ್ರದ ಉಳಿವು-ಗೆಲುವುಗಳ ವಿಷಯದಲ್ಲಿ ದಿನ ಪತ್ರಿಕೆಗಳ ಕೊಡುಗೆ ಅನನ್ಯ. ಕರ್ನಾಟಕದಲ್ಲಿ ಕನ್ನಡ ಬೆಳೆದಿದ್ದರೆ, ಕನ್ನಡ ಭಾಷೆ ಮೂಲೆ ಮೂಲೆಗೆ ತಲುಪಿದ್ದರೆ ಅದಕ್ಕೆ ಕಾರಣ ದಿನಪತ್ರಿಕೆಗಳು ಎಂಬುದು ನಿರ್ವಿವಿವಾದ.

ಕರ್ನಾಟಕದಲ್ಲಿ ಕನ್ನಡದ ದನಿಯೇ ಹುದುಗಿಬಿಡಬಹುದೆಂಬ ಆತಂಕ ತಲೆದೋರಿದ್ದ ಸಂದರ್ಭದಲ್ಲಿ ಕನ್ನಡಿಗರ ಔದಾರ್ಯವೇ ಕನ್ನಡಕ್ಕೆ ಮುಳುವಾಗುವ ಪರಿಸ್ಥಿತಿಯಲ್ಲಿ ಕನ್ನಡದ ಕನ್ನಡಿಗರ ರಕ್ಷಣೆಗೆ ಸ್ವಾಭಿಮಾನಿ ಪತ್ರಿಕೆಯಾಗಿ ನಿಂತಿದ್ದು ಈ ಸಂಜೆ.

ನಾಡಿನ ನೆಲ, ಜಲ, ಗಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ದಿಟ್ಟ ನಿಲುವಿನಿಂದ ಹುಟ್ಟಿದ ಪತ್ರಿಕೆ. ಕನ್ನಡದ ಮನಸ್ಸುಗಳಿಗೆ ಧಕ್ಕೆಯಾದರೆ ಕನ್ನಡತನವನ್ನು ಎತ್ತಿಹಿಡಿದು ತಾನೂ ಮುಂಚೂಣಿಯಲ್ಲಿ ನಿಂತು ಹೋರಾಟಗಳನ್ನು ಸಂಘಟಿಸಿದೆ.

ಆರಂಭದಿಂದಲೂ ತನ್ನ ಧೋರಣೆಯಲ್ಲಿ ಕೊಂಚವೂ ಬದಲಾವಣೆಯಾಗದಂತೆ ದೈತ್ಯ ಶಕ್ತಿಯಾಗಿ ಬೆಳೆದು ನಿಂತಿದೆ. ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ಪ್ರಭುತ್ವದ ಮರ್ಜಿಗೆ ಒಳಗಾಗದೆ ಮಾಧ್ಯಮ ಪಾವಿತ್ರ್ಯತೆಯನ್ನು ಎತ್ತಿಹಿಡಿದು ಜನ ನಾಯಕರ ಒಳ್ಳೆಯ ಕೆಲಸಗಳನ್ನು ಪ್ರಸಂಶಸಿ, ಕೆಟ್ಟ ಕೆಲಸಗಳನ್ನು ಮೂಗು ಹಿಡಿದು ಪ್ರಶ್ನಿಸಿ, ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸುತ್ತಾ ಬಂದಿದೆ.

ಜನ ಸಾಮಾನ್ಯರಿಗೆ ಅನ್ಯಾಯವಾದಾಗ ಅವರ ಪರವಾಗಿ ನಿಂತು ಸರ್ಕಾರಗಳನ್ನು ಕೂಡ ಎಚ್ಚರಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ ಆರೋಪದಲ್ಲಿ ನೂರಾರು ಮನೆಗಳನ್ನು ಒಡೆದು ಜನರು ಬೀದಿಪಾಲಾದಾಗ ಪತ್ರಿಕೆ ಸಂತ್ರಸ್ತರ ಪರವಾಗಿ ಗಟ್ಟಿಯಾಗಿ ನಿಂತಿತ್ತು.

ಮಡಿಕೇರಿ, ಪಶ್ಚಿಮಘಟ್ಟ, ಕರಾವಳಿ ಭಾಗದಲ್ಲಿ ಭೂ ಕುಸಿತ ಉಂಟಾಗಿ ಅಪಾರ ಜನ ಅತಂತ್ರರಾದ ಪರಿಸ್ಥಿತಿಯಲ್ಲಿ ಪತ್ರಿಕೆ ಸಂತ್ರಸ್ತರ ಪರವಾಗಿ ನೆರವಿಗೆ ಧಾವಿಸಿದ್ದು ಸ್ಮರಣೀಯ. ವಿಶ್ಲೇಷಣೆ ಅತ್ಯುತ್ತಮ ವಿನ್ಯಾಸದೊಂದಿಗೆ ಅಪಾರ ಜನಮನ್ನಣೆ ಗಳಿಸಿದ್ದಕ್ಕೆ ಜೀವಂತ ಸಾಕ್ಷಿಯಾಗಿ ನಿಂತಿರುವುದು ಈ ಸಂಜೆ. ಇಂದು ಉನ್ನತ ಮಟ್ಟಕ್ಕೆ ಪತ್ರಿಕೆ ಬಂದು ನಿಂತಿದ್ದಕ್ಕೆ ಅಪಾರ ಓದುಗರ ಅಭಿಮಾನದ ಆಶೀರ್ವಾದವಿದೆ.

ಜತೆಗೆ ಪತ್ರಿಕೆಯನ್ನು ದಿನನಿತ್ಯ ಸಕಾಲಕ್ಕೆ ತಲುಪಿಸುವ ವಿತರಕರ ಪರಿಶ್ರಮವೂ ಇದೆ. ಆರಂಭದಿಂದಲೂ ಪತ್ರಿಕೆ ಬಗ್ಗೆ ಕಾಳಜಿ ಮತ್ತು ಕಳಕಳಿ ಹೊಂದಿದ್ದ ಹಲವು ಜಾಹೀರಾತುದಾರರ ಪ್ರೀತಿಯ ಸಿಂಚನವೂ ಇದರಲ್ಲಿ ಅಡಗಿದೆ. ಒಟ್ಟಾರೆ ಅಭಿಮಾನಿ ಸಮೂಹದ ಈ ಸಂಜೆ ಕನ್ನಡಿಗರ ಅಭಿಮಾನದ ಸಂಕೇತವಾಗಿದೆ.
ಬೃಹದಾಕಾರದ ಆಲದ ಮರದಂತೆ ವ್ಯಾಪಿಸಿರುವ ಅಭಿಮಾನಿ ಸಂಸ್ಥೆ ಸಾವಿರಕ್ಕೂ ಹೆಚ್ಚು ಜನರ ಆಶ್ರಯ ತಾಣವಾಗಿದೆ.

ಸಮಾಜದ ಸಂಕಷ್ಟಕ್ಕೆ ಪತ್ರಿಕೆ ದನಿಯಾಗುವ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗುವ ಹಿನ್ನೆಲೆಯಲ್ಲೇ ಪತ್ರಿಕೆಯನ್ನು ಪ್ರಾರಂಭಿಸಿದ್ದೇವೆ. ಈ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿಯಿಂದ ಯಾರ ಮುಲಾಜಿಗೂ ಒಳಗಾಗದಂತೆ ಕೆಲಸ ಮಾಡಬೇಕು. ಈ ಸಂಜೆ ಪತ್ರಿಕೆ ಬರುತ್ತದೆ ಎಂದು ಕಾದು ಕೊಂಡು ಓದುವ ಓದುಗರಿಗೆ ನ್ಯಾಯ ಒದಗಿಸಬೇಕು ಎಂಬ ಸಂಪಾದಕರು, ಅಭಿಮಾನಿ ಸಮೂಹ ಸಂಸ್ಥೆಯ ವ್ಯವಸ್ಥಾಪ ನಿರ್ದೇಶಕರ ಅಭಿಲಾಷೆಯಂತೆಯೇ ಈ ಸಂಜೆ ನಡೆಯುತ್ತಾ ಬಂದಿದೆ.

ಮೂರು ರೂ. ಕೊಟ್ಟು ಓದುವ ಓದುಗರೇ ನಮ್ಮ ಮಾಲೀಕರು. ಇವರಿಗೆ ಯಾವುದೇ ರೀತಿ ಅನ್ಯಾಯ ಮಾಡಬಾರದು. ವಸ್ತು ಸ್ಥಿತಿಯನ್ನು ಸಕಾಲದಲ್ಲಿ ಒದಗಿಸಿ ಕೊಡಬೇಕು ಎಂಬುದು ನಮ್ಮ ಸಂಪಾದಕರ ಅಭಿಮತ. ಈ ಸಂಜೆ ಯಾವತ್ತೂ ತನ್ನದೇ ಇತಿಮಿತಿಯಲ್ಲಿ ಮನಃಸಾಕ್ಷಿಗೆ ಬದ್ಧವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದೆ. ಜಾಹೀರಾತು ಪ್ರಸಾರ, ಸುದ್ದಿಗಳ ಸಂಗ್ರಹ, ಪೂರೈಕೆಗಳು ಪತ್ರಿಕೆಯ ಬೆನ್ನೆಲುಬುಗಳು. ಇಂತಹ ಮಹತ್ವದ ಎಲ್ಲಾ ವಿಭಾಗಗಳಲ್ಲೂ ಪತ್ರಿಕೆಯ ಜತೆ ನಿಂತು ಸಹಕರಿಸಿದ ಸಮಸ್ತರನ್ನು ಈ ಸಂಜೆ ಕೃತಜ್ಞತೆಯಿಂದ ಸ್ಮರಿಸುತ್ತದೆ.

ಅಂತರ್ಜಾಲದಲ್ಲಿ ಈ ಸಂಜೆ ಪತ್ರಿಕೆ ಕ್ರಾಂತಿ ಮಾಡಿ ದೇಶ-ವಿದೇಶಗಳಲ್ಲಿ ಓದುಗ ಅಭಿಮಾನ ಬಳಗವನ್ನು ಸೃಷ್ಟಿಸಿಕೊಂಡಿದೆ. ಕನ್ನಡ ಪತ್ರಿಕೆಗಳಲ್ಲಿ ಅಂತರ್ಜಾಲ ಓದುಗರಲ್ಲಿ ಈ ಸಂಜೆ ಐದನೇ ಸ್ಥಾನದಲ್ಲಿದೆ.  ಬದಲಾದ ಕಾಲಮಾನಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಬದಲಾಯಿಸಿಕೊಂಡು ಈ ಸಂಜೆ ಚೈತ್ರ ಯಾತ್ರೆಯನ್ನು ಮುಂದುವರೆಸಿದೆ. ಯಾವುದಕ್ಕೂ ಸೀಮಿತವಾಗದೆ ತನ್ನ ಪರಿಧಿಯನ್ನು ವಿಸ್ತೃತಗೊಳಿಸುತ್ತಾ ಸಾಗಿದೆ.   ಈ ಸಂಜೆಯ ತಾಜಾ ಸುದ್ದಿಗಳು 24/7 ಮೊಬೈಲ್ ಆ್ಯಪ್‍ಗಳ ಮೂಲಕ ಓದುಗರಿಗೆ ತಲುಪುತ್ತಿವೆ. ಈ ಸಂಜೆ ಪಯಣ ದಿಗ್ವಿಜಯ ಸಾಧಿಸಿದೆ. ಓದುಗ ಪ್ರಭುಗಳಿಗೆ, ಅಭಿಮಾನಿ ಬಂಧುಗಳಿಗೆ ಪತ್ರಿಕೆ ಪರವಾಗಿ ಕೃತಜ್ಞತೆಗಳ ಅರ್ಪಣೆ.

Facebook Comments

Sri Raghav

Admin