29ನೇ ವಸಂತಕ್ಕೆ ಕಾಲಿಟ್ಟ ‘ಈ ಸಂಜೆ’ ಪತ್ರಿಕೆ, ಬೆಂಬಲಿಸಿ-ಬೆಳೆಸಿದ ಕನ್ನಡಿಗರಿಗೆ ಧನ್ಯವಾದ

ಈ ಸುದ್ದಿಯನ್ನು ಶೇರ್ ಮಾಡಿ

28 ವಸಂತಗಳನ್ನು ಪೂರೈಸಿ 29ನೇ ವಸಂತಕ್ಕೆ ಕಾಲಿಟ್ಟಿರುವ ಈ ಸಂಜೆ ಪತ್ರಿಕೆ ಅಪಾರ ಓದುಗರ ಅಭಿಮಾನದೊಂದಿಗೆ ಮುನ್ನಡೆಯುತ್ತಿದೆ. ಮೂರು ದಶಕದಂಚಿನಲ್ಲಿರುವ ಈ ಸಂಜೆ ಕನ್ನಡ, ನೆಲ-ಜಲ ಸಂರಕ್ಷಣೆಗಾಗಿ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಕಳೆದ 28 ವರ್ಷಗಳ ಹಿಂದೆ ಪ್ರಾರಂಭವಾಗಿ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ.

ಇದರೊಂದಿಗೆ ನೂತನ ದಿಶೆಯತ್ತ ಉನ್ನತ ಆಶಯಗಳೊಂದಿಗೆ ನವಸಂವತ್ಸರದ ಉತ್ಸಾಹದಲ್ಲಿ ಮುನ್ನುಡಿ ಬರೆಯಲು ಪತ್ರಿಕೆ ತನ್ನ ಆಯಾಮವನ್ನು ವಿಸ್ತರಿಸುತ್ತಾ ಹೊಸ ಮನ್ವಂತರಕ್ಕೂ ಅಡಿ ಇಟ್ಟಿದೆ.  28 ವರ್ಷಗಳ ಕಾಲ ಸಾಗಿದ ಪಯಣ ಬಹು ಕೌತುಕವಾದುದ್ದು, ತಂತಿ ಮೇಲಿನ ನಡಿಗೆಯಂತೆ ಸಾಗಿ ಮಾಧ್ಯಮದ ಪಾವಿತ್ರ್ಯತೆಗೆ ಧಕ್ಕೆ ತರದಂತೆ ಮುದ್ರಣ ಮಾಧ್ಯಮದಲ್ಲಿ ಈ ಸಂಜೆ ವಿರಾಜಮಾನವಾಗಿದೆ ಎಂದು ಹೇಳಿಕೊಳ್ಳಲು ನಮಗೆ ಗರ್ವವಿದೆ.

ಕಾವೇರಿ ಹೋರಾಟ, ನಾಡಿನಲ್ಲಿ ಅನ್ಯಭಾಷಿಗರ ಹಾವಳಿ, ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಸಂತ್ರಸ್ತರ ಬೆನ್ನೆಲುಬಾಗಿ ನಿಂತು ಸರ್ಕಾರವನ್ನು ಎಚ್ಚರಿಸುತ್ತಾ ಬಂದಿದೆ.  ಮಡಿಕೇರಿಯಲ್ಲಿ ಪ್ರವಾಹದಿಂದ ಗುಡ್ಡ ಕುಸಿತ, ಸಾವುನೋವು, ಉತ್ತರ ಕರ್ನಾಟಕದ ನೆರೆ ಹಾವಳಿಯಿಂದ ಜನ ಬೀದಿಪಾಲಾದಾಗ ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಭೂ ಒತ್ತುವರಿ ನೆಪದಲ್ಲಿ ಸರ್ಕಾರ ಕಟ್ಟಡಗಳನ್ನು ಧ್ವಂಸಗೊಳಿಸಿದಾಗ ನೆಲೆ ಕಳೆದುಕೊಂಡಿದ್ದವರ ಧ್ವನಿಯಾಗಿ ಈ ಸಂಜೆ ಪತ್ರಿಕೆ ನಿಂತು ಜವಾಬ್ದಾರಿ ಮಾಧ್ಯಮವಾಗಿ ಸಾಮಾಜಿಕ ಕಳಕಳಿಯ ಕೆಲಸ ಮಾಡಿದೆ.

ವಿದ್ಯುನ್ಮಾನ ಮಾಧ್ಯಮ ಮಿಂಚಿನ ವೇಗದಲ್ಲಿ ಜನರನ್ನು ತಲುಪುತ್ತಿದೆ ನಿಜ. ಆದರೆ ಮುದ್ರಣ ಮಾಧ್ಯಮದ ಮೇಲಿನ ಜನರ ಪ್ರೀತ್ಯಾದರಗಳು ಎಂದೂ ಕುಂದಿಲ್ಲ. ಪತ್ರಿಕೆ ಓದುಗರಿಗೆ ನೀಡುವ ಅಪ್ಯಾಯತೆಯೇ ಅಂಥದ್ದು.  ಇಂದಿನ ಪರ್ವಕಾಲದಲ್ಲಿ ಪತ್ರಿಕೆ ತನ್ನ ಘನತೆ, ಪಾವಿತ್ರ್ಯತೆಯನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಆದರೆ ಈ ಸಂಜೆಗೆ ಅದು ಸಾಧ್ಯ.  ದೃಶ್ಯ ಮಾಧ್ಯಮಗಳು ಹಾಗೂ ವೆಬ್‍ಸೈಟ್ ಚಾನಲ್‍ಗಳ ಭರಾಟೆಯಲ್ಲಿ ಮುದ್ರಣ ಮಾಧ್ಯಮಗಳು ಕಳೆದುಹೋಗಿ ಬಿಡುತ್ತೆವೇನೋ ಎಂಬ ಆತಂಕದ ನಡುವೆಯೂ ಮಾಧ್ಯಮಕ್ಕೆ ಧಕ್ಕೆ ಬರದಂತೆ ಅಂದಿಗೂ, ಇಂದಿಗೂ ತನ್ನ ತನವನ್ನು ಈ ಸಂಜೆ ಕಾಪಾಡಿಕೊಂಡು ಬಂದಿದೆ.

ರಾಜಧಾನಿ ಬೆಂಗಳೂರಿಗೆ ಸೀಮಿತವಾಗಿದ್ದ ಪತ್ರಿಕೆ ಈಗ 20ಕ್ಕೂ ಜಿಲ್ಲೆಗಳಲ್ಲಿ ತನ್ನ ಪ್ರಸಾರ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಗಡಿನಾಡು ಬೆಳಗಾವಿ, ಹುಬ್ಬಳ್ಳಿಯಲ್ಲಿ ತನ್ನ ಆವೃತ್ತಿಯನ್ನು ಪ್ರಾರಂಭಿಸಿ ಗದಗ, ಧಾರವಾಡ, ರಾಯಚೂರು, ಗುಲ್ಬರ್ಗ ಸೇರಿದಂತೆ ಉತ್ತರ ಕರ್ನಾಟಕದ ಜನರ ಮನೆ ಮಾತಾಗಿದೆ. ಅಲ್ಲಿನ ಸಮಸ್ಯೆಗಳಿಗೂ ಧ್ವನಿಯಾಗಿದೆ.  ಹಲವು ಪ್ರಥಮಗಳಿಗೆ ಈ ಸಂಜೆ ಕಾರಣವಾಗಿದೆ. ಸಾಕಷ್ಟು ದಿಟ್ಟ ಸವಾಲುಗಳನ್ನು ಎದುರಿಸಿ ಸಾವಿರಾರು ಜನರಿಗೆ ನೆರಳಾಗಿದೆ. ಈ ಸಂಜೆ ಕಚೇರಿ ಮಾಧ್ಯಮ ಲೋಕದ ಪ್ರಯೋಗ ಶಾಲೆ ಎಂಬುದರಲ್ಲಿ ಅತಿಶಯೋಕ್ತಿಯಲ್ಲ.
ಇಲ್ಲಿ ಅರಿತು, ನುರಿತವರು ಮಾಧ್ಯಮ ಲೋಕದಲ್ಲಿ ಬೆಳೆದು ದಿಗ್ಗಜರಾಗಿದ್ದಾರೆ. ಏಳುಬೀಳುಗಳು, ಎದುರಾದ ಸವಾಲುಗಳು, ಅಡ್ಡಿ ಆತಂಕಗಳನ್ನು ಮೆಟ್ಟಿ ನಿಂತು ಯಾವುದಕ್ಕೂ ಧೃತಿಗೆಡದೆ ಎಲ್ಲವನ್ನು ಸಮನಾಗಿ ಸ್ವೀಕರಿಸಿ ಮಾಧ್ಯಮದ ಅಗ್ರಜನಂತೆ ಈ ಸಂಜೆ ಸಾಗಿದೆ.

# ತಂತಿ ಮೇಲಿನ ನಡಿಗೆ ಅವಸರದ ಅಡಿಗೆ:
ಸಮಾಜದ ಹೊಣೆಗಾರಿಕೆಯನ್ನು ಅರಿತು ತನ್ನ ಕೆಲಸವನ್ನು ಯಾವುದೇ ಮುಲಾಜಿಗೆ ಒಳಗಾಗದೆ ನಿರ್ಭೀತಿಯಿಂದ ಮಾಡುತ್ತಾ ಬದಲಾದ ಕಾಲಮಾನಕ್ಕೆ ತಕ್ಕಂತೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಓದುಗರ ಅಭಿರುಚಿಗೆ ತಕ್ಕಂತೆ ಸುದ್ದಿಗಳನ್ನು ಪ್ರಸಾರ ಮಾಡುತ್ತಾ ಎಲ್ಲರ ಮನೆಮಾತಾಗಿದೆ. ಸಂಜೆ ಪತ್ರಿಕೆ ಎಂದರೆ ಅದು ತಂತಿ ಮೇಲಿನ ನಡಿಗೆ. ಅವಸರದ ಅಡಿಗೆ. ತಪ್ಪುಗಳಾಗದಂತೆ ಎಚ್ಚರ ವಹಿಸಿ ಕೆಲಸಗಳನ್ನು ಮಾಡಬೇಕು. ಪಾದರಸದಂತೆ ಕೆಲಸ ನಿರ್ವಹಿಸುವ ಸಂಪಾದಕರ ಕಾರ್ಯದಕ್ಷತೆಯಿಂದ ಈ ಸಂಜೆ ಎಲ್ಲದಕ್ಕಿಂತ ಒಂದು ಹೆಜ್ಜೆ ಮುಂದಿದೆ.

# ರಾಜೀಯಾಗದ ಧೋರಣೆ:
ಈ ಸಂಜೆ ಸಂಜೆ ಪತ್ರಿಕೆಯಾದರೂ ದಿನ ಪತ್ರಿಕೆಗಳಿಗಿಂತ ಕಡಿಮೆ ಇಲ್ಲದಂತೆ ಸುದ್ದಿಗಳ ಪ್ರಸಾರ ಮಾಡುತ್ತಿದೆ. ಸುದ್ದಿಗಳ ಆಳ, ಅಗಲಕ್ಕಿಳಿದು ವಿಸ್ತಾರಗಳ ವಿಷಯವನ್ನು ಪ್ರಕಟಿಸುವುದಕ್ಕೆ ಎಲ್ಲ ದಿನಪತ್ರಿಕೆಗಳಿಗೆ ಈ ಸಂಜೆ ಒಂದು ಆಕರವಾಗಿದೆ.  ಜನಮನ್ನಣೆ ಜೊತೆ ಮಾಧ್ಯಮಗಳ ಮನ್ನಣೆ ಗಳಿಸಿದೆ ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ. ನಮ್ಮಲ್ಲಿ ಬರುವ ಸುದ್ದಿಗಳು ಟಿವಿ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತವೆ. ಸುದ್ದಿಯ ಸ್ಪಷ್ಟತೆಗೆ ನಮ್ಮ ಪತ್ರಿಕೆಯನ್ನು ಹಲವಾರು ಬಾರಿ ಅವಲಂಬಿಸುವುದು ಉಂಟು. ಯಾರೊಂದಿಗೂ ರಾಜಿಯಾಗದೆ, ಸಂಘರ್ಷಕ್ಕಿಳಿಯದೆ ಸಂಯಮದಿಂದ ನಡೆಯುತ್ತಿರುವ ಈ ಸಂಜೆ ಅಂದಿನಿಂದ ಇಂದಿನವರೆಗೂ ನಾಡಿನ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿದೆ.

# ಕನ್ನಡ ಹೋರಾಟದಲ್ಲಿ ಮುಂಚೂಣಿ:
ಕನ್ನಡದ ಪರವಾದ ಹೋರಾಟ ಎಲ್ಲೆ ನಡೆಯಲಿ ಈ ಸಂಜೆ ಆ ಪರವಾಗಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಕನ್ನಡಕ್ಕೆ ಧಕ್ಕೆಯಾದರೆ ಕನ್ನಡ ಮನಸ್ಸುಗಳಿಗೆ ನೋವಾದರೆ ಈ ಸಂಜೆ ತಕ್ಷಣ ಸ್ಪಂದಿಸುತ್ತದೆ.  ಕನ್ನಡಿಗರ ಕನ್ನಡತನವನ್ನು ಎತ್ತಿ ಹಿಡಿದು ಮುಂದೆ ನಿಂತು ಹೋರಾಟಗಾರರನ್ನು ಸಂಘಟಿಸಿದ ಏಕೈಕ ಪತ್ರಿಕೆ ಈ ಸಂಜೆ. ಇದೀಗ ಆಲದ ಮರದಂತೆ ಬೆಳೆದಿದೆ. ರೆಂಬೆಕೊಂಬೆಗಳು ಸಮೃದ್ಧವಾಗಿವೆ. ಎಲ್ಲರ ಮನಸೂರೆಗೊಂಡಿದೆ.

ಹಳೆ ಮೈಸೂರು ಪ್ರಾಂತ್ಯ, ಉತ್ತರ ಕರ್ನಾಟಕ, ಕರ್ನಾಟಕದಲ್ಲೂ ಈ ಸಂಜೆ ಪತ್ರಿಕೆ ಜನಮನ್ನಣೆಗೆ ಪಾತ್ರವಾಗಿದೆ. ಶೀಘ್ರದಲ್ಲೇ ಮಧ್ಯ ಕರ್ನಾಟಕ ದಾವಣಗೆರೆಯಲ್ಲೂ ಆವೃತ್ತಿ ಆರಂಭಗೊಳ್ಳಲಿದೆ.
ಒಟ್ಟಾರೆ ನೊಂದವರ ದನಿಯಾಗಿ, ಸಂತ್ರಸ್ತರ ಪರವಾಗಿ ದೀನದಲಿತರಿಗೆ ಆಶ್ರಯವಾಗಿ ನಾಡಿನಲ್ಲಿ ನಮ್ಮ ಪತ್ರಿಕೆ ಈ ಸಂಜೆ ವ್ಯಾಪಿಸಿದೆ.  ರಾಜಕೀಯದ ಕ್ಷಿಪ್ರ ಸುದ್ದಿಗಳನ್ನು ಪ್ರಕಟಿಸುವುದರಲ್ಲಿ ಈ ಸಂಜೆ ಅಗ್ರಗಣ್ಯವೆನಿಸಿದೆ. ಜನನಾಯಕರ ಒಳ್ಳೆಯ ಕೆಲಸಗಳನ್ನು ಪ್ರಶಂಸಿಸಿದೆ. ಅವರ ಕೆಟ್ಟ ಕೆಲಸಗಳನ್ನು ಆಕ್ಷೇಪಿಸಿ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದೆ. ಜನಸಾಮಾನ್ಯರಿಗೆ ತೊಂದರೆಯಾದಾಗ ಜನರ ಪರ ನಿಲುವುಗಳಿಂದ ಸರ್ಕಾರಗಳಿಗೆ ಬೆವರಿಳಿಸಿದೆ. ನೇರ, ನಿಖರತೆ, ನಿಷ್ಠುರತೆ ಮೂಲಕ ಮಾಧ್ಯಮ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ ಬಂದಿದೆ.

# ಹೋರಾಟಗಳಿಗೆ ಸ್ಫೂರ್ತಿ:
ಸಮಾಜಕ್ಕೆ ನೀತಿಭೋಧಕವಾಗಿ ಹೋರಾಟಗಳಿಗೆ ಸ್ಫೂರ್ತಿಯಾಗಿ ಅಷ್ಟೇ ಅಲ್ಲ ಮನರಂಜನೆ, ರಾಷ್ಟ್ರಪ್ರೇಮ, ಐಕ್ಯತೆ, ಸ್ವಾಭಿಮಾನ, ಪರೋಪಕಾರದಂತಹ ಭಾವನೆಗಳನ್ನು ಪ್ರಚೋದಿಸುವ ಸತ್ಪ್ರಜೆಗಳನ್ನು ಸೃಷ್ಟಿಸುವ ಸಾಧನವಾಗಿದೆ.  ಸಾಂಸ್ಕøತಿಕ ನೆಲೆಗಟ್ಟಿನಲ್ಲಿ ತನ್ನ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಿದೆ. ಎಂಥದೇ ಕಠಿಣ ಸಂದರ್ಭದಲ್ಲೂ ತನ್ನ ಧ್ಯೇಯೋದ್ದೇಶಗಳನ್ನು ಸ್ವಾರ್ಥಕ್ಕಾಗಿ ಬಲಿಕೊಡದೆ ಸಮಚಿತ್ತ ದೃಢ ಮನಸ್ಸಿನಿಂದ ಸತ್ಯ ಮಾರ್ಗದಲ್ಲಿ ನಡೆದು ಬರುತ್ತಿದೆ.

ಯುವ ಜನರಿಗೆ ಆದರ್ಶವಾಗಿದೆ. ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳ ಹಿತಾಸಕ್ತಿ ಸೇರಿದಂತೆ ಪ್ರತಿ ಹಂತದಲ್ಲೂ ಗಟ್ಟಿ ನಿಲುವನ್ನು ಪ್ರದರ್ಶಿಸುತ್ತಾ ಯಾವ ಶಕ್ತಿಗಳೊಂದಿಗೂ ರಾಜೀ ಮಾಡಿಕೊಳ್ಳದೆ ದೈತ್ಯ ಶಕ್ತಿಯಾಗಿ ಬೆಳೆದು ನಿಂತಿದೆ.

# ನಾಡಿನ ಸ್ವಾಭಿಮಾನದ ಸಂಕೇತ:
ಓದುಗರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ತನ್ನ ಎಲ್ಲ ಸಾಮಥ್ರ್ಯವನ್ನು ಓರೆಗಲ್ಲಿಗೆ ಹಚ್ಚಿ ಈ ಸಂಜೆ ಕೆಲಸ ಮಾಡುತ್ತಾ ಬಂದಿದೆ. ಇದು ನಮ್ಮ ಸಂಪಾದಕರು ಮತ್ತು ಅಭಿಮಾನಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ನಿಲುವು ಕೂಡ ಆಗಿದೆ. ಪತ್ರಿಕೆ ಕನ್ನಡಿಗರ ಧ್ವನಿಯಾಗಬೇಕು, ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಬೇಕು ಎಂಬ ನಿಟ್ಟಿನಲ್ಲಿ ಪ್ರಾರಂಭಿಸಿದ್ದೇವೆ. ಜನಪರ ,ಸಾಮಾಜಿಕ ಕಳಕಯಿಂದ ಕೆಲಸ ಮಾಡಿ ಯಾರ ಮುಲಾಜಿಗೂ ಒಳಗಾಗಬೇಡಿ.

ಮೂರು ರೂ. ಕೊಟ್ಟು ಖರೀದಿಸಿ ಪತ್ರಿಕೆ ಓದುವ ಓದುಗರಿಗೆ ನ್ಯಾಯ ಒದಗಿಸಬೇಕೆಂದು ಪ್ರತಿದಿನ ಈ ಸಂಜೆ ಸಿಬ್ಬಂದಿಗೆ ಮನನ ಮಾಡುತ್ತಿರುತ್ತಾರೆ. ಯಾವಾಗಲೂ ಪತ್ರಿಕೆ ಸಂಕಷ್ಟದಲ್ಲಿರುವವರ ಪರವಾಗಿ ನಿಲ್ಲಬೇಕು. ಇದು ನಮ್ಮ ನಿಮ್ಮೆಲ್ಲರ ಆಶಯವಾಗಬೇಕು ಎಂಬುದು ಅವರ ಅಭಿಮತ. ಇದನ್ನು ಅವರು ಅಕ್ಷರಶಃ ಪಾಲಿಸುತ್ತಾ ಬಂದಿದ್ದಾರೆ. ಎಲ್ಲರೂ ಇದನ್ನು ಪಾಲಿಸಿ ಈ ಸಂಜೆಯನ್ನು ಬೆಳೆಸುವ ಮೂಲಕ ಜನರ ನೋವಿಗೆ ದನಿಯಾಗಿ ಎಂದು ಪ್ರತಿನಿತ್ಯ ಬೋಧಿಸುತ್ತಾರೆ.

ಅದೇ ರೀತಿ ಈ ಸಂಜೆ ತನ್ನದೇ ಆದ ಇತಿಮಿತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದೆ. ಇದಕ್ಕೆ ಎಲ್ಲ ರೀತಿಯಲ್ಲೂ ಎಲ್ಲ ವರ್ಗದ ಸಿಬ್ಬಂದಿ ಸಹಕರಿಸುತ್ತಾ ಬಂದಿದ್ದಾರೆ.  ಈ ಸಂಜೆ ಅಭಿಮಾನಿ ಸಮೂಹ ಸಂಸ್ಥೆಯಲ್ಲಿ ಅಪಾರ ಜನ ಬದುಕು ಕಟ್ಟಿಕೊಂಡಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಅಭಿಮಾನಿ ಸಮೂಹ ಸಂಸ್ಥೆ ಅನ್ನ ನೀಡುತ್ತಿದೆ.

# ಅಂತರ್ಜಾಲದಲ್ಲೂ ಕ್ರಾಂತಿ:
ಈ ಸಂಜೆ ಅಂತರ್ಜಾಲದಲ್ಲೂ ಕ್ರಾಂತಿ ಮಾಡಿ ದೇಶ, ವಿದೇಶಗಳಲ್ಲಿ ಓದುಗ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡು ತನ್ನ ಜೈತ್ರ ಯಾತ್ರೆಯನ್ನು ಮುಂದುವರೆಸಿದೆ. ಯಾವುದಕ್ಕೂ ಸೀಮಿತವಾಗದೆ ತನ್ನ ಪರಿಧಿಯನ್ನು ವಿಸ್ತರಿಸುತ್ತಲೇ ಇದೆ. ಹೊಸ ಮೊಬೈಲ್ ಆಪ್ ಮೂಲಕ ಪ್ರಪಂಚದ ಮೂಲೆ ಮೂಲೆಗೂ ತಲುಪಿ ಈ ಸಂಜೆಯ ತಾಜಾ ಸುದ್ದಿಗಳು ಕ್ಷಣ ಕ್ಷಣದಲ್ಲಿ ಮೊಬೈಲ್ ಆಪ್‍ಗಳ ಮೂಲಕ ಓದುಗರಿಗೆ ತಲುಪುತ್ತಿದೆ. ಈ ಸಂಜೆ ಪಯಣ ದಿಗ್ವಿಜಯ ಸಾಧಿಸಿದೆ. ಓದುಗ ಪ್ರಭುಗಳಿಗೆ, ಅಭಿಮಾನಿ ಬಂಧುಗಳಿಗೆ ಪತ್ರಿಕೆ ಪರವಾಗಿ ಕೃತಜ್ಞತೆಗಳ ಅರ್ಪಣೆ.

# ಮತ್ತೊಂದು ಹೆಜ್ಜೆ:
ಇದರ ನಡುವೆ ಸುದ್ದಿ ಚಿತ್ರಗಳನ್ನು ಒಳಗೊಂಡ ರೋಚಕ ಮಾಹಿತಿಯ ವಿದ್ಯುನ್ಮಾನ ಮಾಧ್ಯಮದ Eesanje Youtube   ವೆಬ್‍ಚಾನಲ್ 24/7 ಈಗ ಪ್ರಾಯೋಗಿಕವಾಗಿ ಆರಂಭಗೊಂಡಿದೆ. ಇದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯ್ಯೂಟೂಬ್‍ನಲ್ಲಿ Eesanjenews 24/7 ಹೊಸ ಮನ್ವಂತರ ಸೃಷ್ಟಿಸಿದೆ.  ಸುದ್ದಿ ಭಂಡಾರದ ಈ ಸಂಜೆ ಹೊಸ ಹೊಸ ಕ್ಷೇತ್ರಗಳತ್ತ ದಾಪುಗಾಲಿಟ್ಟಿದೆ. ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿ ಮತ್ತಷ್ಟು ಹೆಚ್ಚಲಿದ್ದು, ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದ್ದು, ಕರುನಾಡಿನ ಜನತೆಗೆ ಹೊಸತನ್ನು ಸದಾ ಬಡಿಸಲಿದೆ ಸುದ್ದಿಸ್ವಾದ.

Facebook Comments

Sri Raghav

Admin