ಕೊರೋನಾ ಭಯ : ರಾಜಕೀಯ ನಾಯಕರಿಗೆ ದೊಡ್ಡ ಸವಾಲಾದ ಉಪಚುನಾವಣೆ ಪ್ರಚಾರ ಕಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.2- ರಾಜ್ಯದ ಎರಡು ವಿಧಾನಸಭಾ ಹಾಗೂ ವಿಧಾನಪರಿಷತ್‍ನ ನಾಲ್ಕು ಸ್ಥಾನಗಳ ಚುನಾವಣೆಯ ಕಾವು ರಂಗೇರುತ್ತಿದ್ದು, ಕೊರೋನಾ ಸೋಂಕು ಆತಂಕದ ನಡುವೆ ಪ್ರಚಾರ ಕಾರ್ಯ ನಡೆಸುವುದು ರಾಜಕೀಯ ನಾಯಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಶಿರಾ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ಬೆಂಗಳೂರು-ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಆಗ್ನೇಯ -ಈಶಾನ್ಯ ಪದವೀಧರ ಕ್ಷೇತ್ರಗಳ ಚುನಾವಣೆಗೆ ಆಯೋಗ ದಿನಾಂಕ ಈಗಾಗಲೇ ಘೋಷಣೆ ಮಾಡಿದೆ.

ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್‍ನ ಹೆಚ್.ಡಿ.ರೇವಣ್ಣ ಹಾಗೂ ಇತರೆ ಪ್ರಮುಖ ರಾಜಕೀಯ ನಾಯಕರು ಕೊರೋನಾ ಸೋಂಕಿಗೊಳಗಾಗಿ ಈಗಷ್ಟೇ ಚೇತರಿಸಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ವಯಸ್ಸಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬ ರಾಜಕೀಯ ನಾಯಕರಲ್ಲೂ ಕೊರೋನಾ ಸಾಕಷ್ಟು ಆತಂಕ ಸೃಷ್ಟಿಸಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 2.28 ಲಕ್ಷಕ್ಕೆ ಏರಿಕೆಯಾಗಿದ್ದು, ಉಪಚುನಾವಣೆ ನಡೆಯಬೇಕಿರುವ ರಾಜರಾಜೇಶ್ವರಿ ನಗರ ಒಂದರಲ್ಲಿಯೇ 15,000ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.

ಕಳೆದ 10 ದಿನಗಳಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರುವ ಸೋಂಕಿತರಲ್ಲಿ ಶೇ.12ರಷ್ಟು ಸೋಂಕಿತರು ಈ ಕ್ಷೇತ್ರದಲ್ಲಿಯೇ ಪತ್ತೆಯಾಗಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಲು ನಾಯಕರು ಆತಂಕಪಡುತ್ತಿದ್ದಾರೆ.

ಆರೋಗ್ಯ ಸುರಕ್ಷತೆಯ ಜೊತೆಗೆ ಉಪಚುನಾವಣೆ ಕೂಡ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಪಕ್ಷಗಳು ಮತದಾರರನ್ನು ತಲುಪಲು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಲು ಮುಂದಾಗುತ್ತಿವೆ.

ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶೀಲ್ಡ್ ಇಲ್ಲದೆಯೇ ಮನೆಯಿಂದ ಹೊರಬಾರದಿರಲು ನಿರ್ಧರಿಸಿದ್ದಾರೆ. ಸಾಮಾಜಿಕ ಅಂತರಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ನಡುವೆ ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಡಿ.ಕೆ.ಶಿವಕುಮಾರ್ ಕೂಡ ಆತಂಕದಲ್ಲಿದ್ದಾರೆ.

ದೇವೇಗೌಡ ಅವರು ಕೆಲ ತಿಂಗಳುಗಳಿಂದ ಮನೆಯಲ್ಲಿಯೇ ಇದ್ದು, ಫೆÇೀನ್ ಹಾಗೂ ಜೂಮ್ ಆ್ಯಪ್ ಮೂಲಕ ನಾಯಕರೊಂದಿಗೆ ಸಭೆ, ಮಾತುಕತೆ ನಡೆಸುತ್ತಿದ್ದಾರೆ.

ಮತದಾನ ನಡೆಯಲಿರುವ ಈ ಎರಡೂ ಕ್ಷೇತ್ರಗಳೂ ಒಕ್ಕಲಿಗ ಪ್ರಾಬಲ್ಯವಿರುವ ಪ್ರದೇಶಗಳಾಗಿರುವುದರಿಂದ ಶಿರಾ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ಪಡೆಯಲು ಯತ್ನಿಸುತ್ತಿದ್ದು, ಇ-ಪ್ರಚಾರ ನಡೆಸಲು ನಿರ್ಧರಿಸಿದೆ.

ಇನ್ನು ಬಿಜೆಪಿಯಲ್ಲಿ ಈಗಾಗಲೇ ಪಕ್ಷದ ಕಾರ್ಯಕ್ರಮಗಳು ಹಾಗೂ ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡಿದೆ. ಎರಡೂ ಕ್ಷೇತ್ರಗಳಲ್ಲಿ ಅಭಿಯಾನಕ್ಕೂ ಇದೇ ಮಾಧ್ಯಮ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಉಪಚುನಾವಣೆಯ ತಂತ್ರಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಬಳಕೆ ಬಗ್ಗೆ ಚರ್ಚಿಸಲು ಶೀಘ್ರದಲ್ಲಿಯೇ ಸಭೆ ನಡೆಸಲು ಪಕ್ಷ ಮುಂದಾಗಿದೆ.

ಈಗಾಗಲೇ ಪ್ರತಿಪಕ್ಷ ಕಾಂಗ್ರೆಸ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಕಾರ ಸ್ವೀಕಾರ ಸಮಾರಂಭವನ್ನು ಡಿಜಿಟಲ್ ಸ್ಟ್ರೀಮಿಂಗ್ ಮೂಲಕ ನಡೆಸಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಉಪ ಚುನಾವಣೆ ಪ್ರಚಾರವನ್ನು ವಿಡಿಯೋಗಳ ಜೊತೆಗೆ ಫೇಸ್‍ಬುಕ್, ಜೂಮ್, ಗೂಗಲ್ ನೆಟ್, ವಾಟ್ಸಪ್ ಬಳಕೆಯೊಂದಿಗೆ ಕಾರ್ಯಕರ್ತರ ವ್ಯಾಪ್ತಿ ವಿಸ್ತರಿಸಲು ಮುಂದಾಗುತ್ತಿದೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಚಾರ ನಡೆಸುವುದು ದೊಡ್ಡ ಸವಾಲಾಗಿದೆ. ಮತದಾರರನ್ನು ತಲುಪಲು ಪಕ್ಷ ತನ್ನದೇ ಹೊಸ ನಿರೂಪಣೆ ಹೊಂದಿದೆ. ಡಿಜಿಟಲ್ ಪ್ರಚಾರ ಕೂಡ ಭವಿಷ್ಯದಲ್ಲಿ ಚುನಾವಣಾ ಕಾರ್ಯತಂತ್ರಗಳ ಅವಿಭಾಜ್ಯ ಅಂಗವಾಗಲಿದೆ, ಪ್ರತಿಯೊಬ್ಬರೂ ಡಿಜಿಟಲ್ ಪ್ಲಾಟ್‍ಫಾಮ್‍ಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಪಕ್ಷ ಸೂಚನೆ ಕೊಟ್ಟಿದೆ.

ಮತದಾರರನ್ನು ತಲುಪಲು ಸಾಮಾಜಿಕ ಮಾಧ್ಯಮವನ್ನು ಬಳಸಲು, ಪಕ್ಷದ ಕೇಡರ್‍ಗಳಿಗೆ ಬೂತ್ ಮಟ್ಟದಲ್ಲಿ ತರಬೇತಿ ನೀಡಲು ಮತ್ತು ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಕೋರಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಭಾಷಣಗಳನ್ನು ಅಪ್‍ಲೋಡ್ ಮಾಡಲು ಸಾಧ್ಯವಿರುವ ಎಲ್ಲ ವಿಧಾನಗಳನ್ನು ಬಳಸಲು ಜೆಡಿಎಸ್ ತೀರ್ಮಾನಿಸಿದೆ.

ಡಿಜಿಟಲ್ ಪ್ಲಾಟ್‍ಫಾಮ್‍ಗಳ ಬಳಕೆಯ ಬಗ್ಗೆ ಪಕ್ಷವು ಹೈಕಮಾಂಡ್‍ನಿಂದ ನಿರ್ದೇಶನಗಳನ್ನು ಪಡೆಯಲಿದೆ. ಚುನಾವಣೆ ವೇಳೆ ರಾಜಕೀಯ ನಾಯಕರು ಮತ್ತು ಮತದಾರರ ಆರೋಗ್ಯವು ಅಪಾಯಕ್ಕೆ ಸಿಲುಕುವ ಹಿನ್ನೆಲೆಯಲ್ಲಿ ಪ್ರಚಾರ ನಡೆಸುವುದು ಕಷ್ಟ ಎಂದು ಬಹುತೇಕ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin