ಜಿದ್ದಿಗೆ ಬಿದ್ದವರಂತೆ ಉಪಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಭರ್ಜರಿ ಪ್ರಚಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.25- ರಾಜ್ಯದ ಹದಿನೈದು ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೇವಲ ಏಳು ದಿನಗಳು ಬಾಕಿ ಉಳಿದಿದ್ದು, ಅಖಾಡದಲ್ಲಿರುವ ಅಭ್ಯರ್ಥಿಗಳು ಗೆಲುವಿಗಾಗಿ ತೀವ್ರ ಸೆಣಸಾಟ ನಡೆಸುತ್ತಿದ್ದಾರೆ.  ರಾಜ್ಯದ ರಾಜಕೀಯ ದಿಕ್ಕನ್ನೇ ಬದಲಾಯಿಸಬಹುದೆಂದು ಹೇಳಲಾಗುತ್ತಿರುವ ಈ ಉಪಚುನಾವಣಾ ಪ್ರಚಾರದ ಕಣಕ್ಕೆ ಕಾಂಗ್ರೆಸ್-ಬಿಜೆಪಿ ಪಕ್ಷದಿಂದ ರಾಜ್ಯದ ನಾಯಕರಲ್ಲದೆ, ಕೇಂದ್ರದ ನಾಯಕರು ಇಳಿದಿದ್ದಾರೆ.

ಜೆಡಿಎಸ್‍ನಿಂದ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಾ ಪ್ರಚಾರ ನಡೆಸುತ್ತಿದ್ದಾರೆ. ವಿಜಯನಗರ, ಕಾಗವಾಡ, ಗೋಕಾಕ್, ಅಥಣಿ, ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು, ಹುಣಸೂರು, ಕೆ.ಆರ್.ಪೇಟೆ, ಚಿಕ್ಕಬಳ್ಳಾಪುರ, ಹೊಸಕೋಟೆ, ಶಿವಾಜಿನಗರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ 15 ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದೆ.

ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ನೇರ ಹಣಾಹಣಿ, ಮತ್ತೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ನಡುವೆ ಹಣಾಹಣಿ ಕಂಡು ಬರುತ್ತಿದೆ. ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ ಎಲ್ಲಾ ಸಣ್ಣಪುಟ್ಟ ವೈಮನಸ್ಯಗಳನ್ನು ಮರೆತು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಮುಖಂಡರು ಟೊಂಕ ಕಟ್ಟಿ ನಿಂತಿದ್ದಾರೆ.

ಆರಂಭದಲ್ಲಿ ಆಲಸ್ಯ ತೋರಿದವರೆಲ್ಲ ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ ಚುರುಕುಗೊಂಡು ಬೆಳಗ್ಗೆಯಿಂದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಚುನಾವಣಾ ಪ್ರಚಾರಕ್ಕೆ ತಾರಾ ಮೆರುಗು ಬಂದಿದೆ. ಮಹಾಲಕ್ಷ್ಮಿ ಲೇಔಟ್, ಹೊಸಕೋಟೆ, ಚಿಕ್ಕಬಳ್ಳಾಪುರದಲ್ಲಿ ಚಲನಚಿತ್ರ ನಟ-ನಟಿಯರು, ಕಲಾವಿದರು ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.

ಪಕ್ಷಗಳಲ್ಲಿರುವ ನಟ-ನಟಿಯರು ಕೂಡ ತಮ್ಮ ಪಕ್ಷದವರ ಪರವಾಗಿ ಪ್ರಚಾರಕ್ಕೆ ಆಗಮಿಸಿ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದಲೇ ಕ್ಷೇತ್ರದ ವ್ಯಾಪ್ತಿಯ ಗಲ್ಲಿ ಗಲ್ಲಿಗಳಲ್ಲಿ ಭಿತ್ತಿ ಪತ್ರಗಳನ್ನಿಡಿದು ಮನೆ ಮನೆಗಳಿಗೆ ತೆರಳಿ ಮತ ಯಾಚಿಸುತ್ತಿರುವುದು ಕಂಡುಬರುತ್ತಿದೆ.

ಅತ್ತ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಸಿದ್ದರಾಮಯ್ಯನವರು ಎಡೆಬಿಡದೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ..

ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆ ವೈಯಕ್ತಿಕ ನಿಂದನೆಗಳು ಕೂಡ ಕೇಳಿ ಬರುತ್ತಿವೆ. ಅಭ್ಯರ್ಥಿಗಳ ಕುಟುಂಬದವರು, ಸಂಬಂಧಿಕರು, ದೂರದ ಸಂಬಂಧಿಗಳು ಚುನಾವಣಾ ಅಖಾಡಕ್ಕಿಳಿದು ತಮ್ಮ ವರ ಪರವಾಗಿ ಮತಯಾಚಿಸುತ್ತಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ವಿಜಯನಗರ ಬಿಜೆಪಿ ಅಭ್ಯರ್ಥಿ ಆನಂದ್‍ಸಿಂಗ್ ಪರವಾಗಿ ಮತಯಾಚನೆ ಮಾಡಿದರು. ಅಲ್ಲದೆ, ಹುಣಸೂರು ಮತ್ತುಕೆ.ಆರ್.ಪೇಟೆಯಲ್ಲಿ ಬೃಹತ್ ರ್ಯಾಲಿ ನಡೆಸಿ ಎಚ್.ವಿಶ್ವನಾಥ್ ಮತ್ತು ನಾರಾಯಣಗೌಡ ಪರ ಮತಯಾಚಿಸಿದರು.

ಪ್ರತಿಪಕ್ಷ ಕಾಂಗ್ರೆಸ್-ಜೆಡಿಎಸ್‍ಗೆ ಈ ಚುನಾವಣೆಯಲ್ಲಿ ನೆಲೆಯೇ ಇಲ್ಲ. ಬಿಜೆಪಿಯ ಪರ ಒಲವಿದೆ. 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿ ಬೆಂಬಲಿಸಬೇಕೆಂದು ಮನವಿ ಮಾಡಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದರು.

ರಾಜ್ಯದ ರಾಜಕಾರಣಕ್ಕೆ ಉಪಚುನಾವಣಾ ಫಲಿತಾಂಶ ಹೊಸ ದಿಕ್ಸೂಚಿಯಾಗಲಿದೆ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಮಧ್ಯಂತರ ಚುನಾವಣೆ ಎದುರಾದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.

ಉತ್ತರಕರ್ನಾಟಕದ ಅಥಣಿ, ಗೋಕಾಕ, ಕಾಗವಾಡ ಕ್ಷೇತ್ರಗಳಲ್ಲಿ ಪ್ರವಾಹ ಸಂತ್ರಸ್ಥರ ಸಮಸ್ಯೆ ಮುಗಿದಿಲ್ಲ. ಪ್ರಚಾರಕ್ಕೆ ತೆರಳಿದ ಅಭ್ಯರ್ಥಿಗಳನ್ನು ಸಂತ್ರಸ್ಥರು ತರಾಟೆಗೆ ತೆಗೆದುಕೊಳ್ಳುತ್ತಿರುವ ಸನ್ನಿವೇಶಗಳು ಕಂಡು ಬರುತ್ತಿವೆ. ಇದರ ನಡುವೆಯೂ ಕಣದಲ್ಲಿರುವ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸಂತ್ರಸ್ಥರಿಗೆ ಸಮಜಾಯಿಷಿ ನೀಡುತ್ತಲೇ ತಮ್ಮ ಪ್ರಚಾರ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಚುನಾವಣಾ ಪ್ರಚಾರದ ಕಣ ಕಾವೇರುತ್ತಿದೆ. ಪ್ರಚಾರದ ಅಬ್ಬರ ಜೋರಾಗುತ್ತಿದೆ.

Facebook Comments

Sri Raghav

Admin