ಮತದಾರರ ಪಟ್ಟಿಗೆ ನಿಮ್ಮ ಹೆಸರು ಸೇರಿಸಲು ಅ.15 ಕೊನೆ ದಿನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.16- ಜನವರಿ 2020ರ ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅ.15ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದ್ದು, ಹೊಸ ಮತದಾರರ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಬಯಸುವವರು ಇದರ ಸದುಪಯೋಗಪಡೆದು ಕೊಳ್ಳಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಪಾಲಿಕೆ ಆಯುಕ್ತ ಅನಿಲ್‍ಕುಮಾರ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18 ವರ್ಷ ತುಂಬಿದ ಹಾಗೂ ವಿಳಾಸ ಬದಲಾವಣೆ ಬಯಸುವವರು ಅಗತ್ಯ ದಾಖಲೆಗಳಾದ ಪಾಸ್‍ಪೋರ್ಟ್, ಡಿಎಲ್, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತಿತರ ದಾಖಲೆಗಳೊಂದಿಗೆ ಅ.15ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು. ಅರ್ಜಿ ಸಲ್ಲಿಸಲು ಬಿಬಿಎಂಪಿ ಸೇವಾ ಕೇಂದ್ರ ಮತದಾರರ ಪೂರಕ ಕೇಂದ್ರ, ಬೆಂಗಳೂರು ಒನ್, ಅಟಲ್ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಅಥವಾ ಸಮೀಪದ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಇದಲ್ಲೆ ವೋಟರ್ ಹೆಲ್ಪ್‍ಲೈನ್ ಅಥವಾ ಎನ್‍ವಿಎಚ್‍ಪಿ, ಪೋರ್ಟಲ್‍ನಲ್ಲಿ ಲಾಗಿನ್ ಆಗಿ ಖಾತ್ರಿಪಡಿಸಿಕೊಳ್ಳಬಹುದು. ವಿಶೇಷ ಚೇತನರ ಹಾಗೂ ಮತದಾರರು ಅಲ್ಲದವರು 1950ಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ವಿಶೇಷ ಚೇತನರಿಗಾಗಿ ವಿಶೇಷ ಏಜೆಂಟರ್‍ಗಳನ್ನು ನೇಮಿಸಲಾಗಿದೆ.  ಹಾಲಿ ವಿಳಾಸದಿಂದ ಬದಲಿ ಮತಗಟ್ಟೆಗೆ ಹೆಸರು ಸೇರ್ಪಡೆ ಮಾಡಿಕೊಳ್ಳುವವರಿಗೂ ಅವಕಾಶ ಕಲ್ಪಿಸಿಕೊಡಲಾಗಿದೆ. ಅದರಲ್ಲೂ ಈ ಬಾರಿ ಹೊಸದಾಗಿ ಹೆಸರು ಸೇರ್ಪಡೆ ಮಾಡಿಕೊಳ್ಳುವವರಿಗಾಗಿ ಹೆಚ್ಚಿನ ಒತ್ತು ನೀಡಲಾಗಿದೆ. ನಗರದಲ್ಲಿ ಈ ಬಾರಿ ಶೇ.3ರಷ್ಟು ಹೊಸ ಸೇರ್ಪಡೆಗೆ ಆದ್ಯತೆ ನೀಡಲಾಗಿದೆ ಎಂದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ಆ.1ರಿಂದಲೇ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಸೆ.1ರಿಂದ ಕೈಗೆತ್ತಿಕೊಳ್ಳಲಾಗಿದ್ದು, ಅ.15ರವರೆಗೆ ಪರಿಷ್ಕರಣೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅ.15ರ ನಂತರ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಹೆಸರುಗಳನ್ನು ಪರಿಷ್ಕರಿಸಲಿದ್ದಾರೆ.

ನಗರ ವ್ಯಾಪ್ತಿಯಲ್ಲಿ 4 ಮಂದಿ, ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದು, ಪ್ರತಿ ಚುನಾವಣಾಧಿಕಾರಿ ವ್ಯಾಪ್ತಿಗೆ ಏಳು ವಿಧಾನಸಭಾ ಕ್ಷೇತ್ರಗಳು ಬರಲಿವೆ. ಒಟ್ಟು 28 ವಿಧಾನಸಭಾ ಕ್ಷೇತ್ರಗಳ 8514 ಮತಗಟ್ಟೆಗಳಿದ್ದು, ಹೊಸ ಮತದಾರರು ಹಾಗೂ ಪರಿಷ್ಕರಣೆಗಾಗಿ ಆಯಾಯ ವಿಧಾನಸಭಾ ಕ್ಷೇತ್ರಗಳಿಗೆ ಒಬ್ಬೊಬ್ಬ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.

ಎಚ್ಚರ:
ಈ ಬಾರಿ ಮತದಾರರ ಪರಿಷ್ಕರಣೆ ಸಂದರ್ಭದಲ್ಲಿ ಒಂದೇ ಕುಟುಂಬದ ಎಲ್ಲ ಸದಸ್ಯರು ಒಂದೇ ಸ್ಥಳದಲ್ಲಿರುವಂತೆ ನಿಗಾವಹಿಸಲಾಗಿದೆ ಹಾಗೂ ಜಿಐಎಸ್ ಮೂಲಕ ಮನೆಗಳ ಸಂಖ್ಯೆಗಳನ್ನು ಮರುಸ್ಥಾಪಿಸುವುದು, ಪ್ರತಿಯೊಬ್ಬ ಮತದಾರನ ಮತಗಟ್ಟೆ 2 ಕಿ.ಮೀ ದೂರವಿರದಂತೆ ನಿಗಾವಹಿಸಲಾಗಿದೆ.  ಮೃತಪಟ್ಟವರು ಹಾಗೂ ಖಾಯಂ ಮನೆ ಸ್ಥಳಾಂತರ ಮಾಡುವ ಮತದಾರರ ವಿವರಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ಎಚ್ಚರವಹಿಸಲಾಗಿದೆ ಎಂದರು.

Facebook Comments