ಚುನಾವಣಾ ಆಯೋಗದ ಆ್ಯಪ್ ಮೂಲಕ ಡಿಜಿಟಲ್ ಗುರುತಿನ ಚೀಟಿಗೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.25- ಕೇಂದ್ರ ಚುನಾವಣಾ ಆಯೋಗ ಇಂದು ಹೊಸ ಆ್ಯಪ್ ಬಿಡುಗಡೆ ಮಾಡಿದ್ದು, ಇದರ ಮೂಲಕ ಸಾರ್ವಜನಿಕರೇ ನೇರವಾಗಿ ಡಿಜಿಟಲ್ ಗುರುತಿನ ಚೀಟಿಯನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಡಾ.ಸಂಜೀವ್‍ಕುಮಾರ್ ಹೇಳಿದರು.  ಚುನಾವಣಾ ಆಯೋಗ ನಗರದ ಪುರಭವನದಲ್ಲಿಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ-2021 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾರರ ಗುರುತಿನ ಚೀಟಿ ಚುನಾವಣೆಗೆ ಮಾತ್ರ ಬಳಕೆ ಆಗಬೇಕು. ಆದರೆ ಬೇರೆ ದಾಖಲೆಗಳಿಗೂ ಇದನ್ನು ಬಳಸುತ್ತಿದ್ದಾರೆ. ಅದು ತಪ್ಪು ಎಂದು ಹೇಳಿದರು.

ಇನ್ನು ಮುಂದೆ ಎಪಿಕ್ ಕಾರ್ಡ್‍ಗಳು ಚುನಾವಣೆಗೆ ಮಾತ್ರ ಬಳಕೆಯಾಗುವಂತೆ ಕಾನೂನು ತರುವುದಾಗಿ ಅವರು ತಿಳಿಸಿದರು.  ಮುಖ್ಯ ಚುನಾವಣಾ ಅಧಿಕಾರಿ ಡಾ. ಸಂಜೀವ್ ಕುಮಾರ್ ಮಾತನಾಡಿ, ರಾಷ್ಟ್ರಾದ್ಯಂತ ರಾಷ್ಟ್ರ ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. ಮತದಾರರಲ್ಲಿ ಚುನಾವಣೆ ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮತದಾರರ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾರರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಮತದಾರರಿಗೆ ಸೂಕ್ತ ಮಾಹಿತಿ ನೀಡಬೇಕು. 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಚುನಾವಣಾ ಆಯೋಗದ ಗುರಿಯಾಗಿದೆ. ಅದಕ್ಕಾಗಿ ಹಲವು ಹೊಸ ಕಾರ್ಯಕ್ರಮಗಳನ್ನು ರೂಪಿಸಿ ಹೆಚ್ಚು ಮಂದಿಗೆ ಪ್ರೇರೇಪಣೆ ನೀಡಲಾಗುತ್ತಿದೆ. 5 ಲಕ್ಷ ಮತದಾರು ಸೇರ್ಪಡೆಯಾಗಿದ್ದು, 5.21 ಕೋಟಿ ಮತದಾರರಿದ್ದಾರೆ ಎಂದು ವಿವರಿಸಿದರು.

ಚುನಾವಣೆ ಬಹಳ ಕಠಿಣವಾದ ಕೆಲಸ ಹಾಗೂ ಜವಾಬ್ದಾರಿಯುತ ಕೆಲಸವಾಗಿದೆ. ಚುನಾವಣೆ ವೇಳೆ ಬೇರೆ ಬೇರೆ ಸವಲತ್ತುಗಳನ್ನು ನೀಡಲಾಗುತ್ತಿದೆ. 80 ವರ್ಷ ದಾಟಿದ ಮತದಾರರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗಿದೆ. ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆಯನ್ನು ತಡೆಯಲು ಸಿ-ವಿಜಿಲ್ ಆ್ಯಪ್ ಸಿದ್ದಪಡಿಸಲಾಗಿದೆ.

ಆ ಮೂಲಕ ನಾವು ನೀತಿ ಸಂಹಿತೆ ಉಲ್ಲಂಘನೆಯಾಗು ವುದನ್ನು ತಡೆಯಬಹುದಾಗಿದೆ. ನಾಗರಿಕರು ಛಾಯಾಚಿತ್ರ, ವಾಯ್ಸ್, ವೀಡಿಯೋ ಮೂಲಕ ಕಳುಹಿಸಬಹುದು. ಸಂಬಂಧಪಟ್ಟ ಅಧಿಕಾರಿಗಳೂ ಕೂಡಲೆ ಅಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಮಾತನಾಡಿ, ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಹೊಸಬರಿಗೆ ಮತದಾರರ ಗುರುತಿನ ಚೀಟಿ, ಚುನಾವಣೆಗೆ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ವಿತರಣೆ ಮಾಡಲಾಗಿದೆ. ಭಾರತದಲ್ಲಿ ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿಲ್ಲ. ಚುನಾವಣಾ ಪ್ರಕ್ರಿಯೆ ಬಹಳ ಕಠಿಣವಾಗಿದೆ. ಹಿಂದೆ 21 ವರ್ಷ ತುಂಬಿದವರಿಗೆ ಮತದಾರರ ಗುರುತಿನ ಚೀಟಿ ನೀಡಲಾಗುತ್ತಿತ್ತು. ಈಗ 18 ವರ್ಷ ತುಂಬಿದವರಿಗೆ ಮತದಾರರ ಗುರುತಿನ ಚೀಟಿ ನೀಡಲಾಗುತ್ತಿದೆ ಎಂದರು.

ಚುನಾವಣೆ ಬಗ್ಗೆ ಯಾರೂ ಹೆಚ್ಚು ಗಮನವರಿಸುತ್ತಿಲ್ಲ. ಹಕ್ಕು ಬಂದಾಗ ನಿಮ್ಮ ಹಕ್ಕನ್ನು ಸರಿಯಾಗಿ ಚಲಾಯಿಸಬೇಕು.ಯುವ ಪೀಳಿಗೆಗೆ ಮತದಾನ ಮಾಡುವ ಬಗ್ಗೆ ಹೆಚ್ಚು ಹೆಚ್ಚು ಅರಿವು ಮೂಡಿಸಬೇಕು. ಮತದಾನ ಪ್ರಕ್ರಿಯೆಯಲ್ಲಿ ಯುವಕರ ಪಾತ್ರ ಬಹಳ ಪ್ರಾಮುಖ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಮತದಾನ ಮಾಡಬೇಕು ಎಂದು ಹೇಳಿದರು.

ಈಗಲೂ ಕೂಡ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿಲ್ಲ. ಮತದಾರರ ಪಟ್ಟಿಗೆ ಎಲ್ಲರೂ ನೋಂದಣಿ ಮಾಡಿಕೊಳ್ಳಬೇಕು. ಈ ಪೈಕಿ ವೆಬ್‍ಸೈಟ್ ಮೂಲಕವೇ ಮನೆಯಲ್ಲೇ ಕೂತು ಮತದಾರರ ಗುರುತಿನ ಚೀಟಿ ಪಡೆಯಬಹುದು ಎಂದು ತಿಳಿಸಿದರು.

ಇವಿಎಂಗಳು ಬಳಕೆ ಮಾಡಿ ಚುನಾವಣೆ ನಡೆಸಲಾಗುತ್ತಿದೆ. ಆದರೂ ಆ ಬಗ್ಗೆ ಊಹಾಪೋಹಗಳಿವೆ. ನಮ್ಮ ದೇಶದಲ್ಲಿ ಇವಿಎಂ ಸರಿಯಾಗಿ ಕೆಲಸ ನಿರ್ವಹಿಸಿವೆ. ಇದರ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಬೇಕು. ಯಾರೂ ತಪ್ಪು ಮಾಹಿತಿ ನೀಡಬಾರದು ಎಂದು ಮನವಿ ಮಾಡಿದರು.

1.30 ಕೋಟಿ ಜನಸಂಖ್ಯೆಯಲ್ಲಿ 90.33 ಲಕ್ಷ ಮತದಾರಿದ್ದಾರೆ. 8,500 ಮತಗಟ್ಟೆಗಳಿವೆ. ಬಿಎಲ್‍ಒಗಳು ವರ್ಷವಿಡೀ ಕೆಲಸ ಮಾಡುತ್ತಾರೆ. ಅವರಿಗೆ ಈ ಪ್ರಶಸ್ತಿ ನೀಡಿದ್ದಾರೆ ಎಂದರು. ಮತದಾರರಿಗೆ ಶಕ್ತಿ ತುಂಬುವುದು, ಕೋವಿಡ್ ವೇಳೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು, ಯುವ ಮತದಾರರೆಲ್ಲಾ ಮತದಾರರ ಚೀಟಿಯನ್ನು ಪಡೆಯಲು ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

Facebook Comments