ಲೋಕಸಭಾ ಎಲೆಕ್ಷನ್ ರಿಸಲ್ಟ್ ಎಫೆಕ್ಟ್, ಅಲುಗಾಡುತ್ತಿದೆ ದೋಸ್ತಿ ಸರ್ಕಾರದ ಬುಡ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹೀನಾಯ ಸೋಲು ಕಂಡ ಬೆನ್ನಲ್ಲೇ ರಾಜ್ಯದಲ್ಲಿ ಅಧಿಕಾರದಲ್ಲಿರುವ ಮೈತ್ರಿ ಸರ್ಕಾರದ ಬುಡ ಅಲುಗಾಡತೊಡಗಿದೆ.

ಜೆಡಿಎಸ್ ಜತೆಗಿನ ಮೈತ್ರಿಯಿಂದಾಗಿ ಕಾಂಗ್ರೆಸ್‍ಗೆ ಹೀನಾಯ ಸೋಲುಂಟಾಗುವಂತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಜೆಡಿಎಸ್ ಜತೆಗಿನ ಮೈತ್ರಿಯನ್ನು ಕಡಿದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಈಗಾಗಲೇ ಕಾಂಗ್ರೆಸ್‍ನ ಶಾಸಕರಾದ ರಮೇಶ್ ಜಾರಕಿಹೊಳಿ, ರೋಷನ್ ಬೇಗ್, ಸುಧಾಕರ್, ಎಸ್.ಟಿ.ಸೋಮಶೇಖರ್ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಮಂದಿ ಶಾಸಕರು ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದು, ಸಮ್ಮಿಶ್ರ ಸರ್ಕಾರದ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದರು.

ಸುಮಾರು ಏಳೆಂಟು ಮಂದಿ ಶಾಸಕರು ರಾಜೀನಾಮೆ ನೀಡಿ ಉಮೇಶ್ ಜಾಧವ್ ಅವರ ರೀತಿ ಬಿಜೆಪಿ ಸೇರಲು ಸಿದ್ಧರಾಗಿದ್ದರು.ಇದರ ನಡುವೆ ಎಲ್ಲರಿಗೂ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಭಾರೀ ವಿಶ್ವಾಸವಿತ್ತು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಉಂಟಾಗಿ ಬಿಜೆಪಿಗಿಂತಲೂ ಹೆಚ್ಚು ಸ್ಥಾನ ಗೆಲ್ಲಬಹುದು.

ಆಗ ಕಾಂಗ್ರೆಸ್‍ನಿಂದ ಹೊರಹೋಗಲು ಮುಂದಾಗಿರುವವರು ಮತ್ತು ಅತೃಪ್ತರು ಹೆದರಿ ಹಿಂದೇಟು ಹಾಕುತ್ತಾರೆ ಎಂಬ ನಿರೀಕ್ಷೆಗಳಿದ್ದವು. ಆದರೆ, ಫಲಿತಾಂಶ ಸಂಪೂರ್ಣ ತಲೆಕೆಳಗಾಗಿರುವುದರಿಂದ ರಾಜಕೀಯದಲ್ಲೂ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ.ಕೇವಲ ಅತೃಪ್ತರಷ್ಟೇ ಅಲ್ಲ, ಕಾಂಗ್ರೆಸ್‍ನ ಬಹುತೇಕ ಶಾಸಕರು ಸಾರಾಸಗಟಾಗಿ ಮೈತ್ರಿ ವಿರುದ್ಧ ಸಿಡಿದು ನಿಂತಿದ್ದಾರೆ.

ಆಡಳಿತ ಪಕ್ಷವಾಗಿದ್ದರೂ ಕೇವಲ ಮೂರ್ನಾಲ್ಕು ಸ್ಥಳಗಳಷ್ಟೇ ಗೆಲ್ಲಲು ಸಾಧ್ಯವಾಗುವುದಾದರೆ ಅಧಿಕಾರದಲ್ಲಿದ್ದೇನು ಪ್ರಯೋಜನ ಎಂಬ ಪ್ರಶ್ನೆಯನ್ನು ಕಾಂಗ್ರೆಸಿಗರು ಕೇಳಲಾರಂಭಿಸಿದ್ದಾರೆ.ಕಾಂಗ್ರೆಸ್‍ನ ನಾಯಕತ್ವ ವಹಿಸಿದ್ದ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಅವರು ಈಗ ಪ್ರಶ್ನಾರ್ಹ ಸ್ಥಾನದಲ್ಲಿ ನಿಂತಿದ್ದಾರೆ.

ಈವರೆಗೂ ಹಾಗೂ ಹೀಗೂ ಸರ್ಕಾರ ಉಳಿಸಿಕೊಂಡ ದೋಸ್ತಿ ನಾಯಕರುಗಳಿಗೆ ಏಕಾಏಕಿ ಅಗ್ನಿಪರೀಕ್ಷೆ ಎದುರಾಗಿದೆ.ಚುನಾವಣೆಯ ಸೋಲು ನಾಯಕರ ನೈತಿಕತೆಯನ್ನು ಪ್ರಶ್ನಿಸಲಾರಂಭಿಸಿದೆ. ಸರ್ಕಾರದ ಭವಿಷ್ಯ ಸಂಪೂರ್ಣ ಅತಂತ್ರವಾಗಿದೆ.

ಜೆಡಿಎಸ್ ಪಾಳಯದಲ್ಲಿ ಕಾಂಗ್ರೆಸ್ ವಿರುದ್ಧ ಸಹಜವಾಗಿಯೇ ಆಕ್ರೋಶಗಳು ಕೇಳಿಬರುತ್ತಿವೆ. ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ ಜೆಡಿಎಸ್ ಸೋಲಿನ ವಿರುದ್ಧ ತೀವ್ರ ಆಕ್ರೋಶಗಳು ಕೇಳಿಬಂದಿದ್ದು, ಜೆಡಿಎಸ್ ಭಾಗದಿಂದಲೂ ಮೈತ್ರಿ ಸರ್ಕಾರವನ್ನು ಮುಂದುವರಿಸಬೇಕೆ, ಬೇಡವೆ ಎಂಬ ಪ್ರಶ್ನೆಗಳು ಕೇಳಿಬರಲಾರಂಭಿಸಿವೆ.

ಹಾಗೂ ಹೀಗೂ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನವನ್ನು ದೋಸ್ತಿಗಳು ಮಾಡಿದ್ದರು. ಕೇಂದ್ರದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನಾಯಕತ್ವ ಕರ್ನಾಟಕದಲ್ಲಿ ಕಾಂಗ್ರೆಸ್‍ಅನ್ನು ಮೂಲೋಚ್ಛಾಟನೆ ಮಾಡಲು ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ.

ಸಮ್ಮಿಶ್ರ ಸರ್ಕಾರ ರಚನೆಯಾಗಿ ಇಂದಿಗೆ ಬರೋಬ್ಬರಿ ಒಂದು ವರ್ಷ ತುಂಬಿದೆ. ಇದೇ ದಿನ ಲೋಕಸಭೆ ಚುನಾವಣೆ ಫಲಿತಾಂಶ ಬಂದಿದ್ದು, ಸರ್ಕಾರದ ಅಲುಗಾಟವೂ ಆರಂಭವಾಗಿರುವುದು ಕಾಕತಾಳೀಯ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin