ಎಲೆಕ್ಷನ್ ರಾಜಕಾರಣಕ್ಕಾಗಿ ಡಿಜೆಹಳ್ಳಿ ಮತ್ತು ಕೆಜಿಹಳ್ಳಿಯಲ್ಲಿ ಬಿತ್ತು ಬೆಂಕಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.14- ಬಿಬಿಎಂಪಿ ಚುನಾವಣೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಎಸ್‍ಡಿಪಿಐ ಸಂಘಟನೆಗೆ ಕೆಲ ರಾಜಕೀಯ ಪಕ್ಷಗಳ ಮುಖಂಡರು ಹಣಕಾಸಿನ ನೆರವು ನೀಡಿರುವುದು ಬೆಳಕಿಗೆ ಬಂದಿದ್ದು, ಇದೀಗ ಸರ್ಕಾರ ಹೆಡೆಮುರಿ ಕಟ್ಟಲು ಮುಂದಾಗಿದೆ.

ಡಿಜೆಹಳ್ಳಿ ಮತ್ತು ಕೆಜಿಹಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಸಲು ಎಸ್‍ಡಿಪಿಐ ಸಂಘಟನೆಗೆ ರಾಜಕೀಯ ಪಕ್ಷಗಳಿಗೆ ಸೇರಿದ ಪ್ರಮುಖರು ಎಸ್‍ಡಿಪಿಐ ಸಂಘಟನೆಗೆ ಭಾರೀ ಪ್ರಮಾಣದ ಆರ್ಥಿಕ ನೆರವು ನೀಡಿರುವುದು ಬೆಳಕಿಗೆ ಬಂದಿದೆ.

ಇದೀಗ ಗೃಹ ಇಲಾಖೆ ಇವರ ಮೇಲೆ ಕಣ್ಣಿಟ್ಟಿದ್ದು, ಅದರಲ್ಲೂ ಪ್ರಮುಖವಾಗಿ ನಗರದ ಪ್ರಮುಖ ಶಾಸಕ, ಬಿಬಿಎಂಪಿ ಸದಸ್ಯರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ವಿಚಾರಣೆಗೊಳಪಡಿಸುವಂತೆ ಪೆÇಲೀಸರಿಗೆ ಸರ್ಕಾರ ಸೂಚನೆ ಕೊಟ್ಟಿದೆ.

ಮೇಲ್ನೋಟಕ್ಕೆ ಈ ಗಲಭೆಯಲ್ಲಿ ಇವರ ಪಾತ್ರ ಎದ್ದು ಕಾಣುತ್ತಿದ್ದು, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ರಾಜಕೀಯವಾಗಿ ಹಿನ್ನಡೆ ಉಂಟು ಮಾಡಬೇಕೆಂಬ ಕಾರಣಕ್ಕಾಗಿಯೇ ವ್ಯವಸ್ಥಿತವಾಗಿ ಈ ಷಡ್ಯಂತ್ರ ರೂಪಿಸಲಾಗಿತ್ತು.

ನೇರವಾಗಿ ತಾವು ಶಾಮೀಲಾಗದೆ ಗಲಭೆ ಸೃಷ್ಟಿಸಲು ಎಸ್‍ಡಿಪಿಐ ಸೇರಿದಂತೆ ಮೂರು ಸಂಘಟನೆಗಳ ಮುಖಂಡರು ಮತ್ತು ಪದಾಕಾರಿಗಳಿಗೆ ಹಣಕಾಸು ಸೇರಿದಂತೆ ಎಲ್ಲ ರೀತಿಯ ನೆರವು ನೀಡಲಾಗಿತ್ತು.

ಈಗ ಪೊಲೀಸರು ಇವರ ದೂರವಾಣಿ ಕರೆಗಳು, ವಾಟ್ಸಪ್, ಫೇಸ್‍ಬುಕ್, ಟ್ವಿಟರ್, ಇನ್‍ಸ್ಟ್ರಾಗ್ರಾಮ್ ಸೇರಿದಂತೆ ಪ್ರತಿಯೊಂದರ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿದ್ದು, ಸರ್ಕಾರದ ಸೂಚನೆ ಮೇರೆಗೆ ಯಾವುದೇ ಕ್ಷಣದಲ್ಲಿ ಖೆಡ್ಡ ತೋಡಲು ಸಜ್ಜಾಗಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಈ ಸಂಘಟನೆಗಳ ಮುಖಂಡರು ಮತ್ತು ಪದಾಕಾರಿಗಳ ಜೊತೆ ನಡೆಸಿರುವ ದೂರವಾಣಿ ಕರೆಗಳನ್ನು ಪರಿಶೀಲಿಸಿದಾಗ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದರು ಎನ್ನಲಾಗುತ್ತಿದೆ.

ಕೇಂದ್ರ ಸರ್ಕಾರದ ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದ ವೇಳೆಯೇ ಗಲಭೆ ಸೃಷ್ಟಿಸಲು ಇವರು ತಯಾರಿ ನಡೆಸಿದ್ದರು. ಆದರೆ ಆ ಸಂದರ್ಭದಲ್ಲಿ ಕೈಗೊಂಡಿದ್ದ ಬಿಗಿಭದ್ರತೆಗಳಿಂದಾಗಿ ಅವರ ಲೆಕ್ಕಾಚಾರಗಳು ವಿಫಲವಾದವು.

ಆ.5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿಪೂಜೆ ನೆರವೇರುವ ಮುನ್ನವೇ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಕೋಮುಗಲಭೆ ಸೃಷ್ಟಿಸಲು ಲೆಕ್ಕಚಾರ ಹಾಕಲಾಗಿತ್ತು. ಇದೇ ಕಾರಣಕ್ಕಾಗಿ ಕೇರಳದ ಕಾಸರಗೋಡು, ಕಲ್ಲಿಕೋಟೆ, ತಿರವನಂತಪುರಂ ಸೇರಿದಂತೆ ಮತ್ತಿತರ ಕಡೆಯಿಂದ ನಗರಕ್ಕೆ ಎಸ್‍ಡಿಪಿಐ ಸಂಘಟನೆಯ ಪದಾಕಾರಿಗಳು ಮತ್ತು ಕಾರ್ಯಕರ್ತರನ್ನು ಕರೆತರಲಾಗಿತ್ತು.

ನಗರಕ್ಕೆ ಬಂದ ಇವರೆಲ್ಲರೂ ಟ್ಯಾನರಿ ರಸ್ತೆ, ಬಂಬೂಬಜಾರ್, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ನಾಗವಾರ, ಹೆಣ್ಣೂರು ಸೇರಿದಂತೆ ಮತ್ತಿತರ ಕಡೆ ತಮ್ಮ ಸಂಬಂಕರ ಮನೆಗಳಲ್ಲಿ ವಾಸ್ತವ್ಯ ಹೂಡಿದ್ದರು.

ಇದೇ ವೇಳೆ ನಗರದಲ್ಲಿ ಕೊರೊನಾ ಹೆಚ್ಚಾಗಿದ್ದ ಕಾರಣ ಲಾಕ್‍ಡೌನ್ ಜಾರಿಯಾಗಿತ್ತು. ಈ ವೇಳೆ ಬಹುತೇಕ ಕಡೆ 144 ಸೆಕ್ಷನ್ ಜಾರಿ, ಕಂಟೈನ್ಮೆಂಟ್ ಜೋನ್‍ಗಳಲ್ಲಿ ಸಂಪೂರ್ಣ ನಿರ್ಬಂಧ ಇದ್ದ ಕಾರಣ ಲೆಕ್ಕಾಚಾರ ಪುನಃ ಕೈಕೊಟ್ಟಿತ್ತು.

ಒಂದೇ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಈ ಸಂಘಟನೆಗಳಿಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹೋದರಿಯ ಮಗ, ಮುಸ್ಲಿಂ ಧಾರ್ಮಿಕ ಗುರು ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದುದು ಕೇವಲ ನೆಪ.

ಪೂರ್ವ ನಿಯೋಜನೆಯಂತೆ ಇದನ್ನೇ ಮುಂದಿಟ್ಟುಕೊಂಡು ನಗರದಲ್ಲಿ ಮಂಗಳವಾರ ರಾತ್ರಿ ಹಿಂದೆಂದೂ ಕಾಣದ ಕೋಮುಗಲಭೆ ಸೃಷ್ಟಿಸಲು ಕಾರಣಕರ್ತರಾದರು. ಈ ಬಗ್ಗೆ ಗುಪ್ತಚರ ವಿಭಾಗದಿಂದ ಇಂಚಿಂಚು ಮಾಹಿತಿ ಕಲೆ ಹಾಕಿರುವ ರಾಜ್ಯ ಸರ್ಕಾರ ಯಾರ್ಯಾರು ಶಾಮೀಲಾಗಿದ್ದಾರೋ ಅವರೆಲ್ಲರನ್ನು ವಿಚಾರಣೆಗೊಳಪಡಿಸಲು ಸಜ್ಜಾಗಿದೆ.

Facebook Comments

Sri Raghav

Admin