ಮಹಾರಾಷ್ಟ್ರ-ಹರಿಯಾಣ ಚುನಾವಣಾ ಫಲಿತಾಂಶಕ್ಕೆ ‘ಕೌಂಟ್‍’ಡೌನ್ ಶುರು, ಭಾರಿ ಬಂದೋಬಸ್ತ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ/ಚಂಡಿಗಢ, ಅ.23-ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ಹೈವೋಲ್ಟೇಜ್ ವಿಧಾನಸಭಾ ಚುನಾವಣೆಯ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದೆ.. ವ್ಯಾಪಕ ಬಂದೋಬಸ್ತ್ ನಡುವೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ.  ನಾಳೆ ಬೆಳಗ್ಗೆ 7 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಲಭಿಸಲಿದೆ. ಎರಡು ರಾಜ್ಯಗಳಲ್ಲಿ ಮತ ಎಣಿಕೆಗಾಗಿ ಚುನಾವಣಾ ಆಯೋಗ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ.

ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರ ಗದ್ದುಗೆ ಏರಲಿದೆ ಎಂದು ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.  ಮಹಾರಾಷ್ಟ್ರದ 288 ಮತ್ತು ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ಚುನಾವಣೆ ನಡೆದಿತ್ತು. ಅಲ್ಲದೇ ಅದೇ ದಿನ 17 ರಾಜ್ಯಗಳ ಎರಡು ಲೋಕಸಭಾ ಕ್ಷೇತ್ರಗಳು ಮತ್ತು 51 ವಿಧಾನಸಭಾ ಕ್ಷೇತ್ರಗಳಿಗೂ ಮತದಾನವಾಗಲಿದೆ.

288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ ಒಟ್ಟು 3,237 ಅಭ್ಯರ್ಥಿಗಳ ಹಣೆಬರಹ ನಾಳೆ ನಿರ್ಧಾರವಾಗಲಿದೆ. ಇವರಲ್ಲಿ 262 ಮಹಿಳಾ ಉಮೇದುವಾರರು. ಬಹು ಜನ ಸಮಾಜ ಪಕ್ಷವು ಈ ಬಗ್ಗೆ ಗರಿಷ್ಠ 262 ಹುರಿಯಾಳುಗಳನ್ನು ಅಖಾಡಕ್ಕಿಳಿಸಿದೆ. ಅಲ್ಲದೇ 1,400 ಅಭ್ಯರ್ಥಿಗಳೂ ಸಹ ಸ್ಪರ್ಧೆಯಲ್ಲಿದ್ದಾರೆ.  288 ಸದಸ್ಯಬಲದ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿ 150 ಕ್ಷೇತ್ರಗಳಲ್ಲಿ ಸ್ಫರ್ಧಿಸಿದ್ದರೆ, ಅರರ ಪ್ರಮುಖ ಮಿತ್ರಪಕ್ಷ ಶಿವಸೇನಾ 124 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದ ಸ್ಥಾನಗಳನ್ನು ಇತರ ಮಿತ್ರ ಪಕ್ಷಗಳಿಗೆ ಬಿಟ್ಟು ಕೊಡಲಾಗಿದೆ.

ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‍ಸಿಪಿ) ಮೈತ್ರಿಕೂಟ ಈ ಬಾರಿ ಬಿಜೆಪಿ-ಶಿವಸೇನಾ ವಿರುದ್ಧ ತೊಡೆತಟ್ಟಿ ನಿಂತಿದೆ.  ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಒಟ್ಟು 1169 ಅಭ್ಯರ್ಥಿಗಳು ಭವಿಷ್ಯವೂ ನಾಳೆ ನಿರ್ಧಾರವಾಗಲಿದೆ. ಇವರಲ್ಲಿ 104 ಮಹಿಳಾ ಸ್ಪರ್ಧಿಗಳೂ ಸಹ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಮುಖ್ಯಮಂತ್ರಿ ಮನೋಹರ್ ಕಟ್ಟರ್ ಮತ್ತೊಂದು ಬಾರಿ ಅಧಿಕಾರ ಚುಕ್ಕಾಣಿ ಹಿಡಿಯುವ ಉಮೇದಿನಲ್ಲಿದ್ದಾರೆ.

ಈ ಎರಡೂ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಜೊತೆ ಬಿಹಾರದ ಸಮಷ್ಟಿಪುರ ಮತ್ತು ಮಹಾರಾಷ್ಟ್ರದ ಸತಾರ ಲೋಕಸಭೆ ಹಾಗೂ ವಿವಿಧ ರಾಜ್ಯಗಳ 51 ವಿಧಾನಸಭೆಗಳಿಗೆ ಉಪ ಚುನಾವಣೆ ಫಲಿತಾಂಶವೂ ನಾಳೆ ಮಧ್ಯಾಹ್ನದ ವೇಳೆಗೆ ಹೊರಬೀಳುವ ನಿರೀಕ್ಷೆ ಇದೆ.  ಭಾರೀ ಬಿಗಿ ಭದ್ರತೆ : ಚುನಾವಣೆ ಪ್ರಯುಕ್ತ ಎರಡೂ ರಾಜ್ಯಗಳಲ್ಲಿ ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ನಕ್ಸಲರ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಮಹರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಈಗಾಗಲೇ ಹಲವು ಸಮೀಕ್ಷೆಗಳು ಹೇಳಿವೆ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡÀ್ನವೀಸ್ ಮತ್ತು ಹರಿಯಾಣದಲ್ಲಿ ಮನೋಹರ್ ಕಟ್ಟರ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ