ದಣಿವರೆಯದೆ ನಾಯಕರ ಭರ್ಜರಿ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.29- ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತಬೇಟೆ ಜೋರಾಗಿದೆ. ಬಹಿರಂಗ ಪ್ರಚಾರಕ್ಕೆ ಕೇವಲ ನಾಲ್ಕು ದಿನಗಳು ಬಾಕಿ ಉಳಿದಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳ ಮುಖಂಡರು ಮತ ಸೆಳೆಯಲು, ತಾ ಮುಂದು, ನಾ ಮುಂದು ಎಂದು ಮತದಾರರ ಮೇಲೆ ಮುಗಿಬೀಳುತ್ತಿದ್ದಾರೆ.

ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದ್ದು ಮತದಾರರ ಮನವೊಲಿಕೆ ಪ್ರಯತ್ನವನ್ನು ತೀವ್ರಗೊಳಿಸಿದ್ದಾರೆ. ದಿನೇ ದಿನೇ ತಮ್ಮ ಕಾರ್ಯತಂತ್ರವನ್ನು ಬದಲಾಯಿಸುತ್ತಿದ್ದಾರೆ. ಎದುರಾಳಿಯ ಸಾಮಥ್ರ್ಯಕ್ಕೆ ತಕ್ಕಂತೆ ತಮ್ಮ ಪ್ರಚಾರ ತಂತ್ರವನ್ನು ರೂಪಿಸಿಕೊಂಡು ಮತದಾರರ ಮನ ಗೆಲ್ಲುವ ಪ್ರಯತ್ನ ನಡೆಸುತ್ತಿದ್ದಾರೆ.

ತಮ್ಮ ಬೆಂಬಲಿಗರೊಂದಿಗೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ಗಂಟೆವರೆಗೆ ಮತದಾರರ ಮನೆಗಳಿಗೆ ಕರಪತ್ರ ಹಿಡಿದು ಎಡತಾಕುತ್ತಿದ್ದಾರೆ. ಗೆಲುವು ಸಾಧಿಸಲೇಬೇಕೆಂದು ಜಿದ್ದಾಜಿದ್ದಿಗೆ ಬಿದ್ದು ಅಭ್ಯರ್ಥಿಗಳು ಸೆಣೆಸಾಟ ನಡೆಸುತ್ತಿದ್ದಾರೆ. 15 ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಯಾವ ಅಭ್ಯರ್ಥಿಗಳಿಗೂ ಗೆಲುವು ಅಷ್ಟು ಸುಲಭವಾಗಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆಯಿದೆ. ಕೆಲವೆಡೆ ಕಾಂಗ್ರೆಸ್, ಬಿಜೆಪಿ ಹಣಾಹಣಿಯಿದ್ದರೆ, ಮತ್ತೆ ಕೆಲವೆಡೆ ಬಿಜೆಪಿ, ಜೆಡಿಎಸ್ ಇದೆ. ಇನ್ನು ಕೆಲವೆಡೆ ನೇರ ಹಣಾಹಣಿಯಿದೆ.

ಹಲವು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ತೊಡರುಗಾಲಾಗಿದ್ದಾರೆ. ಬಿಜೆಪಿ ಸರ್ಕಾರದ ಅಳಿವು, ಉಳಿವಿನ ಪ್ರಶ್ನೆಯಾಗಿರುವ ಮತ್ತು ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್‍ಗೆ ಪ್ರತಿಷ್ಠೆಯ ಕಣವಾಗಿರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಎಲ್ಲಾ ಪಕ್ಷಗಳು ತೀವ್ರ ಸೆಣಸಾಟ ನಡೆಸಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಒಂದು ಹಂತದ ಪ್ರಚಾರ ಮುಗಿಸಿ ಎಲ್ಲಾ ಕ್ಷೇತ್ರಗಳಲ್ಲಿ ಎರಡನೇ ಹಂತದ ಪ್ರಚಾರ ನಡೆಸುತ್ತಿದ್ದಾರೆ. ಅದೇ ರೀತಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳಿರುವ 12 ಕ್ಷೇತ್ರಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಹಿರೇಕೆರೂರು, ರಾಣೆಬೆನ್ನೂರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಹಾಲಕ್ಷ್ಮೀ ಲೇಔಟ್‍ನ ಜೆಡಿಎಸ್ ಅಭ್ಯರ್ಥಿ ಗಿರೀಶ್‍ಕೆ. ನಾಶಿ ಪರ ಮತ ಯಾಚನೆ ಮಾಡಿದರು.

ಸಿದ್ದರಾಮಯ್ಯ ಅಥಣಿ, ಗೋಕಾಕ್, ಕಾಗವಾಡ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮತಯಾಚನೆ ಮಾಡಿದರು ಅತ್ತ ನಾಯಕರು ಬಹಿರಂಗ ಸಭೆ, ರೋಡ್ ಶೋ, ರ್ಯಾಲಿಗಳ ಮೂಲಕ ಮತಪ್ರಚಾರ ನಡೆಸಿದರೆ ಇತ್ತ ಬೆಂಬಲಿಗರು, ಕಾರ್ಯಕರ್ತರು ಕರಪತ್ರಗಳನ್ನು ಹಿಡಿದು ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುತ್ತಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತದಾರರ ಮಾಹಿತಿ ಸಂಗ್ರಹಿಸಿ ಮತಗಟ್ಟೆಗಳ ವಿವರಗಳನ್ನು ನೀಡುತ್ತಿದ್ದಾರೆ. ಮತದಾರರ ಮನವೊಲಿಸಲು ಆಮಿಷಗಳನ್ನು ಒಡ್ಡಲಾಗುತ್ತಿದೆ. ಚುನಾವಣೆ ಇನ್ನೆರಡು ದಿನ ಬಾಕಿ ಇರುವಂತೆ ಮತದಾರರಿಗೆ ವಿವಿಧ ಉಡುಗೊರೆ ಕೊಡುವ ಕೆಲಸ ಪ್ರಾರಂಭ ಮಾಡಲು ಪಕ್ಷಗಳ ಕಾರ್ಯಕರ್ತರು ಸಜ್ಜಾಗಿದ್ದಾರೆ.

ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಎಲ್ಲದರ ನಡುವೆಯೂ ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಪಕ್ಷಗಳ ಮುಖಂಡರು, ಕಾರ್ಯಕರ್ತರು ನಡೆಸುತ್ತಿದ್ದಾರೆ.
ಡಿ.5ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾರ ಯಾರ ಕಡೆ ಒಲವು ತೋರಿದ್ದಾನೆ ಎಂಬುದು ಡಿ.9ರ ಫಲಿತಾಂಶದಲ್ಲಿ ಹೊರಬೀಳಲಿದೆ.

Facebook Comments