ಆರ್.ಆರ್ ನಗರ ‘ಕೈ’ವಶ, 78ಕ್ಕೇರಿದ ಕಾಂಗ್ರೆಸ್ ಶಾಸಕರ ಸಂಖ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

RR-Nagara-Result

ಬೆಂಗಳೂರು, ಮೇ 31-ಪ್ರತಿಷ್ಠಿತ ಕಣವಾಗಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಮುನಿರತ್ನ ಅವರು ಎರಡನೆ ಬಾರಿಗೆ ಶಾಸಕರಾಗಿ ಆರಿಸಿ ಬಂದಿದ್ದಾರೆ.  ವೋಟರ್ ಐಡಿ ಅಕ್ರಮ ಸಂಗ್ರಹ ಆರೋಪದಡಿ ಮುಂದೂಡಲ್ಪಟ್ಟಿದ್ದ ಆರ್‍ಆರ್ ನಗರ ಚುನಾವಣೆ ಕಳೆದ 28ರಂದು ನಡೆದು ಇಂದು ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ ಅವರನ್ನು ಭಾರೀ ಅಂತರದಿಂದ ಪರಾಭವಗೊಳಿಸಿದ್ದಾರೆ. ವೋಟರ್ ಐಡಿ ಅಕ್ರಮ ಸಂಗ್ರಹ ಪ್ರಕರಣದಲ್ಲಿ ಸ್ವತಃ ಮುನಿರತ್ನ ಅವರೇ 14ನೆ ಆರೋಪಿಯಾಗಿದ್ದರೂ ಅವರು ಆರ್‍ಆರ್ ನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಎದುರಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಕ್ಷೇತ್ರವ್ಯಾಪ್ತಿಯ ಹಲಗೆವಡೇರಹಳ್ಳಿಯಲ್ಲಿರುವ ಜ್ಞಾನಾಕ್ಷಿ ಶಾಲೆಯಲ್ಲಿ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಲ್ಲೇ ಮುನ್ನಡೆ ಕಾಯ್ದುಕೊಂಡ ಮುನಿರತ್ನ ಅವರು ಪ್ರತಿ ಸುತ್ತಿನಲ್ಲೂ ತನ್ನ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತ ಕೊನೆಯ 18ನೆ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡು ಗೆಲುವು ಪಡೆದುಕೊಂಡರು.

104 ಸ್ಥಾನ ಪಡೆದರೂ ಸರ್ಕಾರ ರಚಿಸಲು ಸಾಧ್ಯವಾಗದೆ ಪರಿತಪಿಸುತ್ತಿದ್ದ ಬಿಜೆಪಿ ಆರ್‍ಆರ್ ನಗರ ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದಿತ್ತು. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೇ ಅಭ್ಯರ್ಥಿ ಮುನಿರಾಜುಗೌಡ ಪರ ವ್ಯಾಪಕ ಪ್ರಚಾರ ನಡೆಸಿದರೂ ಅವರು ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ವಿಧಾನಸೌಧಕ್ಕೆ ಮಾತ್ರ ಸೀಮಿತ. ಆರ್‍ಆರ್ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಅಭ್ಯರ್ಥಿ ರಾಮಚಂದ್ರ ಪರ ವ್ಯಾಪಕ ಪ್ರಚಾರ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಬಿಜೆಪಿಯಿಂದ ಟಿಕೆಟ್ ದೊರೆಯಲಿಲ್ಲ ಎಂದು ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದ ರಾಮಚಂದ್ರ ಅವರೊಂದಿಗೆ ಕ್ಷೇತ್ರದಲ್ಲಿರುವ ಮುನಿರತ್ನ ವಿರೋಧಿ ಪಡೆ ಕೈ ಜೋಡಿಸಿತ್ತು. ಹೀಗಾಗಿ ರಾಮಚಂದ್ರ ಅವರು ಗೆಲ್ಲುವ ಸಾಧ್ಯತೆ ಇದೆ ಎಂದೇ ಭಾವಿಸಲಾಗಿತ್ತು. ಆದರೆ, ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರ ಪರ ಕ್ಷೇತ್ರದ ಮತದಾರರು ಒಲವು ತೋರಿಲ್ಲ. ಗೆದ್ದೇ ಗೆಲ್ಲುತ್ತೇನೆ ಎಂದು ಬೀಗುತ್ತಿದ್ದ ಜೆಡಿಎಸ್ ಅಭ್ಯರ್ಥಿ ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಕ್ಷೇತ್ರದ ಹಿನ್ನೆಲೆ:
ಕ್ಷೇತ್ರ ಪುನರ್‍ವಿಂಗಡಣೆ ನಂತರ ರಚನೆಯಾದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯಿಂದ ಎಂ.ಶ್ರೀನಿವಾಸ್ ಭಾರೀ ಅಂತರದಿಂದ ಆರಿಸಿ ಬಂದಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಅವರು ಬಿಜೆಪಿಯ ಎಂ.ಶ್ರೀನಿವಾಸ್ ಅವರನ್ನು ಪರಾಭವಗೊಳಿಸಿ ವಿಧಾನಸೌಧ ಪ್ರವೇಶಿಸಿದ್ದರು.  ಈ ಚುನಾವಣೆ ನಂತರ ಬಿಜೆಪಿ ಅಭ್ಯರ್ಥಿ ಎಂ.ಶ್ರೀನಿವಾಸ್ ಅವರು ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದರು. ಇದೀಗ 2018ರ ಚುನಾವಣೆಯಲ್ಲೂ ಮುನಿರತ್ನ ಅವರು ಎರಡನೆ ಬಾರಿಗೆ ಗೆಲುವು ಸಾಧಿಸಿದ್ದಾರೆ.

78ಕ್ಕೆ ಏರಿಕೆ:
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 78 ಸ್ಥಾನ ಗಳಿಸಿತ್ತು. ಆದರೆ, ರಸ್ತೆ ಅಪಘಾತದಲ್ಲಿ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 77ಕ್ಕೆ ಕುಸಿದಿತ್ತು. ಇದೀಗ ಆರ್‍ಆರ್ ನಗರದಲ್ಲಿ ಮುನಿರತ್ನ ಅವರು ಗೆಲುವು ಸಾಧಿಸಿರುವುದರಿಂದ ಕಾಂಗ್ರೆಸ್ ಶಾಸಕರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯ್‍ಕುಮಾರ್ ಅವರ ನಿಧನದಿಂದ ಮುಂದೂಡಲ್ಪಟ್ಟಿದ್ದ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಜೂ.11ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‍ನಿಂದ ಸೌಮ್ಯಾರೆಡ್ಡಿ, ಬಿಜೆಪಿಯಿಂದ ಬಿ.ಎನ್.ವಿಜಯ್‍ಕುಮಾರ್ ಸಹೋದರ ಬಿ.ಎನ್.ಪ್ರಹ್ಲಾದ್ ಹಾಗೂ ಜೆಡಿಎಸ್‍ನಿಂದ ಕಾಳೇಗೌಡ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.

ಜಯನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರಬಲ ಪೈಪೋಟಿ ಏರ್ಪಡಲಿದ್ದು, ಈ ಕ್ಷೇತ್ರದಲ್ಲಿ ಯಾರೇ ಗೆಲುವು ಸಾಧಿಸಿದರೂ ಆಯಾ ಪಕ್ಷಗಳ ಶಾಸಕರ ಸಂಖ್ಯೆಗೆ ಒಂದಂಕಿ ಸೇರ್ಪಡೆಯಾಗಲಿದೆ.   ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಆ ಪಕ್ಷದ ಶಾಸಕರ ಸಂಖ್ಯೆ 105ಕ್ಕೆ ಏರಿಕೆಯಾಗಲಿದೆ. ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದರೆ ಆ ಪಕ್ಷದ ಶಾಸಕರ ಸಂಖ್ಯೆ 79ಕ್ಕೆ ಏರಿಕೆಯಾಗಲಿದೆ.

ಉಳಿದ ಅಭ್ಯರ್ಥಿಗಳ ಹಿನ್ನೆಲೆ:
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಟ ಹುಚ್ಚ ವೆಂಕಟ್ 764 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ಆದರೂ ಕಣದಲ್ಲಿದ್ದ ಒಟ್ಟು 13 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‍ನ ಮುನಿರತ್ನ ಅವರು ಗೆಲುವು ಸಾಧಿಸಿದ್ದರೆ, ಎರಡನೆ ಸ್ಥಾನದಲ್ಲಿರುವ ಬಿಜೆಪಿ 82,572 ಹಾಗೂ ಜೆಡಿಎಸ್ 60,360 ಮತಗಳನ್ನು ಪಡೆದಿದೆ. ಇನ್ನು 10 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ನೋಟ ಮತಗಳು 2724 ಇವೆ.

# ಫಲಿತಾಂಶ :
ಪಕ್ಷ – ಅಭ್ಯರ್ಥಿ- ಗಳಿಸಿದ ಮತಗಳು – ಫಲಿತಾಂಶ
ಕಾಂಗ್ರೆಸ್ – ಮುನಿರತ್ನ –108064 ಗೆಲುವು
ಬಿಜೆಪಿ – ತುಳಿಸಿ ಮುನಿರಾಜು -82572- ಸೋಲು
ಜೆಡಿಎಸ್ – ರಾಮಚಂದ್ರಪ್ಪ –60360- ಸೋಲು
ಪಕ್ಷೇತರ – ಹುಚ್ಚ ವೆಂಕಟ್ -764-ಸೋಲು
ನೋಟಾ ಮತಗಳು :  2724

Facebook Comments

Sri Raghav

Admin