ಮಳೆ ತಂದ ಅನಾಹುತ, ವಿದ್ಯುತ್ ಶಾಕ್ ವ್ಯಕ್ತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.12- ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮನೆಯಲ್ಲಿ ತುಂಬಿಕೊಂಡಿದ್ದ ನೀರನ್ನು ಹೊರಗೆ ಹಾಕಲು ಲೈಟ್ ಹಾಕುತ್ತಿದ್ದಂತೆ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಪೈಂಟರ್ ಒಬ್ಬರು ಮೃತಪಟ್ಟಿ ರುವ ಘಟನೆ ಕೆಪಿ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 8ನೆ ಕ್ರಾಸ್ ನಿವಾಸಿ ವೆಂಕಟೇಶ್ (56) ಮೃತಪಟ್ಟ ವ್ಯಕ್ತಿ.

ಇವರು ವೃತ್ತಿಯಲ್ಲಿ ಪೈಂಟರ್. ಕಳೆದ 13 ವರ್ಷಗಳಿಂದ ವೆಂಕಟೇಶ್-ಶ್ಯಾಮಲಾ ದಂಪತಿ ಈ ಮನೆಯಲ್ಲಿ ವಾಸವಾಗಿದ್ದು, ಶ್ಯಾಮಲಾ ಟೈಲರ್ ವೃತ್ತಿ ಮಾಡುತ್ತಿದ್ದಾರೆ. ನಿನ್ನೆ ದಂಪತಿ ಹೊರಗೆ ಹೋಗಿದ್ದಾಗ ಭಾರೀ ಮಳೆ ಬಂದು ಇವರ ಮನೆಗೆ ನೀರು ನುಗ್ಗಿದೆ. ಕೆಲ ಸಮಯದ ಬಳಿಕ ಮನೆ ಬಳಿ ಬಂದಾಗ ಮನೆಯೊಳಗೆ ನೀರು ತುಂಬಿಕೊಂಡಿರುವುದನ್ನು ಗಮನಿಸಿದ್ದಾರೆ. ಆ ಸಂದರ್ಭದಲ್ಲಿ ವಿದ್ಯುತ್ ಸಹ ಕಡಿತಗೊಂಡಿತ್ತು. ಹಾಗಾಗಿ ಎದುರು ಮನೆ ಬಳಿ ನಿಂತಿದ್ದರು.

ಮಳೆ ನಿಂತ ಕೆಲ ಸಮಯದ ಬಳಿಕ ವಿದ್ಯುತ್ ಬಂದಾಗ ಮನೆಯೊಳಗೆ ತುಂಬಿದ್ದ ನೀರನ್ನು ಹೊರಹಾಕುವ ಸಲುವಾಗಿ ಮನೆಯ ಬೀಗ ತೆಗೆದು ಒಳಗೆ ಹೋಗಿ ವೆಂಕಟೇಶ್ ಲೈಟ್ ಆನ್ ಮಾಡುತ್ತಿದ್ದಂತೆ ಸ್ವಿಚ್‍ಬೋರ್ಡ್‍ನಲ್ಲಿ ಶಾರ್ಟ್ ಸಕ್ರ್ಯೂಟ್ ಆಗಿ ವಿದ್ಯುತ್ ಸ್ಪರ್ಶಿಸಿ ಕುಸಿದುಬಿದ್ದಿದ್ದಾರೆ.
ಶ್ಯಾಮಲಾ ಅವರು ತಕ್ಷಣ ನೆರೆಹೊರೆಯವರ ಸಹಾಯದಿಂದ ವೆಂಕಟೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿಡಲಾಗಿದೆ.

ಈ ಬಗ್ಗೆ ಮನೆ ಮಾಲೀಕರಾದ ನೀಲು ಫಾತಿಮಾ ಅವರು ಮಾತನಾಡಿ, ಕಳೆದ 13 ವರ್ಷಗಳಿಂದ ಈ ದಂಪತಿ ನಮ್ಮ ಮನೆಯಲ್ಲಿ ಬಾಡಿಗೆಗಿದ್ದರು. ಭಾರೀ ಮಳೆಯಿಂದ ಮನೆಗೆ ನೀರು ತುಂಬಿಕೊಂಡಿದೆ. ಹಿಂದೆ ಮಳೆ ಬಂದರೂ ಮನೆಗೆ ನೀರು ತುಂಬುತ್ತಿರಲಿಲ್ಲ. ಈಗ ಹೊಸ ಪೈಪ್ ಅಳವಡಿಸಿರುವುದರಿಂದ ನೀರು ತುಂಬಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

 

Facebook Comments