ವಿದ್ಯುತ್ ದರ ಏರಿಕೆಯ ವಿರುದ್ಧ ಕಾಂಗ್ರೆಸ್ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.10- ವಿದ್ಯುತ್ ದರ ಏರಿಕೆಯ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಉಭಯ ಸರ್ಕಾರಗಳು ಜನರನ್ನು ಮುಕ್ಕಿ ತಿನ್ನುತ್ತಿವೆ ಎಂದು ಆಕ್ರೋಶ ವ್ಯಕ್ತ ಪಡಿಸಿದೆ. ಲಾಕ್ಡೌನ್ನಿಂದ ಚೇತರಿಸಿಕೊಳ್ಳಲು ಬಿಡದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಜನತೆಯನ್ನು ಹಸಿಹಸಿಯಾಗಿ ಬಗೆದು ತಿನ್ನುತ್ತಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಆಸ್ತಿ ತೆರಿಗೆ ಏರಿಕೆಯಿಂದ ಕಂಗಾಲಾಗಿರುವ ಜನರ ಮೇಲೆ ಈಗ ವಿದ್ಯುತ್ ದರ ಏರಿಕೆ, ಬರೆ ಹಾಕಲಾಗಿದೆ. ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ ಎನ್ನಲು ಇನ್ನೇನು ಬೇಕು ಕಿಡಿಕಾರಿದೆ.

ಕೊರೊನಾ ಮುಕ್ತರಾಗಲು ಮುಂಚೂಣಿ ಕಾರ್ಯಕರ್ತರಾಗಿದ್ದ ಆರೋಗ್ಯ ಸಿಬ್ಬಂದಿಗಳಿಗೆ ಜನವರಿಯಲ್ಲಿ ಲಸಿಕೆ ನೀಡುವಿಕೆ ಆರಂಭವಾಗಿ 6 ತಿಂಗಳು ಕಳೆದಿದೆ. ಆದರೆ 16 ಲಕ್ಷ ಸಿಬ್ಬಂದಿಗಳಲ್ಲಿ ಈವರೆಗೂ ಲಸಿಕೆ ಪಡೆದವರು ಕೇವಲ 4,77,210 ಮಂದಿ ಮಾತ್ರ. ಉಳಿದವರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದೆ.

ಅಂಕಿ ಅಂಶಗಳಿಂದ ಸರ್ಕಾರದ ಲಸಿಕೆ ಅಭಿಯಾನದ ಟೊಳ್ಳುತನ ಮತ್ತೊಮ್ಮೆ ಬಯಲಾಗಿದೆ. ಮುಂಚೂಣಿ ಕಾರ್ಯಕರ್ತರಿಗೆ, ಆರೋಗ್ಯ ಸಿಬ್ಬಂದಿಗಳಿಗೆ ಬಹಳ ಹಿಂದೆ ಲಸಿಕೆ ನೀಡಲು ಶುರು ಮಾಡಲಾಗಿತ್ತಾದರೂ ಸಾಧನೆ ಮಾತ್ರ ಶೂನ್ಯ. ಕರೋನಾದೊಂದಿಗೆ ಪ್ರತಿನಿತ್ಯ ಹೋರಾಡುವವರಿಗೇ ಇನ್ನೂ ಸಹ ಲಸಿಕೆಯ ಸಂಪೂರ್ಣ ಸುರಕ್ಷತೆ ನೀಡಲಾಗಿಲ್ಲ ಎಂದರೆ ಜನತೆಯ ರಕ್ಷಣೆ ಸಾಧ್ಯವೇ?

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರದ ಅಯೋಗ್ಯತನವಲ್ಲವೇ? ಸರ್ಕಾರವೂ ಲಸಿಕೆ ನೀಡುವುದಿಲ್ಲ, ಕಾಂಗ್ರೆಸ್ಗೂ ನೀಡಲು ಬಿಡುವುದಿಲ್ಲವೇಕೆ ಎಂದು ಪ್ರಶ್ನಿಸಲಾಗಿದೆ.

Facebook Comments