ಕೈಗಾರಿಕೆಗಳಿಗೆ ನೀಡುತ್ತಿದ್ದ ವಿದ್ಯುತ್ತನ್ನು ಕೃಷಿ ವಲಯಕ್ಕೆ ನೀಡಲು ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

ದೇವನಹಳ್ಳಿ: ರಾಜ್ಯದ್ಯಂತ ಕೈಗಾರಿಕೆಗಳು ಸ್ಥಗಿತವಾಗಿರುವುದರಿಂದ ಅವುಗಳಿಗೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಅನ್ನು ಕೃಷಿ ವಲಯಕ್ಕೆ ನೀಡುವ ಮನವಿ ಪರಿಶೀಲಿಸಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಭರವಸೆ ನೀಡಿದರು.

ದೇವನಹಳ್ಳಿ ತಾಲ್ಲೂಕು ಕೃಷಿ ಪ್ರಗತಿಕಾರ್ಯ ಪರಿಶೀಲನೆ‌ ನಡೆಸಿದ ನಂತರ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕೃಷಿ ಚಟುವಟಿಕೆಗೆ ಮೊದಲಿನಿಂದಲೂ ನಿಯಮಿತವಾಗಿ, ನಿರ್ದಿಷ್ಟ ಕಾಲಾವಧಿಯಲ್ಲಿ‌ ವಿದ್ಯುತ್ ಪೂರೈಕೆಯಾಗುತ್ತಿದೆ. ಈಗ ಕೊರೊನಾ‌ ಕಾರಣದಿಂದ ಎಲ್ಲೆಡೆ ಲಾಕ್ ಡೌನ್ ಇರುವುದರಿಂದ ಕೈಗಾರಿಕಾ ವಲಯ ಬಂದ್ ಆಗಿವೆ.

ಅವುಗಳಿಗೆ ನೀಡುತ್ತಿದ್ದ ವಿದ್ಯುತ್ ಅನ್ನು ಕೃಷಿ ಚಟುವಟಿಕೆಗಳಿಗೆ ಪೂರೈಸಿ ಎಂದು ರೈತ ಪ್ರತಿನಿಧಿಗಳು ಬೇಡಿಕೆ ಸಲ್ಲಿಸಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆದಷ್ಟು ಶೀಘ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದರು.

ರಾಗಿ ಖರೀದಿ ಕೇಂದ್ರ ಆರಂಭವಾಗಿಲ್ಲ ಎಂಬ ವಿಷಯ ಹೇಳಿದ್ದಾರೆ. ಈಗಾಗಲೇ ಬಿಳಿಜೋಳ ಖರೀದಿ ಕೇಂದ್ರಗಳು ಆರಂಭವಾಗಿವೆ. ತೊಗರಿ – ಕಡಲೆ ಖರೀದಿ ಕೇಂದ್ರಗಳು ಆರಂಭವಾಗುತ್ತವೆ. ರಾಗಿ ಖರೀದಿ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಇದುವರೆಗೂ ರಾಜ್ಯದ 22 ಜಿಲ್ಲೆಗಳಿಗೆ ಭೇಟಿ ನೀಡಿ ಕೃಷಿ ಚಟುವಟಿಕೆ ಪ್ರಗತಿ ಪರಿಶೀಲಿಸಿದ್ದೇನೆ. ಬಹುತೇಕ ಕಡೆ ಹಣ್ಣು – ತರಕಾರಿಗಳು ಎಂದಿನ ಪ್ರಮಾಣದಲ್ಲಿ ಮಾರಾಟವಾಗದೇ ಇರುವುದರಿಂದ ತೊಂದರೆಯಾಗಿದೆ.‌ಆದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಇರುವ ಹಾಪ್ ಕಾಮ್ಸ್ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಗ್ತಾಮೀಣ ಭಾಗದಿಂದ ಹಣ್ಣು – ತರಕಾರಿಗಳನ್ನು ತರಲು ಸಾಗಣೆ ವಾಹನಗಳಿಗೆ ತಗುಲುವ ದರ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ರಾಜ್ಯದ ಬಹುತೇಕ ಕಡೆ ಖರೀದಿದಾರರಿಲ್ಲದೇ ಪುಷ್ಪಕೃಷಿ ವಲಯಕ್ಕೆ ನಷ್ಟವಾಗಿದೆ. ದೇವಸ್ಥಾನಗಳು ಮುಚ್ಚಿರುವುದು, ಶುಭ ಸಮಾರಂಭ ನಡೆಯದಿರುವುದು ಇದಕ್ಕೆ ಕಾರಣ. ಇವರು ಪರಿಹಾರ ಕೊಡಿ ಎಂದು ಕೇಳುತ್ತಿದ್ದಾರೆ. ಈಗಾಗಲೇ ಪುಷ್ಪಕೃಷಿ ನಷ್ಟದ ಬಗ್ಗೆ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರಿಹಾರ ಕೊಡುವ ವಿಷಯವನ್ನು ಸರ್ಕಾರ ಪರಿಶೀಲಿಸುತ್ತದೆ ಎಂದು‌ ಭರವಸೆ ನೀಡಿದರು.

ಹಸುಗಳಿಗೆ ನೀಡುವ ಫೀಡ್ಸ್ ದಾಸ್ತಾನಿನಲ್ಲಿ – ಪೂರೈಕೆಯಲ್ಲಿ‌ ಕೊರತೆಯಾಗಿಲ್ಲ. ಪ್ರಸ್ತುತ ಪರಿಸ್ಥಿತಿ ಲಾಭ ಪಡೆದು ಕಾಳಸಂತೆಯಲ್ಲಿ ಮಾರಲು ಕೆಲವರು ಯತ್ನಿಸುತ್ತಿದ್ದಾರೆ. ಪರಿಸ್ಥಿತಿ ದುರ್ಲಾಭ ಪಡೆಯಲು ಯತ್ನಿಸುವ ಇಂಥವರ ಮೇಲೆ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಟೊಮ್ಯಾಟೋ ಬೆಳೆ ನಷ್ಟವಾಗಬಾರದೆಂದು ಕೆಚಪ್ ಘಟಕಗಳ ಆರಂಭಕ್ಕೆ ಅನುಮತಿ‌ ನೀಡಲಾಗಿದೆ. ದ್ರಾಕ್ಷಿ ಹಾಳಾಗದಂತೆ ವೈನರಿ ಘಟಕಗಳ ಪುನಾರಂಭಕ್ಕೂ ತೀರ್ಮಾನಿಸಲಾಗಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿದರು.

ಒಕ್ಕಲಿಗ ಅಂದರೆ ರೈತರು ಬಿತ್ತುವುದನ್ನು ಬಿಟ್ಟರೆ ಜಗತ್ತು ದುಃಖಿಸಬೇಕಾಗುತ್ತದೆ. ಆದ್ಸರಿಂದ ಲಾಕ್ ಡೌನ್ ಇದ್ದರೂ ಕೃಷಿ‌ ಮತ್ತದರ ಅತ್ಯಗತ್ಯ ಪೂರಕ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ರೈತರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ದೈಹಿಕ ಅಂತರ ನಿರ್ವಹಣೆ ಮಾಡಬೇಕೆಂದು ಮನವಿ‌ ಮಾಡಿದರು.

ರಾಜ್ಯದಲ್ಲಿ ಬಿತ್ತನೆಬೀಜ – ಗೊಬ್ಬರದ ದಾಸ್ತಾನಿದೆ. ಮುಂಗಾರು ಹಂಗಾಮು ಚಟುವಟಿಕೆಯನ್ನು ನಿಶ್ಚಿಂತೆಯಿಂದ ಮಾಡಬಹುದು ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಜಿಲ್ಲಾಪಂಚಾಯತ್ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ನಿಸರ್ಗ ನಾರಾಯಣ ಸ್ವಾಮಿ ಶಾಸಕರು, ಶ್ರೀನಿವಾಸ ಶಾಸಕರು, ಶರತ್ ಬಚ್ಚೆಗೌಡ ಶಾಸಕರು,ಎಂಎಲ್ ಸಿ ದೇವೆಗೌಡ.ಜಿಲ್ಲಾ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು, ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಬಾಗಿ.

Facebook Comments

Sri Raghav

Admin