ಆನೆ ದಾಳಿಗೆ ಮಹಿಳೆ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಎಚ್.ಡಿ.ಕೋಟೆ,ಮಾ.21- ಬೆಳ್ಳಂಬೆಳಗ್ಗೆ ಒಂಟಿ ಸಲಗವೊಂದು ಮಹಿಳೆ ಮೇಲೆ ದಾಳಿ ಮಾಡಿದ್ದು, ಆಕೆ ಸಾವನ್ನಪ್ಪಿದ್ದಾರೆ. ತಾಲ್ಲೂಕಿನ ಕಲ್ಲಂಬಾಳ ಗ್ರಾಮದಲ್ಲಿ ತೀವ್ರ ಆತಂಕ ಎದುರಾಗಿದೆ. ಬೆಳಗ್ಗೆ 6.30ರ ಸಮಯದಲ್ಲಿ ಕಲ್ಲಂಬಾಳ ಗ್ರಾಮದ ಮಹದೇವಮ್ಮ (55) ತಮ್ಮ ಮನೆಯ ಹಿಂಭಾಗದಲ್ಲಿ ಒಲೆಗೆ ಸೌದೆ ಆರಿಸುತ್ತಿದ್ದಾಗ ಸಲಗ ಏಕಾಏಕಿ ದಾಳಿ ಮಾಡಿದೆ.

ಇದರಿಂದ ಆಕೆಗೆ ಗಂಭೀರ ಗಾಯಗಳಾಗಿದ್ದು, ಎಚ್.ಡಿ.ಕೋಟೆ, ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆತರುತ್ತಿದ್ದಾಗ ಆಕೆ ಮೃತಪಟ್ಟಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ಕಲ್ಲಂಬಾಳ ಗ್ರಾಮಕ್ಕೆ ತಹಸೀಲ್ದಾರ್ ಮಂಜುನಾಥ್, ಗ್ರಾಮಲೆಕ್ಕಿಗ ವೆಂಕಟೇಶ ಸರಗೂರು ಸಬ್‍ಇನ್‍ಸ್ಪೆಕ್ಟರ್, ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರಿಗೆ ಅಭಯ ನೀಡಿಹೋದರು.

ಮಹದೇವಮ್ಮ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಮೈಸೂರು ವಿಭಾಗದ ಎಸಿಎಫ್ ಪ್ರಶಾಂತ್ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.ಪರಿಹಾರಕ್ಕೆ ಆಗ್ರಹ: ಕಳೆದ 6 ತಿಂಗಳ ಹಿಂದೆ ಕಲ್ಲಂಬಾಳ ಗ್ರಾಮದಲ್ಲೇ ರಾಮಯ್ಯ ಎಂಬುವರ ಮೇಲೂ ಆನೆ ದಾಳಿ ಮಾಡಿತ್ತು. ಆಗ ಅವರ ಕಾಲು ಮುರಿದಿತ್ತು.

ಈ ತನಕ ಅವರಿಗೆ ಪರಿಹಾರ ನೀಡಿಲ್ಲ . ಇದೀಗ ಮಹಿಳೆ ಮಹದೇವಮ್ಮ ಮಾಲೂ ದಾಳಿಯಾಗಿದೆ. ಸರ್ಕಾರ ತಕ್ಷಣ ಇಬ್ಬರ ಕುಟುಂಬಗಳಿಗೂ ಪರಿಹಾರ ನೀಡಬೇಕೆಂದು ರೈತ ಸಂಘದ ಉಪಾಧ್ಯಕ್ಷ ಪಿ.ನಂಜುಂಡಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಶಾಸಕ ಅನಿಲ್ ಚಿಕ್ಕಮದು ಅವರಿಗೆ ವಿಷಯ ತಿಳಿಸಿದ್ದು, ಅವರು ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಶಾಸಕರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments