ಕಾಡಾನೆ ದಾಳಿ : ಭತ್ತ, ಕಾಫಿ, ಮೆಣಸು ನಾಶ

ಈ ಸುದ್ದಿಯನ್ನು ಶೇರ್ ಮಾಡಿ

ಬೇಲೂರು, ಫೆ.25- ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು , ಗ್ರಾಮಕ್ಕೆ ನುಗ್ಗಿದ ಕಾಡಾನೆಯೊಂದು ಮನೆಯ ಅಂಗಳದಲ್ಲಿದ್ದ ಭತ್ತ, ಕಾಫಿ, ಮೆಣಸು ಸೇರಿದಂತೆ ಹಲವು ವಸ್ತುಗಳನ್ನು ನಾಶ ಮಾಡಿರುವ ಘಟನೆ ತಾಲ್ಲೂಕಿನ ಮಲಸಾವರ ಗ್ರಾಮದಲ್ಲಿ ನಡೆದಿದೆ. ಗ್ರಾಮಕ್ಕೆ ಬೆಳ್ಳಂ ಬೆಳಗ್ಗೆ ನುಗ್ಗಿದ ಕಾಡಾನೆ ಪ್ರಸಾದ್ ಎಂಬುವರ ಮನೆಯಂಗಳದಲ್ಲಿ ದಾಸ್ತಾನು ಮಾಡಲಾಗಿದ್ದ ಭತ್ತದ ಚೀಲಗಳನ್ನು ಕಾಡಾನೆ ತಿಂದು ನಾಶ ಮಾಡಿದೆ.

ಆನೆಯ ದಾಂಧಲೆಯಿಂದ ಸಾಕು ನಾಯಿಗಳು ಗಾಬರಿಗೊಂಡು ಬೊಗಳಲು ಆರಂಭಿಸಿದ ಕೂಡಲೇ ಮನೆಯ ಮಾಲೀಕ ರಾಮ್ ಪ್ರಸಾದ್ ಮನೆಯಿಂದ ಹೊರಗೆ ಬಂದು ನೋಡಿದಾಗ ಆನೆ ಭತ್ತ, ಕಾಫಿ ಹಾಗೂ ಮೆಣಸಿನ ಚೀಲಗಳನ್ನು ಮನಸೋ ಇಚ್ಛೆ ಎಸೆಯುತ್ತಿರುವುದನ್ನು ಗಮನಿಸಿದ್ದು, ಕೂಡಲೇ ಗಲಾಟೆ ಮಾಡಿದಾಗ ಕಾಡಾನೆ ಕಾಡಿನತ್ತ ಕಾಲ್ಕಿತ್ತಿದೆ. ಇದರಿಂದ ಪ್ರಸಾದ್ ಎಂಬುವರಿಗೆ ಅಪಾರ ನಷ್ಟವಾಗಿದ್ದು , ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ರೈತರು ಹಾಗೂ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಇಲಾಖೆಯ ಅಧಿಕಾರಿ ಗಳು ಆನೆಗಳನ್ನು ಓಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಗುಡಗಿಹಳ್ಳಿ ಅರಣ್ಯ ಪ್ರದೇಶದಲ್ಲಿ 13ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು , ಆಗಾಗ್ಗೆ ಗ್ರಾಮಗಳತ್ತ ಲಗ್ಗೆ ಇಡುತ್ತಿದ್ದು , ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ ಎಂದು ರೈತರು ದೂರಿದ್ದಾರೆ. ಉಪ ಅರಣ್ಯ ಸಂರಕ್ಷಣಾ ಧಿಕಾರಿ ಗುರು ರಾಜ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Facebook Comments