ಗೌರಿ ದರ್ಶನಕ್ಕೆ ಹಾತೊರೆಯುತ್ತಿರುವ ಭಕ್ತರು..!

ಈ ಸುದ್ದಿಯನ್ನು ಶೇರ್ ಮಾಡಿ

ನಂಜನಗೂಡು, ಏ.30- ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಆನೆ (ಗೌರಿ)ಯು ಕಾಲಿನ ಚಿಕಿತ್ಸೆಗೆ ಹೋಗಿರುವುದರಿಂದ ಭಕ್ತರು ಗೌರಿಯ ದರ್ಶನಕ್ಕೆ ಹಾತೊರೆಯುತ್ತಿರುವುದು ಕಂಡು ಬಂದಿದೆ.

ಕಳೆದ ಒಂದು ವರ್ಷದ ಹಿಂದೆ ಕೋಲಾರ ಜಿಲ್ಲೆಯ ಮಾಲೂರಿನ ಡಬ್ಲು ಆರ್‍ಸಿಎನ್‍ಜಿಒ ಸಂಸ್ಥೆಗೆ ಕಾಲಿನ ಚಿಕಿತ್ಸೆಗಾಗಿ ಕಳುಹಿಸಿ ಕೊಡ ಲಾಗಿತ್ತು. ಅಂದಿನಿಂದ ಇಲ್ಲಿಯವರೆವಿಗೂ ಗೌರಿ ಆನೆಯ ದರ್ಶನವಿಲ್ಲದೇ ಭಕ್ತಾದಿಗಳಿಗೆ ಮತ್ತು ಸ್ಥಳೀಯರಿಗೆ ತೀವ್ರ ನಿರಾಸೆ ಉಂಟಾಗಿದೆ.

ಪ್ರತಿ ದಿನ ಗೌರಿ ಆನೆಯು ಶ್ರೀಕಂಠೇಶ್ವರ ಸ್ವಾಮಿಯವರ ಅಭಿಷೇಕಕ್ಕೆ ಕಪಿಲಾ ನದಿಯಿಂದ ಪವಿತ್ರ ತೀರ್ಥವನ್ನು ತರುವುದು ಹಾಗೂ ಹಬ್ಬ ಹರಿದಿನಗಳಲ್ಲಿ, ಶ್ರೀಯವರ ಉತ್ಸವ ಮೂರ್ತಿಯ ಮೆರೆವಣಿಗೆಯಲ್ಲಿ ಭಾಗವಹಿಸುವುದು.

ಅಲ್ಲದೆ ಯಾತ್ರಾರ್ಥಿಗಳ ಮನರಂಜನೆಗಾಗಿ, ಬೇಸಿಗೆ ರಜಾ ದಿನಗಳಲ್ಲಿ ಮಕ್ಕಳು ಮತ್ತು ಭಕ್ತಾದಿಗಳಿಗೆ ಇಷ್ಟ ಪಡುವ ಭಾವಚಿತ್ರಕ್ಕೆ ಹಾಗೂ ಇನ್ನಿತರೆ ಧಾರ್ಮಿಕ ಕೆಲಸಗಳಲ್ಲಿ ಭಾಗವಹಿಸುತ್ತಿದ್ದು , ದೇವಸ್ಥಾನದ ಇತರೆ ಕೆಲಸ ಕಾರ್ಯಗಳಲ್ಲಿ ಇದು ಒಂದು ಭಾಗವಾಗಿತ್ತು.

ಒಂದು ವರ್ಷದ ಹಿಂದೆ ಸಣ್ಣದಾಗಿ ಕಾಲಿಗೆ ಗಾಯವಾಗಿದ್ದರೂ ತನ್ನ ಪಾಲಿನ ಕೆಲಸವನ್ನು ಮಾಡುತ್ತಾ ಸ್ಥಳೀಯ ಅರಣ್ಯ ಇಲಾಖೆಯ ವೈದ್ಯರಿಂದ , ಪಶು ವೈದ್ಯರುಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿತ್ತು. ಗಾಯ ವಾಸಿಯಾಗದೇ ಗೌರಿಯು ಕೊರಗು ತ್ತಿರುವ ಹಿನ್ನೆಲೆಯಲ್ಲಿ ವೈದ್ಯರುಗಳ ಸಲಹೆ ಮೇರೆಗೆ ಕೋಲಾರ ಜಿಲ್ಲೆಯ ಮಾಲೂರಿನ ಆನೆ ಶಿಬಿರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

ಇನ್ನೆರೆಡು ತಿಂಗಳ ಕಾಲ ಚಿಕಿತ್ಸೆ ಮುಂದುವರೆ ಯಲಿದ್ದು ತದ ನಂತರ ದೇವಸ್ಥಾನಕ್ಕೆ ಗೌರಿಯ ಆಗಮನವಾಗಲಿದೆ ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಕುಮಾರಸ್ವಾಮಿ ಯವರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಆನೆಯ ಶೆಡ್ ಖಾಲಿಯಿದ್ದು, ಯಾತ್ರಾರ್ಥಿಗಳು, ಶಾಲಾ ಮಕ್ಕಳು, ಭಕ್ತರು ಆನೆಯ ಖಾಲಿ ಸ್ಥಳವನ್ನು ವೀಕ್ಷಿಸಿ ನಿರಾಸೆಯಿಂದ ಹಿಂತಿರುಗು ತ್ತಿರುವುದು ಕಂಡು ಬಂದಿದೆ.  ಈ ಬಗ್ಗೆ ಸರ್ಕಾರದ ಮುಜರಾಯಿ ಇಲಾಖೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಆಡಳಿತ ಅಧಿಕಾರಿಗಳು ಆದಷ್ಟೂ ಬೇಗ ಮರಳಿ ಗೌರಿಯನ್ನು ದೇವಸ್ಥಾನಕ್ಕೆ ಕರೆ ತರಲು ಭಕ್ತರು ಒತ್ತಾಯಿಸಿದ್ದಾರೆ.

Facebook Comments