ಕುಕ್ಕೆ ದೇವಸ್ಥಾನದ ಆನೆ ಯಶಸ್ವಿನಿ ಆರೋಗ್ಯದಲ್ಲಿ ಏರುಪೇರು

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಆ.16- ದಕ್ಷಿಣ ಭಾರತದ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಯಶಸ್ವಿನಿ ಆರೋಗ್ಯ ಏರುಪೇರಾಗಿದೆ.ಆನೆ ಯಶಸ್ವಿನಿಗೆ ಭೇದಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆನೆ ಕ್ಯಾಂಪ್ ದುಬಾರೆಯಿಂದ ವೈದ್ಯರ ತಂಡ ಸುಬ್ರಹ್ಮಣ್ಯಕ್ಕೆ ಆಗಮಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಆನೆಯ ಆರೋಗ್ಯದ ಕುರಿತು ದೇವಸ್ಥಾನ ಕಾಳಜಿ ವಹಿಸಿದ್ದು, ಪ್ರತಿನಿತ್ಯ ಆನೆಯ ಆರೋಗ್ಯದ ಕಡೆಗೆ ನಿಗಾ ವಹಿಸಿದ್ದಾರೆ. ಈ ನಡುವೆ ಸುಳ್ಯ ಶಾಸಕ ಎಸ್.ಅಂಗಾರ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ಆನೆಯ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ.

ಹದಿನೈದು ವರ್ಷಗಳ ಹಿಂದೆ ಶಾಸಕ ಆನಂದ್ ಸಿಂಗ್ ಆನೆಯನ್ನು ದೇವಸ್ಥಾನಕ್ಕೆ ನೀಡಿದ್ದರು. ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಅಚ್ಚುಮೆಚ್ಚಿನ ಆನೆಯಾಗಿಯೂ ಗುರುತಿಸಿಕೊಂಡಿದ್ದ ಯಶಸ್ವಿನಿ ಕಳೆದೆರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದೆ. ದೇವಳದ ಆನೆ ಯಶಸ್ವಿನಿ ಶೀಘ್ರ ಗುಣಮುಖವಾಗಲೆಂದು ಪ್ರಾರ್ಥಿಸಿ ಭಕ್ತರೊಬ್ಬರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉರುಳು ಸೇವೆ ನಡೆಸಿರುವುದು ವಿಶೇಷವಾಗಿದೆ.

ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಕ್ಷೇತ್ರ ಶ್ರೀ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ 22 ವರ್ಷಗಳಿಂದ ಸೇವೆಯಲ್ಲಿದ್ದ ಆನೆ ಇಂದಿರಾ ಇತ್ತೀಚೆಗೆ ಅಸುನೀಗಿದ ಘಟನೆ ಮಾಸುವ ಮುನ್ನ ಕುಕ್ಕೆಯ ಆನೆಯ ಅನಾರೋಗ್ಯಕ್ಕೀಡಾಗಿರುವುದು ಭಕ್ತರಲ್ಲಿ ಒಂದು ರೀತಿಯ ಆತಂಕ ಮನೆ ಮಾಡಿದೆ.

Facebook Comments