ಆನೆದಂತ ಮಾರಾಟಕ್ಕೆ ಹೊಂಚು, ಇಬ್ಬರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.11- ಗೋಣಿಚೀಲದೊಳಗೆ ಆನೆದಂತ ಇಟ್ಟುಕೊಂಡು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ತಮಿಳುನಾಡು ಮೂಲದ ಇಬ್ಬರನ್ನು ಆರ್‍ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಸೌಂದರ್‍ಪಾಂಡ್ಯನ್ (44) ಮತ್ತು ಕೊಯಮತ್ತೂರಿನ ಕಂದನ್ (40) ಬಂಧಿತ ಆರೋಪಿಗಳಾಗಿದ್ದು, ಇವರಿಂದ 2 ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ.

ಆರ್‍ಎಂಸಿ ಯಾರ್ಡ್ ವ್ಯಾಪ್ತಿಯ ಮಾರಪ್ಪನಪಾಳ್ಯ, ಉಲ್ಲಾಸ್ ಚಿತ್ರಮಂದಿರ ಮುಂಭಾಗದ ರಸ್ತೆಯಲ್ಲಿ ಇಬ್ಬರು ಆನೆದಂತಗಳನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾರೆಂಬ ಮಾಹಿತಿ ಇಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಪಿಎಸ್‍ಐ ಸಾದಿಕ್ ಹಾಗೂ ಸಿಬ್ಬಂದಿಗೆ ದೊರೆತಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ಆನೆ ದಂತಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಪ್ರೇಮ್‍ನಾಥ್ ಎಂಬುವವರು ತಮಗೆ ಮಾರಾಟ ಮಾಡಲು ಆನೆದಂತಗಳನ್ನು ತಂದುಕೊಡುತ್ತಿದ್ದುದಾಗಿ ಒಪ್ಪಿಕೊಂಡಿದ್ದು, ಪ್ರೇಮ್‍ನಾಥ್ ಬಂಧನಕ್ಕಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಯಶವಂತಪುರ ಉಪವಿಭಾಗದ ಎಸಿಪಿ ಶ್ರೀನಿವಾಸ್‍ರೆಡ್ಡಿ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಮಹೇಂದ್ರಕುಮಾರ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

Facebook Comments