ಒಂಟಿಸಲಗಕ್ಕೆ ಸಿಕ್ಕಿ ಯುವಕ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಕನಕಪುರ,ಡಿ.25- ಇಂದು ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ಯುವಕನಿಗೆ ಒಂಟಿ ಸಲಗವೊಂದು ಎದುರಾಗಿ ಸೊಂಡಿಲಿನಿಂದ ಹೊಡೆದು ತುಳಿದು ಸಾಯಿಸಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕನಕಪುರ ಕೋಡಿಹಳ್ಳಿ ಮುಖ್ಯರಸ್ತೆ ಸಮೀಪದ ಬೇಕುಪ್ಪೆ ಗ್ರಾಮದ ಹೊಂಬೇಗೌಡ ಎಂಬುವರ ಮಗ ಚೇತನ್‍ಕುಮಾರ್(21) ಮೃತಪಟ್ಟ ದುರ್ದೈವಿ.

ಇಂದು ಮುಂಜಾನೆ 5.30ರ ಸುಮಾರಿನಲ್ಲಿ ಅಂಕಚಾರಿದೊಡ್ಡಿಯ ಇಬ್ಬರು ಸ್ನೇಹಿತರೊಂದಿಗೆ ಚೇತನ್‍ಕುಮಾರ್ ಸಹ ವಾಯುವಿಹಾರಕ್ಕೆ ತೆರಳಿದ್ದರು. ಕನಕಪುರ-ಕೋಡಿಹಳ್ಳಿ ಮುಖ್ಯರಸ್ತೆಯ ನಾರಾಯಣಪುರ ಗ್ರಾಮ-ಅಂಕಚಾರಿ ದೊಡ್ಡಿ ಬಳಿ ಹೋಗುತ್ತಿದ್ದಾಗ ಇಬ್ಬರು ಸ್ನೇಹಿತರು ಸ್ವಲ್ಪ ಮುಂದೆ ಹೋಗಿದ್ದರು.

ಚೇತನ್‍ಕುಮಾರ್ ಹಿಂದೆ ಉಳಿದುಕೊಂಡಿದ್ದಾಗ ಏಕಾಏಕಿ ಒಂಟಿ ಸಲಗ ಎದುರಾಗಿದೆ. ತಕ್ಷಣ ಭಯಭೀತನಾದ ಚೇತನ್ ಸಹಾಯಕ್ಕಾಗಿ ಕೂಗಿಕೊಳ್ಳುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ಸಫಲವಾಗದೆ ಆನೆಗೆ ಸಿಕ್ಕಿ ಸಾವನ್ನಪ್ಪಿದ್ದಾನೆ.ಕಿರುಚಾಟ ಕೇಳಿದ ಸ್ನೇಹಿತರು ಈತನ ಬಳಿಗೆ ಬರುವಷ್ಟರಲ್ಲಿ ಚೇತನ್ ಪ್ರಾಣಪಕ್ಷಿ ಹಾರಿಹೋಗಿತ್ತು.

ರಸ್ತೆ ತಡೆ: ಸುದ್ದಿ ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆಗೆ ಮುಂದಾದರು. ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯಪ್ರದೇಶಕ್ಕೆ ಸೇರುವ ಬೆಟ್ಟಹಳ್ಳಿ ಕಾಡು ಮೂಲಕ ಆನೆಗಳು ನಾಡಿಗೆ ಧಾವಿಸುತ್ತ ಬೆಳೆ ಹಾನಿ ಮಾಡುತ್ತಿರುವುದಲ್ಲದೆ ಸಾವುನೋವುಗಳು ಸಂಭವಿಸುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.

ಇಂದಿನ ಘಟನೆ ಮೊದಲನೆಯದಲ್ಲ ಈಗಾಗಲೇ ನಾಲ್ವರು ಸಾವನ್ನಪ್ಪಿದ್ದಾರೆ. ಈ ಭಾಗದ ಅರಣ್ಯ ಇಲಾಖೆ ಕಾಡು ಪ್ರಾಣಿಗಳು ಗ್ರಾಮದೊಳಗೆ ಬರದಂತೆ ತಡೆಯಲು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ರಸ್ತೆ ಮಧ್ಯೆಯೇ ಕುಳಿತು ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದ ಎಎಸ್‍ಪಿ ರಾಮರಾಜನ್, ಸರ್ಕಲ್ ಇನ್‍ಸ್ಪೆಕ್ಟರ್ ಪ್ರಕಾಶ್, ಗ್ರಾಮಾಂತರ ಪೊಲೀಸರು, ಡಿಎಫ್‍ಒ ಸದಾಶಿವಯ್ಯ ಎನ್.ಹೆಗಡೆ, ಡಿಆರ್‍ಎಫ್ ದೇವರಾಜ್ ಮತ್ತು ಅರಣ್ಯ ಸಿಬ್ಬಂದಿ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಸರ್ಕಾರದಿಂದ ಹಾಗೂ ಅರಣ್ಯ ಇಲಾಖೆ ವತಿಯಿಂದ ದೊರೆಯಬಹುದಾದಂತಹ ಸೂಕ್ತ ಪರಿಹಾರವನ್ನು ಮೃತನ ಕುಟುಂಬಕ್ಕೆ ಕೊಡಿಸುವುದಾಗಿ ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯಲು ಮನವೊಲಿಸಿದರು. ಅರಣ್ಯ ಇಲಾಖೆ ಹಾಗೂ ಪೊಲೀಸರ ಭರವಸೆ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

Facebook Comments